ಬೆಂಗಳೂರಿನಲ್ಲಿ ಕನಕದಾಸರ ಜಯಂತಿ
ಭಕ್ತ ಕನಕದಾಸರ ಜಯಂತಿ ಅದ್ದೂರಿ ಆಚರಣೆ
ಕನಕ ಕಾರ್ಮಿಕ ಕಲ್ಯಾಣ ಸಂಘದ ನೇತೃತ್ವದಲ್ಲಿ ಭಾವೈಕ್ಯದ ಹಬ್ಬ
ಬೆಂಗಳೂರು:ಶ್ರೀ ಕನಕ ಕಾರ್ಮಿಕ ಕಲ್ಯಾಣ ಸಂಘದ ವತಿಯಿಂದ 538ನೇ ಭಕ್ತ ಕನಕದಾಸರ ಜಯಂತಿಯನ್ನು ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ. ಪೂಜಾರಿ ಬೀಳವಾರ ಅವರ ನೇತೃತ್ವದಲ್ಲಿ ಬೆಂಗಳೂರಿನ ಮಾಚೋಹಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕ ಕಾರ್ಮಿಕ ಕಲ್ಯಾಣ ಸಂಘದ ಕಾರ್ಯಕರ್ತರು ಹಾಗೂ ಭಕ್ತ ಕನಕದಾಸರ ಅನುಯಾಯಿಗಳು ಸಾಮೂಹಿಕವಾಗಿ ಭಾಗವಹಿಸಿ ಭಕ್ತಿಯ ಪರಿಮಳವನ್ನು ಹರಿಸಿದರು. ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆಯೊಂದಿಗೆ ಬೈಕ್ ಸವಾರಿಯು ಗೋವಿಂದರಾಜನಗರದ ಶ್ರೀ ಕನಕಗಿರಿ ಪಾರ್ಕ್ ವರೆಗೆ ಸಾಗಿದ್ದು, ಅಲ್ಲಿ ಭಕ್ತ ಕನಕದಾಸರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮಿ ಮೇಡಂ ಅವರಿಗೆ ಕನಕ ಕಾರ್ಮಿಕ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಣ್ಣ ಎಂ. ಪೂಜಾರಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಸಂಘದ ಸದಸ್ಯರು, ಚಂದ್ರಲೇಔಟಿನ ಶ್ರೀ ಕನಕ ಭವನದಲ್ಲಿ ಭಕ್ತ ಕನಕದಾಸರ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಕಾಮತ್ ಬಡಾವಣೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಡೊಳಿನ ಮೇಳ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಮಲ್ಲಣ್ಣ ಎಂ. ಪೂಜಾರಿ ಅವರು, “ಭಕ್ತ ಕನಕದಾಸರ ತತ್ವಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಅವರ ಸಂದೇಶಗಳು ಸರ್ವ ಧರ್ಮ ಸೌಹಾರ್ದತೆಯನ್ನು ಬೋಧಿಸುತ್ತವೆ” ಎಂದು ಹೇಳಿದರು.
ವರದಿ: ಜೇಟ್ಟೆಪ್ಪ ಎಸ್. ಪೂಜಾರಿ
