ಶ್ರೀ ದೇವರ ದಾಸಿಮಯ್ಯ 1047ನೇ ಜಯಂತೋತ್ಸವ : ಪದಾಧಿಕಾರಿಗಳ ಆಯ್ಕೆ, ಸಮಿತಿಗಳ ರಚನೆ
ಶ್ರೀ ದೇವರ ದಾಸಿಮಯ್ಯ 1047ನೇ ಜಯಂತೋತ್ಸವ : ಪದಾಧಿಕಾರಿಗಳ ಆಯ್ಕೆ, ಸಮಿತಿಗಳ ರಚನೆ
ಕಲಬುರಗಿ: 11ನೇ ಶತಮಾನದ ಆದ್ಯ ವಚನಕಾರರಾದ ಶ್ರೀ ದೇವರ ದಾಸಿಮಯ್ಯನವರ 1047ನೇ ಜಯಂತೋತ್ಸವದ ಅಂಗವಾಗಿ ಮಾರ್ಚ್ 23ರಂದು ನಡೆಯಲಿರುವ ಮಹೋತ್ಸವದ ಸಿದ್ಧತೆ ಕುರಿತು ಪೂರ್ವಭಾವಿ ಸಭೆ ಇಂದು ಸಂಜೆ 5 ರಿಂದ 7 ಗಂಟೆಯವರೆಗೆ ಪಬ್ಲಿಕ್ ಗಾರ್ಡನ್‌ನ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಶ್ರೀ ದೇವರ ದಾಸಿಮಯ್ಯ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಶಾಂತಕುಮಾರ ಆರ್. ಯಳಸಂಗಿ ಅವರ ಅಧ್ಯಕ್ಷತೆಯಲ್ಲಿ ಸಭೆ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ 2026ನೇ ಸಾಲಿನ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ, ವಿವಿಧ ಉಪಸಮಿತಿಗಳ ರಚನೆ ಹಾಗೂ ಜವಾಬ್ದಾರಿಗಳ ಹಂಚಿಕೆ ಕುರಿತು ವಿಶ್ಲೇಷಣಾತ್ಮಕವಾಗಿ ಚರ್ಚಿಸಲಾಯಿತು. ಜಯಂತೋತ್ಸವದ ಸಾಧಕ-ಬಾಧಕಗಳ ಕುರಿತು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಭೆಗೆ ಆರಂಭದಲ್ಲಿ 2026ನೇ ಸಾಲಿನ ಶ್ರೀ ದೇವರ ದಾಸಿಮಯ್ಯ ಜಯಂತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಶಾಲ ಯಡವಳ್ಳಿ ಸ್ವಾಗತಿಸಿದರು. ನೇಕಾರ ಒಕ್ಕೂಟದ ಕಾರ್ಯದರ್ಶಿ ಹಾಗೂ ಉತ್ಸವ ಸಮಿತಿಯ ಅಧ್ಯಕ್ಷರಾದ ಶಾಂತಕುಮಾರ ಪ್ರಸ್ತಾವನೆ ಮಂಡಿಸಿದರು. ನೇಕಾರ ಸಮಾಜದ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕ ರಚಿಸಲು ತೀರ್ಮಾನಿಸಲಾಯಿತು. ಖಜಾಂಚಿಯಾಗಿ ಸತೀಶ್ ಕುಮಾರ ಜಮಖಂಡಿ ಆಯ್ಕೆಗೊಂಡರು. ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನ್ಯಾಯವಾದಿ ಜೇ. ವಿನೋದಕುಮಾರ ಅವರನ್ನು ಸರ್ವಾನುಮತದಿಂದ ಮರುಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು. ನಿಕಟ ಪೂರ್ವ ಅಧ್ಯಕ್ಷರಾದ ನಾರಾಯಣರಾವ ಸಿಂಗಾಡೆ ಗೌರವ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ವಿವಿಧ ಸಮಾಜಗಳ ಗೌರವ ಅಧ್ಯಕ್ಷರು ಮಾರ್ಗದರ್ಶನ ಸಮಿತಿಗೆ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ನಾಗರಾಜ ಕುಸಮಾ, ಮಡಿವಾಳಪ್ಪ ಹತ್ತೂರೆ, ರೇವಣಸಿದ್ಧಪ್ಪ ಗಡ್ಡದ, ದಾಸಿಮಯ್ಯ ವಡ್ಡನಕೇರಿ, ವೆಂಕಟೇಶ್ ಬಲಪೂರ, ಶರವಣಕುಮಾರ ಮುನ್ನೊಳ್ಳಿ, ಪ್ರದೀಪ್ ಸಂಗಾ, ಚಂದ್ರಶೇಖರ ಮ್ಯಾಳಗಿ, ರುದ್ರಪ್ಪ ಗಂಜಿ, ಬೇಲಿ ಪರವತಪ್ಪ ಸೇರಿದಂತೆ ಅನೇಕ ಯುವಕರು ಹಾಗೂ ಮಹಿಳಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕೊನೆಯಲ್ಲಿ ಡಾ. ಬಸವರಾಜ್ ಚನ್ನಾ ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನೆ ಸಲ್ಲಿಸಿದರು.
