ಪ್ರಣವಾನಂದಶ್ರೀಗಳ ಪಾದಯಾತ್ರೆ: ಈಡಿಗ ಮುಖಂಡರ ಜೊತೆ ಜಗದೇವ ಗುತ್ತೇದಾರ್ ಚರ್ಚೆ
ಪ್ರಣವಾನಂದಶ್ರೀಗಳ ಪಾದಯಾತ್ರೆ: ಈಡಿಗ ಮುಖಂಡರ ಜೊತೆ ಜಗದೇವ ಗುತ್ತೇದಾರ್ ಚರ್ಚೆ
ನಾರಾಯಣ ಗುರು ಅಧ್ಯಯನ ಪೀಠ ಆರಂಭ ಪ್ರಯತ್ನಕ್ಕೆ ಅಭಿನಂದನೆ
ಕಲಬುರಗಿ: ರಾಜ್ಯದ ಈಡಿಗ ಬಿಲ್ಲದ ನಾಮಧಾರಿ ಸೇರಿದಂತೆ 26 ಪಂಗಡಗಳ ಸಮಗ್ರ ಕಲ್ಯಾಣಕ್ಕಾಗಿ 18 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜ.6 ರಿಂದ ಈಡಿಗ ಗುರುಗಳಾದ ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆ ಹಿಂಪಡೆಯಲು ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್ ಕಲಬುರಗಿಯ ಈಡಿಗ ಮುಖಂಡರ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಕಲಬುರಗಿಯಲ್ಲಿ ಡಿಸೆಂಬರ್ 21ರಂದು ವಿಧಾನ ಪರಿಷತ್ ಸದಸ್ಯರ ಸ್ವಗೃಹದಲ್ಲಿ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಪದಾಧಿಕಾರಿಗಳು, ಚಿತ್ತಾಪುರ ತಾಲೂಕು ಕರದಾಳು ಶಕ್ತಿ ಪೀಠದ ವಿಶ್ವಸ್ಥ ಮಂಡಳಿಯ ಸದಸ್ಯರು ಮತ್ತು ಈಡಿಗ, ಬಿಲ್ಲವ ಮುಖಂಡರ ನಿಯೋಗವು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರರನ್ನು ಭೇಟಿಯಾಗಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಸಭೆಯ ಚಳಿಗಾಲದ ಅಧಿವೇಶನದಲ್ಲಿ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವನ್ನು ಆರಂಭಿಸಲು ಒತ್ತಾಯಿಸಿ ಗಮನಸೆಳೆಯುವ ಪ್ರಶ್ನೆ ಎತ್ತಿ ಒತ್ತಾಯಿಸಿದ್ದಕ್ಕಾಗಿ ಅವರನ್ನು ಶಾಲು ಹಾರದೊಂದಿಗೆ ಅಭಿನಂದಿಸಿ ಮುಂದಿನ ಬಜೆಟ್ ನಲ್ಲಿ ಘೋಷಣೆಯಾಗುವಂತೆ ಪ್ರಯತ್ನಿಸಬೇಕೆಂದು ಒತ್ತಾಯಿಸಲಾಯಿತು. ನಂತರ ಮಾತನಾಡಿದ ಜಗದೇವ ಗುತ್ತೇದಾರ್ ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಜೊತೆ ಚರ್ಚಿಸಿ ಸೂಕ್ತ ಉತ್ತರ ಪಡೆಯಲಾಗುತ್ತದೆ ಹಾಗೂ ಅಧ್ಯಯನ ಪೀಠ ಆರಂಭಿಸಿ ಸೂಕ್ತ ನಿಧಿ ಸಂಗ್ರಹಿಸಿ ಉತ್ತಮ ಕೆಲಸ ಕಾರ್ಯ ನಡೆಸಲು ಶತ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈಡಿಗ ಗುರುಗಳಾದ ಡಾಕ್ಟರ್ ಪ್ರಣವಾನಂದ ಶ್ರೀಗಳು ಜನವರಿ 6 ರಿಂದ ನಡೆಸಲು ಉದ್ದೇಶಿಸಿದ ಪಾದಯಾತ್ರೆಯನ್ನು ಸಂಧಾನದ ಮೂಲಕ ಬಗೆಹರಿಸಿ ಕೈ ಬಿಡುವಂತೆ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಸಚಿವರಾದ ಡಾ ಶರಣಪ್ರಕಾಶ್ ಪಾಟೀಲ್ ಜೊತೆ ಚರ್ಚಿಸಲಾಗುವುದುಮತ್ತು ಅವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ಯಲು ಪ್ರಯತ್ನಿಸಲಾಗುವುದು. ಪಾದಯಾತ್ರೆಯಲ್ಲಿ ಒತ್ತಾಯಿಸುವ 18 ಬೇಡಿಕೆಗಳಲ್ಲಿ ಶೀಘ್ರದಲ್ಲೇ ಬಗೆಹರಿಸಲು ಸಾಧ್ಯವಾಗುವ ಕೆಲವೊಂದು ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಭರವಸೆ ಪಡೆಯಲಾಗುವುದು ಎಂದು ಜಗದೇವ ಗುತ್ತೇದಾರ್ ನಿಯೋಗಕ್ಕೆ ಭರವಸೆ ನೀಡಿದರು. ಸರಕಾರವು ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತಿದ್ದು ಯಾವುದೇ ರೀತಿಯಲ್ಲಿ ಹೋರಾಟದಂಗಣಕ್ಕೆ ಇಳಿಯಬಾರದು.
ಈಗಾಗಲೇ ಪಾದಯಾತ್ರೆಯ ಪೂರ್ಣ ಮಾಹಿತಿ ಗಮನಕ್ಕೆ ಬಂದಿದ್ದು ನಾರಾಯಣ ಗುರು ಜಯಂತಿ ಸಂದರ್ಭದಲ್ಲಿ ಕೂಡ ಪಾದಯಾತ್ರೆ ಕೈಬಿಡುವಂತೆ ಮನವಿ ಮಾಡಲಾಗಿದ್ದು ಜನವರಿ 30ರ ಒಳಗಾಗಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಸಮುದಾಯದ 26 ಪಂಗಡಗಳ ಹಿತದೃಷ್ಟಿಯಿಂದ ಸರಕಾರ ಉತ್ತಮ ನಿರ್ಧಾರ ಕೈಗೊಳ್ಳಲಿದೆ. ಇದಕ್ಕೆ ರಾಜ್ಯದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ ಎಲ್ಲಾ ನಾಯಕರು ಸರಕಾರದ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಜಗದೇವ ಗುತ್ತೇದಾರ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ಗುತ್ತೇದಾರ್ ಶೀಘ್ರದಲ್ಲೇ ಬಗೆಹರಿಸಬಹುದಾದ ಬೇಡಿಕೆಗಳ ವಿವರ ನೀಡಿದರು. ಕಳೆದ ಎರಡುವರೆ ವರ್ಷಗಳಿಂದ ಸಮುದಾಯದ ಬಗ್ಗೆ ಮುಖ್ಯಮಂತ್ರಿಗಳು ಅಥವಾ ಸಂಬಂಧಪಟ್ಟ ಸಚಿವರು ಈಡಿಗ ನಾಮಧಾರಿ ಬಿಲ್ಲವ ಸೇರಿದಂತೆ ಸಮುದಾಯದವರ ಜೊತೆ ಯಾವುದೇ ಮಾತುಕತೆ ನಡೆಸಿದ ಇರುವುದರಿಂದ ಅನಿವಾರ್ಯವಾಗಿ ಪಾದಯಾತ್ರೆಯ ಮೂಲಕ ಜನ ಜಾಗೃತಿ ಮೂಡಿಸಲು ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈಡಿಗ ಸಮುದಾಯದ ಮುಖಂಡರು ಮತ್ತು ವಿಧಾನಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್ ಅವರ ಮಾರ್ಗದರ್ಶನದಲ್ಲಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವುದಾದರೆ ಪಾದಯಾತ್ರೆ ಕೈ ಬಿಡಲು ಸಿದ್ದ ಎಂದು ಆಶ್ವಾಸನೆ ನೀಡಿದರು. ಮುಖ್ಯವಾಗಿ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ
ನಿಗಮಕ್ಕೆ ಶೀಘ್ರದಲ್ಲೆ 100 ಕೋಟಿ ಅನುದಾನ ನೀಡಿ ಅದರಲ್ಲಿ
ಪ್ರತಿ ಜಿಲ್ಲೆಗೆ ಹಾಸ್ಟೆಲ್ ಅಥವಾ ಸಮುದಾಯ ಭವನಗಳಿಗೆ ಬಳಕೆ ಮಾಡುವುದು, ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ ಆರಂಭ ಮಾಡುವುದು, ಕುಲಕಸು ಕಳೆದುಕೊಂಡ ಸಮುದಾಯದವರಿಗೆ ಪುನರ್ವಸತಿಯ ಅಂಗವಾಗಿ ಈ ಹಿಂದಿನ ಸೇಂದಿ ಸೊಸೈಟಿಗಳಿಗೆ ತೆಲಂಗಾಣ ಮಾದರಿಯಂತೆ ಸಿಎಲ್ 2 ಹಾಗೂ ಸಿಎಲ್ 9 ಹರಾಜು ವೇಳೆ ಕನಿಷ್ಠ ಶೇಕಡ 15ರಷ್ಟು ಮೀಸಲಾತಿ ನೀಡುವುದು,ಸೇಂದಿ ಇಳಿಸುತ್ತಿದ್ದವರಿಗೆ ಪಿಂಚಣಿ,ಮೃತಪಟ್ಟ ಸೇಂದಿ ಇಳಿಸುತ್ತಿದ್ದವರ ಮಕ್ಕಳಿಗೆ ಸರಕಾರಿ ನೌಕರಿ ನೀಡುವುದು ಮುಂತಾದ ಪುನರ್ವಸತಿ ಪ್ಯಾಕೇಜ್ ಗಳ ಮೂಲಕ ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಭರವಸೆ ನೀಡಿದರೆ ಪಾದಯಾತ್ರೆಯನ್ನು ಕೈ ಬಿಡಲು ಡಾ. ಪ್ರಣವಾನಂದ ಶ್ರೀಗಳು ಒಪ್ಪಿದ್ದು ಈ ಬಗ್ಗೆ ಸಮಾಜವು ಸಂಘಟಿತವಾಗಿ ಸರಕಾರದ ನಿರ್ಣಯವನ್ನು ಒಪ್ಪಿಕೊಳ್ಳುತ್ತದೆ. ಉಳಿದ ಬೇಡಿಕೆಗಳನ್ನು ಮುಂದಿನ ಮುಂಗಡಪತ್ರದಲ್ಲಿ ಈಡೇರಿಸುವಂತೆ ಒತ್ತಾಯಿಸಬೇಕೆಂದು ಹೇಳಿದರು. ಸಭೆಯಲ್ಲಿ ಕರದಾಳು ಬ್ರಹ್ಮ ಶ್ರೀನಾರಾಯಣ ಗುರು ಶಕ್ತಿಪೀಠದ ವಿಶ್ವಸ್ಥ ಮಂಡಳಿಯ ಸದಸ್ಯರಾದ ಮಹಾದೇವ ಗುತ್ತೇದಾರ್, ವೆಂಕಟೇಶ್ ಎಮ್. ಕಡೇಚೂರ್, ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಕುಪೇಂದ್ರ ಗುತ್ತೇದಾರ್ ನಾಗೂರ್, ಶಕ್ತಿ ಪೀಠದ ಮಾಧ್ಯಮ ಸಂಚಾಲಕರಾದ ಡಾ. ಸದಾನಂದ ಪೆರ್ಲ, ಬಿಲ್ಲವ ಸಂಘಟನೆಯ ನಾಯಕ
ಪ್ರವೀಣ್ ಜತ್ತನ್, ಕಲಬುರಗಿ ತಾಲೂಕು ಈಡಿಗ ಸಂಘದ ಪ್ರಮುಖರಾದ ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಹೊಳಕುಂದ, ಬಸವರಾಜ್ ರಾವೂರ್ ಮತ್ತಿತರರು ನಿಯೋಗದಲ್ಲಿ ಇದ್ದರು.
