ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕಿದ ಬಿಸಿಎಂ ಡಿಡಿ ಸೋಮಶೇಖರ ವಜಾಗೆ- ಪಾಟೀಲ ಆಗ್ರಹ

ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕಿದ ಬಿಸಿಎಂ ಡಿಡಿ ಸೋಮಶೇಖರ ವಜಾಗೆ- ಪಾಟೀಲ ಆಗ್ರಹ

ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕಿದ ಬಿಸಿಎಂ ಡಿಡಿ ಸೋಮಶೇಖರ ವಜಾಗೆ-ಎಂ, ಎಸ್, ನರಿಬೋಳ  ಪಾಟೀಲ ಆಗ್ರಹ

ಕಲಬುರಗಿ: ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಆಹಾರ ಮತ್ತು ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದು, ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿ ಅಧಿಕಾರದ ದುರುಪಯೋಗ ಮಾಡಿದ ಬಿಸಿಎಂ ಉಪನಿರ್ದೇಶಕ (ಡಿ.ಡಿ) ಸೋಮಶೇಖರ ಅವರನ್ನು ಕೂಡಲೇ ಅಮಾನತ್ತು ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಮತ್ತು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಜಂಟಿಯಾಗಿ ಆಗ್ರಹಿಸಿವೆ.

ಕಲಬುರಗಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸಮಿತಿಯ ಅಧ್ಯಕ್ಷರು ಎಂ.ಎಸ್. ಪಾಟೀಲ ನರಿಬೋಳ ಹಾಗೂ ಶ್ರವಣಕುಮಾರ ಡಿ. ನಾಯಕ ಅವರು ಮಾತನಾಡಿ —

ಸರ್ಕಾರದ ನಿಯಮಗಳ ಪ್ರಕಾರ ಆಹಾರ ಪದಾರ್ಥಗಳನ್ನು ಪ್ರತಿ ತಿಂಗಳು 2ನೇ ತಾರೀಖಿನೊಳಗೆ ನಿಲಯಗಳಿಗೆ ಪೂರೈಕೆ ಮಾಡಬೇಕಾದರೂ, ಗುತ್ತಿಗೆದಾರರು ಸರಬರಾಜು ಮಾಡದೆ ಬೋಗಸ್ ಬಿಲ್‌ಗಳನ್ನು ಮಾಡುತ್ತಿದ್ದಾರೆ. ಈ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುವ ಬದಲು ಡಿಡಿ ಸೋಮಶೇಖರ ಅವರು ಟೆಂಡರ್‌ದಾರರ ಜೊತೆಗೆ ಒಳಒಪ್ಪಂದ ಮಾಡಿಕೊಂಡು ಇಲಾಖೆಯ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಅಧಿಕಾರಿಗಳು ಈಗಾಗಲೇ ಈ ಗುತ್ತಿಗೆದಾರರ ವಿರುದ್ಧದ ಅಕ್ರಮಗಳನ್ನು ಗುರುತಿಸಿ, 2025ರ ಜನವರಿ 1ರ ಜಿಲ್ಲಾಧಿಕಾರಿ ಆದೇಶ ಹಾಗೂ ಮೇ 23ರ ಇಲಾಖಾ ಟಿಪ್ಪಣಿಯಲ್ಲಿ ಹಲವು ಉಲ್ಲಂಘನೆಗಳನ್ನು ದಾಖಲಿಸಿದ್ದರು. ಅವುಗಳಲ್ಲಿ —

* ವಾಹನ ಟ್ರಾಕಿಂಗ್ ದಾಖಲೆಗಳ ಕೊರತೆ

* ಆಹಾರ ಪ್ಯಾಕೆಟ್‌ಗಳಲ್ಲಿ “ಮಾರಾಟಕ್ಕಿಲ್ಲ” ಎಂಬ ಲೇಬಲ್‌ ಇಲ್ಲದಿರುವುದು

* ಸ್ಥಳೀಯ ಗೋದಾಮು ಸ್ಥಾಪಿಸದಿರುವುದು

* ಎಫ್‌ಸಿಐನಿಂದ ಪಡಿತರವನ್ನು ನೇರವಾಗಿ ಎತ್ತುವಲ್ಲಿ ವಿಫಲತೆ

* ತರಕಾರಿಗಳು, ಹಣ್ಣುಗಳು ಮತ್ತು ಮೊಟ್ಟೆಗಳಂತಹ ಹಾಳಾಗುವ ಪದಾರ್ಥಗಳನ್ನು ಸಮಯಕ್ಕೆ ಪೂರೈಸದಿರುವುದು

* ಲ್ಯಾಬ್ ಪರೀಕ್ಷಾ ವರದಿ ಸಲ್ಲಿಸದಿರುವುದು ಮುಂತಾದವು ಸ್ಪಷ್ಟವಾಗಿವೆ.

ಈ ಉಲ್ಲಂಘನೆಗಳ ಬಳಿಕವೂ ಪ್ರಸ್ತುತ ಡಿಡಿ ಸೋಮಶೇಖರ ಅವರು ಯಾವುದೇ ಕ್ರಮ ಕೈಗೊಳ್ಳದೆ ಗುತ್ತಿಗೆದಾರರ ಪರವಾಗಿ ಬಿಲ್‌ಗಳನ್ನು ಮಂಜೂರು ಮಾಡುತ್ತಿದ್ದು, ವಿದ್ಯಾರ್ಥಿಗಳ ಹಕ್ಕಿನ ಅನ್ನಕ್ಕೂ ಕನ್ನ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಸಮಿತಿಯವರು ಲೋಕಾಯುಕ್ತ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆ ನಡೆಸಿ, ಹಿಂದಿನ ಎಲ್ಲಾ ಬಿಲ್‌ಗಳನ್ನು ಪರಿಶೀಲಿಸಿ, ಗುತ್ತಿಗೆದಾರರ ಪರವಾನಿಗೆ ರದ್ದುಪಡಿಸಿ, ಸೋಮಶೇಖರರನ್ನು ಕೂಡಲೇ ಅಮಾನತ್ತು ಮಾಡಲು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

"ಒಂದು ವೇಳೆ ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ," ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಾರಾಧ್ಯ ಬಡಿಗೇರ ಸೇರಿದಂತೆ ಹೋರಾಟಗಾರರು ಹಾಜರಿದ್ದರು.