ಕೃಷ್ಣ ಬೋಧೆಯಂತೆ ಧರ್ಮ ಮಾರ್ಗದಲ್ಲಿ ನಡೆದು ಸಮಾಜದ ಒಳಿತಿಗೆ ಶ್ರಮಿಸೋಣ

ಕೃಷ್ಣ ಬೋಧೆಯಂತೆ ಧರ್ಮ ಮಾರ್ಗದಲ್ಲಿ ನಡೆದು ಸಮಾಜದ ಒಳಿತಿಗೆ ಶ್ರಮಿಸೋಣ

ಕೃಷ್ಣ ಬೋಧೆಯಂತೆ ಧರ್ಮ ಮಾರ್ಗದಲ್ಲಿ ನಡೆದು ಸಮಾಜದ ಒಳಿತಿಗೆ ಶ್ರಮಿಸೋಣ

ಉಡುಪಿ: ಶ್ರೀಕೃಷ್ಣ ಗೀತೆಯಲ್ಲಿ ಬೋಧಿಸಿದಂತೆ ಧರ್ಮ ಮಾರ್ಗದಲ್ಲಿ ನಡೆದು ಸಮಾಜದ ಒಳಿತಿಗೆ ಶ್ರಮಿಸೋಣ ಎಂದು *ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.*

*ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಆ.1ರಿಂದ ಸೆ.17ರ ವರೆಗೆ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.*

ಸಮಾಜದಲ್ಲಿ ತಾಂಡವವಾಡುತ್ತಿರುವ ಭಯೋತ್ಪಾದನೆ, ಅಸಹಿಷ್ಣುತೆ, ಆತ್ಮ ವಿಸ್ಮೃತಿ ಇತ್ಯಾದಿ ಎಲ್ಲ ವಿಪ್ಲವಗಳಿಗೆ ಶ್ರೀಕೃಷ್ಣ ಸಾರಿದ ಭಗವದ್ಗೀತೆ ಮದ್ದು. ಅದು ಉತ್ತಮ ದಾರಿ ತೋರಬಲ್ಲುದು.

ಶ್ರೀಕೃಷ್ಣನ ಜೀವನ ಎಲ್ಲರಿಗೂ ಸ್ಪೂರ್ತಿ. ಆತನ ಬಾಲಲೀಲೆಯಿಂದ ತೊಡಗಿ ಗೀತೋಪದೇಶದ ವರೆಗೆ ಕೃಷ್ಣ ನೀಡಿದ ತತ್ತ್ವೋಪದೇಶಗಳು, ಸಂದೇಶಗಳು ಅನುಕರಣಯೋಗ್ಯ. ಫಲಾಪೇಕ್ಷೆ ರಹಿತ ಕಾರ್ಯನಿರ್ವಹಣೆ ಜೊತೆಗೆ ಧರ್ಮ ಪಾಲನೆ ಮಾಡಬೇಕು. ಸತ್ಕರ್ಮಗಳಿಗೆ ಜೀವನ ಮುಡಿಪಾಗಿಡಬೇಕು, ಜೀವನದ ಉದ್ದೇಶ ಅರಿತುಕೊಳ್ಳಬೇಕು. ಇದು ಕೃಷ್ಣ ನೀಡಿದ ಸಂದೇಶ ಎಂದು ರಾಜ್ಯಪಾಲರು ಹೇಳಿದರು.

ಭಾರತೀಯ ಸಂಸ್ಕೃತಿ ಪ್ರಸಾರದಲ್ಲಿ ಪುತ್ತಿಗೆ ಮಠದ ಕೊಡುಗೆ ದೊಡ್ಡದು. ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕಾ ಮೊದಲಾದೆಡೆಗಳಲ್ಲಿ ಕೃಷ್ಣ ಮಂದಿರ ಸ್ಥಾಪಿಸುವ ಮೂಲಕ ವಿದೇಶೀಯರಲ್ಲೂ ಕೃಷ್ಣಪ್ರಜ್ಞೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಉಡುಪಿ ಕೃಷ್ಣ ಮಠದ ಕೊಡುಗೆ ಗಮನೀಯ ಎಂದರು.

ಸಾನ್ನಿಧ್ಯ ವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀಕೃಷ್ಣ ಭಕ್ತವತ್ಸಲ, ಭಕ್ತರಾಧೀನ. ಭಕ್ತರಿಗಾಗಿ ದ್ವಾರಕೆಯಿಂದ ಉಡುಪಿಗೆ ಬಂದ ಕೃಷ್ಣನನ್ನು ಆಚಾರ್ಯ ಮಧ್ವರು ಪ್ರತಿಷ್ಠಾಪಿಸಿ, ಭಕ್ತರಿಗೆ ಕೃಷ್ಣ ದರ್ಶನದ ಅವಕಾಶ ಕಲ್ಪಿಸಿದರು.

ಶ್ರೀಕೃಷ್ಣನ ತತ್ವಾದರ್ಶಗಳನ್ನು ಭಕ್ತರಿಗೆ ತಿಳಿಸುವ ಆಶಯದಿಂದ 48 ದಿನಗಳ ಪರ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ಕಳೆದ ಬಾರಿ ಒಂದು ತಿಂಗಳ ಕಾಲ ಆಚರಿಸಲಾಗಿತ್ತು ಎಂದರು.

ಉತ್ತ ಭಾರತದಲ್ಲಿ ಶ್ರೀರಾಮ, ಕೃಷ್ಣ ಮೊದಲಾದ ದೇವಾನು ದೇವತೆಗಳ ಅವತಾರವಾಗಿದೆ. ಶಂಕರ ಮಧ್ವರಾದಿ ಆಚಾರ್ಯತ್ರಯರು ದಕ್ಷಿಣ ಭಾರತದಲ್ಲಿ ಜನಿಸಿದ್ದಾರೆ. ಭಕ್ತ- ಭಗವಂತರ ಅನುಸಂಧಾನದಿಂದ ಉತ್ತರ ಮತ್ತು ದಕ್ಷಿಣ ಭಾರತದ ಜೋಡಣೆಯಾಗಿದೆ.

ಅದರಲ್ಲೂ ಕರ್ನಾಟಕ ದೇವರಿಗೆ ಅತ್ಯಂತ ಪ್ರಿಯವಾದ ಪವಿತ್ರ ನಾಡಾಗಿದ್ದು, ಹಂಪಿ ಬಳಿ ಜನಿಸಿದ ಹನುಮ ಮತ್ತೆ ಮಧ್ವಾಚಾರ್ಯರಾಗಿ ಕರ್ನಾಟಕದ ಉಡುಪಿಯಲ್ಲಿ ಹುಟ್ಟಿಬಂದರು.

ಉತ್ತರ ಭಾರತದ ರಾಜ್ಯಪಾಲ ಥಾವರ್ ಚಂದ್ ಅವರು ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಉದ್ಘಾಟಿಸುತ್ತಿರುವುದು ಸಂತಸದಾಯಕ ಎಂದರು.

ಶ್ರೀಕೃಷ್ಣನಿಗೆ ಸಂಸ್ಕೃತ ಭಾಷೆ ಅತ್ಯಂತ ಪ್ರಿಯವಾದುದು. ಗೀತೆಯನ್ನು ಸಂಸ್ಕೃತ ಭಾಷೆಯಲ್ಲೇ ಬೋಧಿಸಿದ್ದಾನೆ. ಎಲ್ಲ ಆಚಾರ್ಯರು ಸಂಸ್ಕೃತ ಭಾಷೆಯಲ್ಲೇ ಗ್ರಂಥ ರಚಿಸಿದ್ದಾರೆ.

ಸಂಸ್ಕೃತ ಎಲ್ಲ ಭಾಷೆಗಳಿಗೂ ಮೂಲವಾಗಿದ್ದು, ಆಂಗ್ಲಭಾಷೆಯ ಮೇಲೂ ಸಂಸ್ಕೃತದ ಪ್ರಭಾವ ಇದೆ. ಆಂಗ್ಲಭಾಷೆ ಅಂತಾರಾಷ್ಟ್ರೀಯ ಭಾಷೆಯಾದರೆ, ಸಂಸ್ಕೃತ ಅಂತರ್ಲೋಕೀಯ ಭಾಷೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಶಾಸಕ ಯಶಪಾಲ್ ಸುವರ್ಣ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಉದ್ಯಮಿಗಳಾದ ರಾಘವೇಂದ್ರ ರಾವ್ ಮತ್ತು ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಅಭ್ಯಾಗತರಾಗಿದ್ದರು.

ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.

ಡಾ. ಗೋಪಾಲಾಚಾರ್ಯ ಮತ್ತು ರಮಣ ಆಚಾರ್ಯ ನಿರೂಪಿಸಿದರು. ರಾಘವೇಂದ್ರ ಆಚಾರ್ಯ ಅವರಿಂದ ಮಂತ್ರಘೋಷ ನಡೆಸಿದರು.ಶ್ರೀಗಳು ರಾಜ್ಯಪಾಲರನ್ನು ಗೌರವಿಸಿದರು.