ಅಂಚೆ ವಿಮಾ ಯೋಜನೆ ಸದುಪಯೋಗ ಪಡೆದುಕೊಳ್ಳಿ, ಕಾಂಬಳೆ
ಅಂಚೆ ವಿಮಾ ಯೋಜನೆ ಸದುಪಯೋಗ ಪಡೆದುಕೊಳ್ಳಿ, ಕಾಂಬಳೆ
ಬಾಗಲಕೋಟೆ: ಭಾರತೀಯ ಅಂಚೆ ಇಲಾಖೆಯಿಂದ ನೀಡುತ್ತಿರುವ ಅಪಘಾತ ವಿಮಾ ಯೋಜನೆಯು ಜನಸಾಮಾನ್ಯರ ಕೈಕಟುಕುವ ವಿಮಾ ಯೋಜನೆ ಆಗಿದೆ ಎಂದು ಬಾಗಲಕೋಟೆ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಚಂದ್ರಕಾಂತ ಜಿ. ಕಾಂಬಳೆ ತಿಳಿಸಿದರು. ನವನಗರದಲ್ಲಿ ಬಾಗಲಕೋಟೆ ತಾಲೂಕು ಛಾಯಾಗ್ರಹಕರ ಮತ್ತು ವಿಡಿಯೋ ಗ್ರಾಹಕರ ಸಂಘದ ಸಹಯೋಗದಲ್ಲಿ ಛಾಯಾಗ್ರಹಕರಿಗೆ ಅಂಚೆ ಅಪಘಾತ ವಿಮಾ ಯೋಜನೆಯ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಅಂಚೆ ಇಲಾಖೆಯ ಅಪಘಾತ ವಿಮಾ ಯೋಜನೆಯು 10 ಮತ್ತು 15 ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮಾ ಯೋಜನೆ ಯಾಗಿದ್ದು, ಕ್ರಮವಾಗಿ 549 ರೂ. 749 ರೂ. ಪ್ರತಿ ವರ್ಷ ವಿಮಾ ಕಂತು ಪಾವತಿಸಿದ ಬಳಿಕ ಯಾವುದೇ ಅಂಚೆ ಕಚೇರಿಯ ಮೂಲಕ ದಾಖಲೆ ಸಲ್ಲಿಸಿ ಸಣ್ಣಪುಟ್ಟ ಅಪಘಾತ ಸಂಭವಿಸಿದಾಗ ನಿರ್ದಿಷ್ಟ ಭಿಮಾ ಪರಿಹಾರ ಮೊತ್ತ ಪಡೆಯಬಹುದು. ಶಾಶ್ವತ ಅಂಗವಿಕಲರ ಸಂದರ್ಭದಲ್ಲಿ ಮತ್ತು ಮರಣ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವಿಮಾ ಮೊತ್ತವನ್ನು ಪಡೆಯಬಹುದು ಎಂದರು. ಅಂಚೆ ಪಾವತಿ ಬ್ಯಾಂಕ್ ಆದ ಬಳಿಕ ಭಾರತೀಯ ಅಂಚೆ ಇಲಾಖೆ ಆಧಾರ್ ನೋಂದಣಿ, ಠೇವಣಿ ಸ್ವೀಕಾರ, ಕೇಂದ್ರ ಸರ್ಕಾರದ ವಿವಿಧ ಯೋಜನೆ, ಸುಕನ್ಯಾ ಸಮೃದ್ಧಿ, ಮಹಿಳಾ ಸಮ್ಮಾನ್, ಕಿಸಾನ್ ವಿಕಾಸ್ ಸರ್ಟಿಫಿಕೇಟ್, ಅಟಲ್ ಪೆನ್ಷನ್ ಯೋಜನೆ ಸೇರಿದಂತೆ ವಿಸ್ತೃತವಾದ ಸೇವೆ ನೀಡುತ್ತಿದೆ ಎಂದು ಕಾಂಬಳೆ ಅವರು ವಿವರಿಸಿದರು.