ಅಜೀಂ ಪ್ರೇಮ್‌ಜಿ ಫೌಂಡೇಶನ್ ಗೆ,ಸಂಜೀವಕುಮಾರ ಡೊಂಗರಗಾಂವ ಆಯ್ಕೆ
ಅಜೀಂ ಪ್ರೇಮ್‌ಜಿ ಫೌಂಡೇಶನ್ ಧನಸಹಾಯದ “ಎನ್‌ಫೋಲ್ಡ್” ಎನ್‌ಜಿಓ ಆಯೋಜನೆಯ ಫೆಲೋಶಿಪ್‌ಗೆ ಸಂಜೀವಕುಮಾರ ಡೊಂಗರಗಾಂವ ಆಯ್ಕೆ
ಕಲಬುರಗಿ: ಮಕ್ಕಳ ಹಕ್ಕುಗಳು ಮತ್ತು ನ್ಯಾಯ ಪ್ರವೇಶದಡಿ “ಎನ್‌ಫೋಲ್ಡ್” (ENFOLD) ಎಂಬ ಸರ್ಕಾರೇತರ ಸಂಸ್ಥೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಫೆಲೋಶಿಪ್‌ಗೆ ಕಲಬುರಗಿ ನಗರದ ನ್ಯಾಯವಾದಿ ಸಂಜೀವಕುಮಾರ ಡೊಂಗರಗಾಂವ ಅವರು ಆಯ್ಕೆಯಾಗಿದ್ದಾರೆ. ಈ ಯೋಜನೆಗೆ ಅಜೀಂ ಪ್ರೇಮ್‌ಜಿ ಫೌಂಡೇಶನ್ ಧನಸಹಾಯ ನೀಡಿದೆ.
ಮೂರು ವರ್ಷಗಳ ಅವಧಿಗೆ ಈ ಫೆಲೋಶಿಪ್ ನೀಡಲಾಗುತ್ತಿದ್ದು, ಇದರಡಿ ಕಾನೂನು ಸಂಘರ್ಷದಲ್ಲಿರುವ ಮಕ್ಕಳ ಹಕ್ಕುಗಳು, ಕಾನೂನು ನೆರವು, ಪುನರ್ವಸತಿ ಮುಂತಾದ ವಿಷಯಗಳ ಕುರಿತು ಕಲಬುರಗಿ ಜಿಲ್ಲೆಯಲ್ಲಿ ಸಂಶೋಧನೆ ಮತ್ತು ಕಾನೂನು ಅಭ್ಯಾಸ ಕೈಗೊಳ್ಳಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದಿಂದ ಕಲಬುರಗಿಯ ಸಂಜೀವಕುಮಾರ ಡೊಂಗರಗಾಂವ, ಯಾದಗಿರಿಯ ಒಬ್ಬರು ಹಾಗೂ ಮೈಸೂರು ಜಿಲ್ಲೆಯ ಒಬ್ಬ ನ್ಯಾಯವಾದಿಗಳು ಆಯ್ಕೆಯಾಗಿದ್ದಾರೆ.
ಈ ಆಯ್ಕೆ ಹಿನ್ನೆಲೆಯಲ್ಲಿ ಕಲಬುರಗಿ ನ್ಯಾಯವಾದಿಗಳ ಬಳಗದಿಂದ ಸಂಜೀವಕುಮಾರ ಡೊಂಗರಗಾಂವ ಅವರಿಗೆ ಗೃಹ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಮಲ್ಲಿಕಾರ್ಜುನ ಕೋಟೆ, ಶಿವಲಿಂಗಪ್ಪಾ ಅಷ್ಟಗಿ, ಶಿವರಾಜ ಅಂಡಗಿ, ಗುರುಸ್ವಾಮಿ ಸಂಕಿನಮಠ, ಅರುಣಕುಮಾರ ಕುಲಕರ್ಣಿ, ವಿನೋದ ಕುಮಾರ ಜೇನವೆರಿ, ಬಸವಂತರಾಯ ಕೊಳಕುರ ಹಾಗೂ ರಾಜು ಕೊಷ್ಠಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಗುಂಡಪ್ಪ ಹಿರೇಬಟ್ಟಿ ಸ್ವಾಗತಿಸಿದರು. ಅಂಡಗಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಪ್ರತಿಷ್ಠಾನದ ಮಹಾಪೋಷಕ ಶಿವಲಿಂಗಪ್ಪಾ ಅಷ್ಟಗಿ ಪ್ರೇರಣಾದಾಯಕವಾಗಿ ಮಾತನಾಡಿದರು. ಕೊನೆಯಲ್ಲಿ ನ್ಯಾಯವಾದಿ ವಿನೋದ ಕುಮಾರ ಧನ್ಯವಾದ ಸಲ್ಲಿಸಿದರು.
