ಕಲಬುರಗಿ ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬೇಡಿಕೆಗಳಿಗಾಗಿ ಧರಣಿ–ಸತ್ಯಾಗ್ರಹ
ಕಲಬುರಗಿ ಸರ್ಕಾರಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬೇಡಿಕೆಗಳಿಗಾಗಿ ಧರಣಿ–ಸತ್ಯಾಗ್ರಹ
ಕಲಬುರಗಿ,:ಕಲಬುರಗಿ ಜಿಲ್ಲೆಯ ಸರಕಾರಿ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಕಳೆದ ಎರಡು ತಿಂಗಳಿನಿಂದ ತಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಲವು ಬಾರಿ ಹೋರಾಟ ನಡೆಸಿದರೂ, ಸಮಸ್ಯೆಗಳು ಬಗೆಹರಿಯದೇ ಉಳಿದಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ–ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಿದರು.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕ್ರೈಸ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಮೈಸೂರು ಮೂಲದ ಶಾರ್ಪ್ ಎಜೆನ್ಸಿ ಮೂಲಕ ವೇತನ ಪಾವತಿಸಲಾಗುತ್ತಿದ್ದು, ಸಮಯಕ್ಕೆ ಸರಿಯಾಗಿ ವೇತನ ನೀಡದಿರುವುದು, ಕಡಿಮೆ ವೇತನ, ಇಪಿಎಫ್–ಇಎಸ್‌ಐ ಹಣ ಜಮಾ ಮಾಡದೇ ಮೋಸ ಮಾಡುತ್ತಿರುವುದು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ.
ಬೀದರ ಜಿಲ್ಲೆಯಲ್ಲಿ ಅಧಿಕಾರಿಗಳ ಮುಂದಾಳತ್ವದಲ್ಲಿ ಸಹಕಾರಿ ಸಂಘದ ರಚನೆ ಪ್ರಕ್ರಿಯೆ ಯಶಸ್ವಿಯಾಗಿ ಆರಂಭವಾಗಿದ್ದರೂ, ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಈ ಪ್ರಕ್ರಿಯೆ ಆರಂಭಿಸದಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಇಡೀ ರಾಜ್ಯದಲ್ಲಿ ಮೊಟ್ಟಮೊದಲು ಕಲಬುರಗಿಯ ಹೊರಗುತ್ತಿಗೆ ನೌಕರರು ಶೋಷಣೆಯ ವಿರುದ್ಧ ಹೋರಾಟ ಆರಂಭಿಸಿದರೂ, ಅಧಿಕಾರಿಗಳಿಂದ ನೀಡಲಾದ ಭರವಸೆಗಳು ಕೇವಲ ಮಾತಿನಲ್ಲೇ ಉಳಿದಿರುವುದಾಗಿ ಆರೋಪಿಸಿದರು.
ಮಮತಾ ಬೇಗಂ ಪಾಸಿಂಲ ಪ್ರಕರಣ:
ಮೋರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿದ್ದ ಮಮತಾ ಬೇಗಂ ಪಾಸಿಂಲ ಅವರ ಇಎಸ್‌ಐ ಮೊತ್ತವನ್ನು ಸಂಸ್ಥೆಯವರು ಜಮಾ ಮಾಡದಿದ್ದ ಕಾರಣ, ಅವರ ತಂದೆ ಅನಾರೋಗ್ಯಕ್ಕೆ ಒಳಗಾಗಿ ಸರಿಯಾದ ಚಿಕಿತ್ಸೆ ದೊರೆಯದೇ ಮೃತಪಟ್ಟ ಘಟನೆಗೆ ಗಂಭೀರ ಪ್ರತಿಕ್ರಿಯೆ ವ್ಯಕ್ತವಾಯಿತು.
ಈ ಕುರಿತು ಪಾಸಿಂಲ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಹೊರಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳು:
* ಸಮಯಕ್ಕೆ ಸರಿಯಾದ ಪೂರ್ಣ ವೇತನ ಪಾವತಿ
* ಇಪಿಎಫ್–ಇಎಸ್‌ಐ ಮೊತ್ತಗಳನ್ನು ನಿಯಮಾನುಸಾರ ಜಮಾ ಮಾಡುವುದು
* ಬೀದರ ಮಾದರಿಯಲ್ಲಿ ಸಹಕಾರಿ ಸಂಘ ರಚನೆ ಪ್ರಕ್ರಿಯೆ ತಕ್ಷಣ ಪ್ರಾರಂಭಿಸುವುದು
* ಭ್ರಷ್ಟಾಚಾರ ಮತ್ತು ಏಜೆನ್ಸಿಗಳ ಶೋಷಣೆಗೆ ತಡೆ
ಈ ಎಲ್ಲ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದು, ಬೇಡಿಕೆಗಳಿಗೆ ತ್ವರಿತ ನ್ಯಾಯ ಒದಗಿಸಲಾಗಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
