ಸೌಜನ್ಯ ಹಡಪದ ಸಾವು-ಹಡಪದ ಸಮಾಜ ಪ್ರತಿಭಟನೆ
ಸೌಜನ್ಯ ಹಡಪದ ಅನುಮಾನಾಸ್ಪದ ಸಾವಿಗೆ ನ್ಯಾಯ ದೊರಕಲಿ!
ಯಾದಗಿರ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಪ್ರತಿಭಟನೆ
ಯಾದಗಿರ: ಯಾದಗಿರ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದ 17 ವರ್ಷದ ವಿದ್ಯಾರ್ಥಿನಿ *ಸೌಜನ್ಯ ಹಡಪದ* ಅವರ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಹೋರಾಟ ತೀವ್ರಗೊಂಡಿದೆ. ಸೌಜನ್ಯ ಅವರ ಮೃತದೇಹವು ಶಹಾಪೂರ ತಾಲೂಕಿನ ಗೋಗಿ ಕಾಲುವೆಯಲ್ಲಿ, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಪತ್ತೆಯಾಗಿದ್ದು, ಈ ಘಟನೆ ಜಿಲ್ಲೆಯಾದ್ಯಂತ ಆಕ್ರೋಶ ಮೂಡಿಸಿದೆ.
ಮೃತೆಯಾದ ಸೌಜನ್ಯ ಅವರು ಗಂಗಾವತಿ ತಾಲೂಕಿನಲ್ಲಿರುವ ಪಿ.ಯು.ಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದರು. ತಮ್ಮ ಊರಿಗೆ ತೆರಳುತ್ತಿದ್ದ ವೇಳೆ ಅವಳನ್ನು ದುಷ್ಕರ್ಮಿಗಳು ಕೊಲೆಮಾಡಿ ಕಾಲುವೆಗೆ ಎಸೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಮಂಗಳವಾರ ಇಂದು (ಅಕ್ಟೋಬರ್ 28) ಬೆಳಿಗ್ಗೆ 10:30ಕ್ಕೆ ಯಾದಗಿರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ* ನಡೆಸಲಾಗುತ್ತಿದೆ. ಸಮಾಜದ ನಾಯಕರು ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿರಿಸಿದ್ದಾರೆ —
* ಸೌಜನ್ಯ ಹತ್ಯೆ ಪ್ರಕರಣದ ಸೂಕ್ತ ತನಿಖೆ ನಡೆಯಬೇಕು.
* ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಪ್ರಕಾರ ಗಲ್ಲಿಗೇರಿಸಬೇಕು.
* ಮೃತಳ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು.
* ಅಪರಾಧಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿ ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು.
* ಸೌಜನ್ಯ ಅವರ ಕುಟುಂಬಕ್ಕೆ 5 ಎಕರೆ ಜಮೀನು ಹಾಗೂ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು.
ಸಮಾಜದ ಸದಸ್ಯರು ಈ ಘಟನೆ ಮಾನವೀಯತೆಯ ವಿರುದ್ಧದ ಕೃತ್ಯವಾಗಿದ್ದು, ಯಾವುದೇ ಧರ್ಮ ಅಥವಾ ಪಕ್ಷದ ಬಣ್ಣದಿಂದ ಮುಚ್ಚಿಹಾಕಲಾಗಬಾರದು ಎಂದು ಆಗ್ರಹಿಸಿದ್ದಾರೆ.
ಈ ಹೋರಾಟಕ್ಕೆ ವಿವಿಧ ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಬೆಂಬಲ ನೀಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಈ ಹೋರಾಟವನ್ನು ಡಾ. ಮಲ್ಲಿಕಾರ್ಜುನ ಹಡಪದ ಕುಳಗೇರಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, *ಕಲಬುರಗಿ ಜಿಲ್ಲಾ ಅಧ್ಯಕ್ಷ ಈರಣ್ಣ ಸಿ. ಹಡಪದ (ಸಣ್ಣೂರ)*, *ಗೌರವಾಧ್ಯಕ್ಷ ಬಸವರಾಜ ಹಡಪದ (ಸುಗೂರ ಎನ್)*, *ಅಯ್ಯಣ ಹಡಪದ, ಮಲ್ಲಣ್ಣ ಹಡಪದ (ಕನ್ನೆಳ್ಳಿ), ಹುಣಸಗಿ ತಾಲೂಕಾಧ್ಯಕ್ಷ ಹಣಮಂತ್ರಾಯ ಹಡಪದ, ಬಸವರಾಜ ಹಡಪದ (ಮುದ್ದನೂರ)* ಸೇರಿದಂತೆ ಅನೇಕ ಸಮಾಜ ಸೇವಕರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಈ ಕುರಿತು ಸಮಾಜದ ಸೇವಕ ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ ಎನ್) ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸೌಜನ್ಯಗೆ ನ್ಯಾಯ ದೊರಕುವ ತನಕ ಹೋರಾಟ ಮುಂದುವರಿಯಲಿದೆ ಎಂದು ಹಡಪದ ಸಮಾಜ ಘೋಷಿಸಿದೆ.
