ತಿಂಗಳ ಕಾಲ ಕಾರ್ಮಿಕರ ಅಭಿಯಾನ
6 ತಿಂಗಳ ಕಾಲ ಕಾರ್ಮಿಕರ ದಾಖಲಾತಿ ಅಭಿಯಾನ: ಪಿ.ಎಫ್ ಯೋಜನೆಗೆ ಇದೂವರೆಗೆ ಒಳಗಾದವರಿಗೆ ಸುವರ್ಣಾವಕಾಶ -ಎಂ.ಸುಬ್ರಮಣ್ಯಮ್
ಕಲಬುರಗಿ,ನ.12(ಕರ್ನಾಟಕ ವಾರ್ತೆ) ಇ.ಪಿ.ಎಫ್ ವ್ಯಾಪ್ತಿಯಿಂದ ಹೊರಗುಳಿದ ಅರ್ಹ ಉದ್ಯೋಗಿಗಳನ್ನು ಸ್ವಯಂಪ್ರೇರಣೆಯಿಂದ ದಾಖಲಿಸಲು ಉತ್ತೇಜಿಸಲು ಮತ್ತು ಅರ್ಹ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಇದೇ ನವೆಂಬರ್ 1 ರಿಂದ 2026ರ ಏಪ್ರಿಲ್ 30ರ ವರೆಗೆ 6 ತಿಂಗಳ ಕಾಲ ಉದ್ಯೋಗದಾತರು ಕಾರ್ಮಿಕರನ್ನು ನೊಂದಾಯಿಸಲು ಸುವರ್ಣಾವಕಾಶ ಕಲ್ಪಿಸಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಾಮಾನ್ಯ ಭವಿಷ್ಯ ನಿಧಿ ಕಚೇರಿಯ ಕಲಬುರಗಿ ಪ್ರಾಂತೀಯ ಆಯುಕ್ತ ಎಂ.ಸುಬ್ರಮಣ್ಯಮ್ ಹೇಳಿದರು.
ಬುಧವಾರ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರ ಜುಲೈ 1 ರಿಂದ 2025ರ ಅಕ್ಟೋಬರ್ 31ರ ವರೆಗೆ ಕೆಲಸಕ್ಕೆ ಸೇರಿದ ಕಾರ್ಮಿಕರನ್ನು ಪಿ.ಎಫ್. ವ್ಯಾಪ್ತಿಗೆ ಸೇರಿಸದ ಪ್ರಕರಣಗಳಲ್ಲಿ (ನೌಕರರ ವಂತಿಗೆ ಪಡೆಯದ) ಅಂತಹ ನೌಕರರನ್ನು ಇ.ಪಿ.ಎಫ್.ಓ. ಕಚೇರಿಯಲ್ಲಿ ನೊಂದಾಯಿತ ಉದ್ಯೋಗದಾತರು ಈ 6 ತಿಂಗಳ ಕಾಲದ ವಿಶೇಷ ದಾಖಲಾತಿ ಅಭಿಯಾನದಲ್ಲಿ ಕೇವಲ 100 ರೂ. ದಂಡ ಪಾವತಿ ಮತ್ತು ಸಂಸ್ಥೆ ಪಾಲಿನ ಹಣ ಭರಿಸಿ ನೋಂದಾಯಿಸಬಹುದಾಗಿದೆ. ನೌಕರರನ್ನು ಸಾಮಾಜಿಕ ಭದ್ರತೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಕಂಪನಿಗಳಿಗೆ ಯಾವುದೇ ಹೆಚ್ಚಿನ ದಂಡ ಶುಲ್ಕ ವಿಧಿಸುತ್ತಿಲ್ಲ. ಕಂಪನಿಗಳು ಇದರ ಲಾಭ ಪಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ, ಬೀದರ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಬಹುತೇಕ ಕಂಪನಿಗಳು ತಮ್ಮಲ್ಲಿನ ನೌಕರರನ್ನು ಪಿ.ಎಫ್. ವ್ಯಾಪ್ತಿಗೆ ಒಳಪಡಿಸಿರುವುದಿಲ್ಲ. ಇದರಿಂದ ನೌಕರರಿಗೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರ್ಹರಿಗೆ ಕಾರ್ಮಿಕ ಸೌಲಭ್ಯ ದೊಕಿಸಲು ಉದ್ಯೋಗದಾತರು ಹೆಚ್ಚು ಮತುವರ್ಜಿ ವಹಿಸಿ ನೊಂದಣಿ ಅಭಿಯಾನ ಯಶಸ್ವಿಗೊಳಿಸಬೇಕು. ಇನ್ನು ಕೇಂದ್ರ ಸರ್ಕಾರ ಕಾರ್ಮಿಕ ವರ್ಗಕ್ಕೆ ಹತ್ತಾರು ಯೋಜನೆಗಳು ಜಾರಿಗೊಳಿಸುತ್ತಿದ್ದು, ಇದರ ಲಾಭ ಪಡೆಯಲು ಇ.ಪಿ.ಎಫ್.ಓ. ಕಚೇರಿಯಲ್ಲಿ ನೊಂದಾಯಿತ ಪ್ರತಿಯೊಂದು ಸಂಸ್ಥೆ ತಮ್ಮ ಕಂಪನಿ ವಿವರಗಳನ್ನು ನಮೂನೆ-5ರಲ್ಲಿ ಅಪಡೇಟ್ ಮಾಡಬೇಕು ಎಂದರು.
*ಪಿ.ಎಂ.ವಿಕ್ಸಿತ್ ಭಾರತ್ ಯೋಜನೆ ಲಾಭ ಪಡೆಯಲು ಮನವಿ:*
ಕೇಂದ್ರ ಸರ್ಕಾರವು ಶ್ರಮಿಕ ವರ್ಗ ಮತ್ತು ಉದ್ಯೋಗ ನೀಡುವ ಕಂಪನಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಿ.ಎಂ.ವಿಕ್ಸಿತ್ ಭಾರತ್ ಯೋಜನೆ ಕಳೆದ ಆಗಸ್ಟ್ 1 ರಿಂದ ಜಾರಿಗೊಳಿಸಿದ್ದು, ಇದರಡಿ ಆಗಸ್ಟ್ 1 ರಿಂದ ಯಾವುದೇ ಐ.ಟಿ.ಐ, ಡಿಪ್ಲೋಮಾ, ಪದವಿ ತೇರ್ಗಡೆಯಾದ ಅಭ್ಯರ್ಥಿ ಯಾವುದೇ ಕಂಪನಿಯಲ್ಲಿ ಮಾಸಿಕ 1 ಲಕ್ಷ ರೂ. ಒಳಗಿನ ವೇತನದ ಕೆಲಸಕ್ಕೆ ಸೇರಿಕೊಂಡು ಅಲ್ಲಿಯೇ ಒಂದು ವರ್ಷ ಸತತವಾಗಿ ಕೆಲಸ ನಿರ್ವಹಿಸಿದಲ್ಲಿ ಗರಿಷ್ಠ 15,000 ರೂ. ಗಳನ್ನು ನೌಕರನಿಗೆ ಸರ್ಕಾರ ಪ್ರೋತ್ಸಾಹ ಧನ ನೀಡಲಿದೆ. ಇನ್ನು ಆರಂಭಿಕ 6 ತಿಂಗಳ ಪೂರ್ಣಗೊಳಿಸಿದ ನಂತದ ಮೊದಲನೇ ಕಂತಿನ ಪ್ರೋತ್ಸಾಹ ಧನ ಸಿಗಲಿದೆ ಎಂದು ಎಂ. ಸುಬ್ರಮಣ್ಯಮ್ ತಿಳಿಸಿದರು.
ಅದೇ ರೀತಿ 50 ಸಂಖ್ಯೆಗ್ಗಿಂತ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕಂಪನಿ ಹೆಚ್ಚುವರಿಯಾಗಿ ಕನಿಷ್ಠ ಇಬ್ಬರನ್ನು ಮತ್ತು 50 ಸಂಖ್ಯೆಗ್ಗಿಂತ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕಂಪನಿ ಹೆಚ್ಚುವರಿಯಾಗಿ ಕನಿಷ್ಠ ಐವರನ್ನು ಹೊಸದಾಗಿ ಸೇರಿಕೊಂಡು ಸತತ 6 ತಿಂಗಳ ಕಾಲ ಕೆಲಸ ನೀಡಿದಲ್ಲಿ ಅಂತಹ ಕಂಪನಿಗಳಿಗೆ ಪ್ರತಿ ನೌಕರನ ವೇತನಕ್ಕೆ ಅನುಗುಣವಾಗಿ ಮಾಸಿಕ ಗರಿಷ್ಠ 3 ಸಾವಿರ ರೂ. ವರೆಗೆ ಪ್ರೋತ್ಸಾಹ ಧನ ಕಂಪನಿಗಳಿಗೆ ನೇರವಾಗಿ ಪ್ಯಾನ್ ಲಿಂಕ್ಡ್ ಅಕೌಂಟ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಉದಾಹರಣೆಗೆ 10 ಸಾವಿರ ರೂ. ಮಾಸಿಕ ಸಂಬಳದ ಉದ್ಯೋಗಿಗೆ ಎದುರಾಗಿ ಪ್ರತಿ ಮಾಹೆ 1,000 ರೂ., 10 ರಿಂದ 20 ಸಾವಿರ ರೂ. ಸಂಬಳಕ್ಕೆ ಎದುರಾಗಿ 2 ಸಾವಿರ ರೂ. ಹಾಗೂ 20 ಸಾವಿರ ರೂ. ಗಳಿಂದ 1 ಲಕ್ಷ ರೂ. ವರೆಗಿನ ಸಂಬಳದ ಉದ್ಯೋಗಿಗಳ ಎದುರಾಗಿ ಮಾಸಿಕ 3 ಸಾವಿರ ರೂ. ಕಂಪನಿಗಳಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಯೋಜನೆ ಎಲ್ಲಾ ವಲಯಕ್ಕೆ ಎರಡು ವರ್ಷ ಮತ್ತು ಉತ್ಪಾದನಾ ವಲಯಕ್ಕೆ 4 ವರ್ಷದ ವರೆಗೆ ಈ ಆರ್ಥಿಕ ಸಹಾಯ ಸಿಗಲಿದೆ ಎಂದರು.
*ಬ್ಯಾಂಕ್,ಕಚೇರಿಗೆ ಅಲೆದಾಡಬೇಕಿಲ್ಲ:*
ಇನ್ನು ಪಿಂಚಣಿ ಪಡೆಯುವ ನೌಕರರು ವಾರ್ಷಿಕ ಜೀವಿತಾವಧಿಯ ಜೀವನ ಪ್ರಮಾಣ ಪತ್ರ ಸಲ್ಲಿಸಲು ಇನ್ಮುಂದೆ ಬ್ಯಾಂಕ್, ಪಿ.ಎಫ್. ಸೇರಿದಂತೆ ಯಾವುದೇ ಕಚೇರಿಗೆ ಅಲೆದಾಡಬೇಕಿಲ್ಲ. ಸ್ಮಾರ್ಟ್ ಫೋನ್‌ನಲ್ಲಿ “AadharFaceRd” & Jeevan Pramaan Face App” ತಂತ್ರಾಂಶ ಡೌನ್‌ಲೋಡ್ ಮಾಡಿಕೊಂಡು ಪ್ರತಿ ವರ್ಷಕ್ಕೊಮ್ಮೆ ಮೋಬೈಲ್ ಕ್ಯಾಮೆರಾ ಸಹಾಯದಿಂದ ಮುಖ ದೃಢೀಕರಣ ನೀಡದಿಲ್ಲಿ ಆನ್‌ಲೈನ್ ಮೂಲಕವೆ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಪಿಂಚಣಿದಾರರು ಇದಕ್ಕಾಗಿ ತಮ್ಮ ಕುಟುಂಬಸ್ಥರ ಸಹಾಯ ಪಡೆಯಬಹುದಾಗಿದೆ ಎಂದು ಎಂ. ಸುಬ್ರಮಣ್ಯಮ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲೆಕ್ಕಾಧಿಕಾರಿಗಳಾದ ಅರ್ಸ್ ಲಮ್ ಎಂ. ಕಿತ್ತೂರು ಮತ್ತು ಮದನ ಕುಲಕರ್ಣಿ ಇದ್ದರು.
