ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ
ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ
ಕಲ್ಯಾಣ ಕಹಳೆ ವಾರ್ತೆ ಕಲಬುರಗಿ: ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ಬೆಲೆ ನಿಗದಿ ಮಾಡದ ಮತ್ತು ಸರಕಾರದ ಮಾರ್ಗಸೂಚಿ ಪಾಲಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ರೈತ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಅವರು ಯೋಜನಾ ಆಯೋಗದ ಉಪಧ್ಯಾಕ್ಷರು ಹಾಗೂ ರೈತ ಮುಖಂಡರ ಸಭೆಯಲ್ಲಿಯು ಕೂಡ ಸಕ್ಕರೆ ಖಾರ್ಕಾನೆ ಮಾಲೀಕರಿಗೆ ರೈತರ ಹಿತದೃಷ್ಟಿಯಿಂದ ಕಾನೂನು ಪಾಲನೆ ಮಾಡುವುದರ ಜತೆಗೆ ಬೆಲೆ ನಿಗದಿ ಮಾಡುವುದಕ್ಕಾಗಿ ಎಷ್ಟೇ ಮನವರಿಕೆ ಮಾಡಿದರೂ ಉದ್ಧಟತನ ತೋರಿಸಿ ಯಾವುದೇ ರೀತಿಯ ಸಹಕಾರ ನೀಡದೆ ಇರುವುದು
ಕಾರ್ಖಾನೆಗಳ ಮಾಲೀಕರ ದರ್ಪವನ್ನು ಎತ್ತಿ ತೋರಿದ್ದಾರೆ. ಇಂತಹ ಸಕ್ಕರೆ ಖಾರ್ಕಾನೆ ಮಾಲೀಕರ ವಿರುದ್ಧ ಮತ್ತು ಆಡಳಿತ ವರ್ಗದ ವಿರುದ್ಧ ಕಠಿಣ ಕ್ರಮಕೈಗೊಳ್ಳದೇ ಇದ್ದರೆ ರೈತರಿಗೆ ಉಳಿಗಾಲವಿಲ್ಲ. ಆದರಿಂದ
ಜಿಲ್ಲಾಧಿಕಾರಿಗಳು ಕೂಡಲೇ ರೈತರ ಹಿತರಕ್ಷಣೆಗೆ ಬದ್ಧರಾಗಿರಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಎಫ್‌ಆರ್‌ಪಿ ಬೆಲೆ ನಿಗದಿ ಮಾಡಿಲ್ಲ ಹಲವಾರು ಬಾರಿ ಜಿಲ್ಲಾಧಿಕಾರಿಗಳು ಸರಕಕಾರದ ಮಾರ್ಗಸೂಚಿಗಳನ್ನು ಮತ್ತು ಕಬ್ಬು ಬೆಳೆಗಾರರಿಗೆ ಆಗುತ್ತಿರುವ ತೂಕದಲ್ಲಿ ನಷ್ಟವನ್ನು ತಪ್ಪಿಸುವಂತೆ ಎರಡು ಮೂರು ಸಭೆಗಳು ನಡೆಸಿದ್ದರೂ ಸಕ್ಕರೆ ಕಾರ್ಖಾನೆಗಳ ಆಡಳಿತ ವರ್ಗ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವು ಸಕ್ಕರೆ ಕೈಗಾರಿಕಾ ಮಾಲೀಕರು ರಾಜಕೀಯವಾಗಿ ಪ್ರಬಲವಾಗಿರುವುದರಿಂದ ರೈತರಿಗೆ ಮತ್ತು ಅಧಿಕಾರಿಗಳಿಗೆ ಧಮ್ಮಿಕಿ ಹಾಕುತ್ತಿರುವುದು ಕೆಲವು ಕಡೆ ಕಂಡುಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆ: ಮಹಾರಾಷ್ಟçದ ಮಾದರಿಯಲ್ಲಿ ರೈತರಿಗೆ 3500 ಬೆಲೆ ನಿಗದಿ ಮಾಡಬೇಕು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸುತ್ತಿರುವ ಆ ಮೂಲಕ ರೈತರ ಮೇಲೆ ದರ್ಪ ತೋರುತ್ತಿರುವ ಕಾರ್ಖಾನೆಗಳ ವಿರುದ್ಧ ತಕ್ಷಣ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಕೆಲವು ದಲ್ಲಾಳಿಗಳು ರೈತರಿಗೆ ಮೋಸ ಮಾಡುತ್ತಿದ್ದು ಅದನ್ನು ತಡೆಯಬೇಕು, ರೈತರ ಕಬ್ಬು ತೂಕ ಮಾಡುವಾಗ ತೂಕದಲ್ಲಿ ಮೋಸ ಮಾಡುತ್ತಿರುವುದನ್ನು ತಡೆಯಬೇಕು. ರೈತರು ಮತ್ತು ಕಾರ್ಖಾನೆ ಆಡಳಿತದೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳ ಬೇಕು. ಜಿಲ್ಲಾಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ರೈತರ ಹಿತ ಕಾಪಾಡುವುದು ಸೇರಿ ನಾನಾ ಬೇಡಿಕೆ ಈಡೀರಿಸಬೇಕೆಂದು ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾ ಸಂಚಾಲಕ ಸುನೀಲ ಮಾರುತಿ ಮಾನಪಡೆ, ರೈತ ಮುಖಂಡರಾದ ಚಂದು ಜಾಧವ ಶಹಾಬಾದ್, ಶಾಂತಪ್ಪ ಪಾಟೀಲ್, ಉಮಾಪತಿ ಪಾಟೀಲ್, ಗೌರವ ಸಲಹೆಗಾರ ಶೌಖತ ಅಲಿ ಆಲೂರ, ರೈತ ಸಂಸ್ಥೆಯ ಸೋಮಣ್ಣಗೌಡ ಪಾಟೀಲ್, ಮೈಲಾರಿ ದೊಡ್ಡಮನಿ ಅಫಜಲಪುರ, ಶಹಾಬುದ್ದೀನ್ ಪಟೇಲ್ ಜೇವರ್ಗಿ ಇತರರು ಇದ್ದರು.
