ಜೈಲುಗಳಲ್ಲಿ ಐಷಾರಾಮಿ ಜೀವನ: ನ್ಯಾಯದ ತತ್ವಕ್ಕೆ ಧಕ್ಕೆಯೆ?
ಭ್ರಷ್ಟ ಅಧಿಕಾರಿಗಳು, ಸುಳ್ಳು ರಾಜಕಾರಣಿಗಳು ದೇಶದ ಜನರಿಗೆ ಮಾರಕ.!
ಭ್ರಷ್ಟ ಅಧಿಕಾರಿಗಳು ಹಾಗೂ ಸುಳ್ಳು ರಾಜಕಾರಣಿಗಳ ದುರುಪಯೋಗ, ಹಣದ ಹಂಬಲ ಮತ್ತು ನೈತಿಕ ಮೌಲ್ಯಗಳ ಕೊರತೆಯಿಂದ ಇಂದಿನ ಸಮಾಜ ಸಂಕಷ್ಟದಲ್ಲಿದೆ.
ಅಪರಾಧ ಮಾಡಿದವರು ಶಿಕ್ಷೆ ಅನುಭವಿಸಬೇಕು — ಅದು ನ್ಯಾಯದ ಸಾರ. ಆದರೆ ಇಂದಿನ ದಿನಮಾನಗಳಲ್ಲಿ ದುಡ್ಡು ಇದ್ದರೆ, ಅಪರಾಧಿಯೂ ಜೈಲಿನಲ್ಲೇ ಐಷಾರಾಮಿ ಜೀವನ ನಡೆಸುತ್ತಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಕಲಂಕ.
ಪರಪ್ಪನ ಅಗ್ರಹಾರ ಕಾರಾಗೃಹದ ಇತ್ತೀಚಿನ ಘಟನೆಗಳು ಈ ವಾಸ್ತವತೆಯನ್ನು ಹೊರಹಾಕಿವೆ. ವಿಚಾರಣಾಧೀನ ಕೈದಿಗಳು ಮದ್ಯಪಾನ ಮಾಡಿ ನೃತ್ಯ ಮಾಡುತ್ತಿರುವ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಾರಾಗೃಹದಲ್ಲಿ ಮೊಬೈಲ್‌ಗಳು, ಟಿವಿಗಳು, ಮದ್ಯದ ಬಾಟಲಿಗಳು ಪತ್ತೆಯಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯವಲ್ಲದೆ, ಅವರ ನೇರ ಸಹಕಾರದ ಸಾಕ್ಷಿಯಾಗಿದೆ.
ಜೈಲು ಅಪರಾಧಿಗಳ ಸುಧಾರಣೆಗೆಂದು ನಿರ್ಮಿತವಾದ ಸ್ಥಳ ಇಂದು ವಿಶೇಷ ಅತಿಥಿ ಗೃಹವಾಗಿ ಮಾರ್ಪಟ್ಟಿದ್ದು, ಇದು ನ್ಯಾಯದ ತತ್ವಕ್ಕೆ ಪರಿಹಾಸ್ಯದಂತಾಗಿದೆ.
ಕೈದಿಗಳ ಬಳಿ ಮೊಬೈಲ್ ಇದ್ದರೆ, ಅವರು ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿ ಮತ್ತಷ್ಟು ಅಪರಾಧ ಮಾಡಲು ಅವಕಾಶ ಸಿಗುತ್ತದೆ. ಹೀಗಾಗಿ ಇದು ರಾಷ್ಟ್ರದ ಭದ್ರತೆ ಮತ್ತು ಅಶಾಂತಿ ವಾತಾವರಣ ನಿರ್ಮಾಣವಾಗಲೂ ಕಾರಣವಾಗುವುದಿಲ್ಲವೆ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತದೆ.
ಭ್ರಷ್ಟಾಚಾರವು ಕೇವಲ ಹಣದ ವ್ಯವಹಾರವಲ್ಲ, ಅದು ದೇಶದ ಭವಿಷ್ಯಕ್ಕೆ ಹಾನಿಕಾರಕ.
ಪಕ್ಕದ ದೇಶಗಳಿಂದ ನುಸುಳುಕೋರರು ಬಂದು ನಮ್ಮ ದೇಶದೊಳಗೆ ನೆಲೆಸಿ ಆಧಾರ್, ರೇಷನ್ ಕಾರ್ಡ್ ಪಡೆಯುತ್ತಿರುವುದು ಅತ್ಯಂತ ಭಯಾನಕ ಸಂಗತಿ. ಇವೆಲ್ಲವು ಅಧಿಕಾರಿಗಳ ಅಜಾಗರೂಕತೆ ಮತ್ತು ಲಂಚ ಸಂಸ್ಕೃತಿಯ ಫಲ .
ಜನರೇ! ಪ್ರಜಾಪ್ರಭುತ್ವ ಉಳಿಯಬೇಕಾದರೆ, ನಾವು ನಮ್ಮ ಕರ್ತವ್ಯವನ್ನು ಅರಿತು ನಿಷ್ಠೆಯಿಂದ ಮತ ಚಲಾಯಿಸಬೇಕು. ಹಣ ಪಡೆದು ಮತ ನೀಡಿದರೆ, ನಾವು ಭ್ರಷ್ಟತೆಯ ಸಹಪಾಲುದಾರರಾಗುತ್ತೇವೆ. ಓದು, ನೈತಿಕತೆ ಮತ್ತು ದೇಶಭಕ್ತಿಯ ಆಧಾರದ ಮೇಲೆ ನಾಯಕನ ಆಯ್ಕೆ ಮಾಡಿದರೆ ಮಾತ್ರ ಈ ನೆಲ-ಜಲ, ಸಂವಿಧಾನ ಉಳಿಯಲು ಸಾಧ್ಯ.
ಪಕ್ಷ–ಪಕ್ಷಗಳ ರಾಜಕೀಯ ನಾಟಕಗಳಲ್ಲಿ ನಿಜವಾದ ಸಮಸ್ಯೆಗಳು ಮರೆಯಾಗುತ್ತಿವೆ. ಜನರ ಹಕ್ಕು, ಸುರಕ್ಷತೆ ಮತ್ತು ನ್ಯಾಯದ ಪ್ರಶ್ನೆಗಳು ಬದಿಗುಳಿದಿವೆ. ಜನರು ಇದನ್ನು ಮೌನವಾಗಿ ನೋಡುತ್ತಾ ಕುಳಿತಿದ್ದಾರೆ — ಇದು ಅತ್ಯಂತ ಅಪಾಯಕಾರಿ ನಡೆಯಾಗಿದೆ.
ಇಂದಿನ ಯುವಕರು ಸ್ವಾತಂತ್ರ್ಯ ಸೇನಾನಿಗಳಾದ ಸುಭಾಷಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ರಾಜಗುರು, ಮಹಾತ್ಮಾ ಗಾಂಧಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು,ಡಾ ಬಾಬು ರಾಜೇಂದ್ರ ಪ್ರಸಾದ್
ಅವರ ನಿಷ್ಠೆ, ತ್ಯಾಗ ಮತ್ತು ದೇಶಭಕ್ತಿಯನ್ನು ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರ ನಿಜವಾದ ಬದಲಾವಣೆ ಹೊಂದಲು ಸಾಧ್ಯ.
ಪ್ರಶ್ನೆ ಒಂದೇ — ಮತ್ತೆ ಒಬ್ಬ ಸುಭಾಷ್ ಚಂದ್ರ ಬೋಸ್ ಹುಟ್ಟಬೇಕೇ, ಅಥವಾ ನಾವು ಎಲ್ಲರೂ ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಬೇಕೇ ಎಂಬುದಾಗಿದೆ. ?
ಪ್ರಜಾಪ್ರಭುತ್ವ ಉಳಿಯಬೇಕಾದರೆ — ಜನರ ಜಾಗೃತಿಯೇ ಏಕೈಕ ಮಾರ್ಗ!
– ಶರಣಗೌಡ ಪಾಟೀಲ ಪಾಳಾ
