ವಿಜಯಪುರ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಭೀಕರ ದೌರ್ಜನ್ಯ ನಡೆಸಿದ ಹಲ್ಲೆಕೋರರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ
ವಿಜಯಪುರ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಭೀಕರ ದೌರ್ಜನ್ಯ ನಡೆಸಿದ ಹಲ್ಲೆಕೋರರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ
ಕಲಬುರಗಿ: ವಿಜಯಪುರದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಭಡ ದಲಿತ ಕಾರ್ಮಿಕನೋರ್ವ ಕೆಲಸ ನಿರಾಕರಿಸದನೆಂದು ಆತನ ಮೇಲೆ ಅಮಾನುಷವಾಗಿ ಭೀಕರ ಹಲ್ಲೆ ನಡೆಸಿದ ಘಟನೆಯನ್ನು ಮಾದಿಗ ಸಮಾಜದ ಯುವ ಮುಖಂಡ ಆನಂದ ತೆಗನೂರ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲ್ಲೆ ನಡೆಸಿದ ಇಟ್ಟಿಗೆ ಭಟ್ಟಿ ಮಾಲೀಕ, ಆತನ ಮಗ ಹಾಗೂ ಇತರ ಆರೋಪಿಗಳಿಗೆ ಯಾವುದೇ ರೀತಿಯ ಜಾಮೀನು ಸಿಗದಂತೆ ಕಠಿಣ ಕಾನೂನು ಶಿಕ್ಷೆಯನ್ನು ನೀಡಬೇಕು. ಈ ದುರುಳರಿಗೆ ನೀಡುವ ಶಿಕ್ಷೆಯು ಮುಂದೆ ಯಾರೂ ಕೂಡ ಇಂತಹ ದುಷ್ಕೃತ್ಯವೆಸಗುವವರಿಗೆ ಎಚ್ಚರಿಕೆಯ ಪಾಠವಾಗಬೇಕು ಎಂದಿದ್ದಾರೆ.
ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರನ್ನೊಳಗಂಡಂತೆ ಬಡಜನರು, ಕೆಲಸದ ಸ್ಥಳದಲ್ಲಿ ವಾಸಿಸುತ್ತಿರುತ್ತಾರೆ. ಅವರಿಗೆ ಸಮರ್ಪಕ ವಸತಿ, ಶೌಚಾಲಯ ಸೇರಿದಂತೆ ಕನಿಷ್ಠ ಅಗತ್ಯ ಸೌಲಭ್ಯಗಳೂ ಕೂಡ ಲಭ್ಯವಿಲ್ಲ. ಅಲ್ಲದೇ ಯಾವುದೇ ಕಾರ್ಮಿಕ ಕಾನೂನುಗಳ ಕನಿಷ್ಠ ಭದ್ರತೆ ಹಾಗೂ ರಕ್ಷಣೆಯಿಲ್ಲದೇ ದುಡಿಯುತ್ತಿದ್ದಾರೆ.ಅತ್ಯಂತ ಕಡಿಮೆ ಕೂಲಿಗೆ ದುಡಿಯುವ ಬಡಜನರು ಮಾನಸಿಕ, ದೈಹಿಕ ಶೋಷಣೆಗೊಳಗಾಗುತ್ತಿದ್ದರೂ ಬದುಕಿನ ಅನಿವಾರ್ಯತೆಗಾಗಿ ಭಯದ ವಾತಾವರಣದಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ರಾಜ್ಯ ಸರಕಾರ ರಾಜ್ಯದಲ್ಲಿ ಈ ರೀತಿಯಾಗಿ ಇಟ್ಟಿಗೆ ಭಟ್ಟಿ ಸೇರಿದಂತೆ ಇತರೆ ವಲಯಗಳಲ್ಲಿ ದುಡಿಯುತ್ತಿರುವ ಬಡ ಕಾರ್ಮಿಕರಿಗೆ ಕಾರ್ಮಿಕ ಕಾನೂನು ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಭದ್ರತೆ ಹಾಗೂ ರಕ್ಷಣೆಯನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಇಟ್ಟಿಗೆ ಗೂಡಿನಲ್ಲಿ ಹಲ್ಲೆಗೊಳಗಾದ ಬಡ ಕಾರ್ಮಿಕನಿಗೆ ವೈದ್ಯಕೀಯ ಸವಲತ್ತುಗಳನ್ನು ಉಚಿತವಾಗಿ ಒದಗಿಸಬೇಕು. ಆತನ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸುವ ಜೊತೆಯಲ್ಲಿ ಸಂತ್ರಸ್ತ ಕಾರ್ಮಿಕನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ರಾಜ್ಯ ಸರಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.