ನಾರಾಯಣ ಗುರು ತತ್ವ ಸರ್ವಮಾನ್ಯ: ಮಹಾದೇವಪ್ಪ ಕಡೇಚೂರ್

ನಾರಾಯಣ ಗುರು ತತ್ವ ಸರ್ವಮಾನ್ಯ: ಮಹಾದೇವಪ್ಪ ಕಡೇಚೂರ್
ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವು ಆಧುನಿಕ ಜಗತ್ತಿಗೆ ಸರ್ವಮಾನ್ಯವಾಗಿರುವಂಥದ್ದು ಎಂದು ಹಿರಿಯ ಸಾಹಿತಿಗಳಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹದೇವಪ್ಪ ಕಡೇಚೂರ್ ಹೇಳಿದರು.
ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯಿಂದ ಜನಪ್ರಿಯ ಮಾಲಿಕೆಯಲ್ಲಿ ಹೊರ ತಂದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಬರೆದ "ನಾರಾಯಣ ಗುರು"ಕೃತಿಯನ್ನು ಸ್ವಗೃಹದಲ್ಲಿ ಬಿಡುಗಡೆ ಮಾಡಿ ಮಾತನಾಡಿ ನಾರಾಯಣ ಗುರುಗಳ ಅನೇಕ ಕೃತಿಗಳನ್ನು ತಾನು ಓದಿದ್ದು ಅವರ ತತ್ವಗಳು ಇಂದಿನ ಜಗತ್ತಿಗೆ ಅತ್ಯಂತ ಆದರ್ಶವಾಗಿರುವಂಥದ್ದು ಮಾತ್ರವಲ್ಲ ಅವರ ಜೀವಿತಾವಧಿಯಲ್ಲಿ ಕೇರಳದ ಅರವೀಪುರಂ ಮತ್ತು ಶಿವಗಿರಿಯಲ್ಲಿ ಮಾಡಿದ ಆಧ್ಯಾತ್ಮ ಸಾಧನೆ ಜಗತ್ತು ಮೆಚ್ಚುವಂಥದ್ದು. ನದಿಯಲ್ಲಿ ಮುಳುಗಿ ಶಿವಲಿಂಗವನ್ನು ತಂದು ದೇಗುಲ ನಿರ್ಮಿಸಿ ಶೋಷಿತ ಸಮುದಾಯಕ್ಕೆ ಪೂಜಾ ಸ್ವಾತಂತ್ರ್ಯವನ್ನು ಕೊಟ್ಟ ಮಹಾತ್ಮ ಎಂದು ಹೇಳಿದರು.
ನಾರಾಯಣ ಗುರುಗಳ ಕುರಿತಾಗಿ ಬರೆದ ಈ ಕೃತಿಯು ಮಕ್ಕಳಿಂದ ಹಿರಿಯರ ತನಕ ಅತ್ಯಂತ ಉಪಯುಕ್ತವಾಗಿದೆ ಎಂದು ಶ್ಲಾಘಿಸಿದರು.
ಲೇಖಕ ಡಾ. ಸದಾನಂದ ಪೆರ್ಲ ಮಹೇಶ್ ಕಡೇಚೂರು, ನಿಹಾರಿಕಾ,ಡಾ. ಕನುಪ್ರಿಯ, ಕು. ಧೃತಿ ಮತ್ತಿತರರು ಉಪಸ್ಥಿತರಿದ್ದರು.