ಮರದ ಕೊಂಬೆ ಬಿದ್ದು ಗಾಯಗೊಂಡ ಅಕ್ಷಯ್ ನಿಧನ – ಕುಟುಂಬದಲ್ಲಿ ಆಘಾತ, ಅಜ್ಜಿ ಕಣ್ಣೀರು

ಮರದ ಕೊಂಬೆ ಬಿದ್ದು ಗಾಯಗೊಂಡ ಅಕ್ಷಯ್ ನಿಧನ – ಕುಟುಂಬದಲ್ಲಿ ಆಘಾತ, ಅಜ್ಜಿ ಕಣ್ಣೀರು

ಮರದ ಕೊಂಬೆ ಬಿದ್ದು ಗಾಯಗೊಂಡ ಅಕ್ಷಯ್ ನಿಧನ – ಕುಟುಂಬದಲ್ಲಿ ಆಘಾತ, ಅಜ್ಜಿ ಕಣ್ಣೀರು

ಬೆಂಗಳೂರು, ಜೂನ್ 19:ಮರದ ಕೊಂಬೆ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬನಶಂಕರಿಯ ಕತ್ರಿಗುಪ್ಪೆ ನಿವಾಸಿ ಅಕ್ಷಯ್ (27) ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 1 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಜೂನ್ 15 ರಂದು, ಭಾನುವಾರದಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಮಟನ್ ತರಲು ಹೋಗಿದ್ದ ಅಕ್ಷಯ್ ಬ್ರಹ್ಮ ಮಂದಿರದ ಬಳಿ ಮರದ ಕೊಂಬೆ ತಲೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯನಗರ 3ನೇ ಬ್ಲಾಕಿನ ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ತಲೆ ಭಾಗದಲ್ಲಿ ರಕ್ತಸ್ತ್ರಾವ ತೀವ್ರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅಕ್ಷಯ್ ಸಾವನ್ನಪ್ಪಿದ್ದಾರೆ.

ಅಕ್ಷಯ್ ರಾಜಾಜಿನಗರದ ಖಾಸಗಿ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದ ಏಕೈಕ ಆರ್ಥಿಕ ಸಹಾಯವಾಗಿದ್ದ ಅವರು ತಮ್ಮ ದುಡಿಮೆಯಿಂದ ಎಲ್ಲರನ್ನೂ ಸಾಕುತ್ತಿದ್ದರು. ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕವಾತಾವರಣ ಮನೆಮಾಡಿದೆ.

ಅಕ್ಷಯ್‌ನ ಅಜ್ಜಿ ಸಾವಿತ್ರಮ್ಮ ತಮ್ಮ ನೋವಿನ ಕಥೆ ಹಂಚಿಕೊಳ್ಳುತ್ತಾ ಕಣ್ಣೀರಿಟ್ಟರು: "ನಾನೇನನ್ನೂ ದೇವರಲ್ಲಿ ನಂಬಲ್ಲ. ನನ್ನ ನಾಲ್ಕು ಮಕ್ಕಳನ್ನು ಕಳೆದುಕೊಂಡೆ. ಈಗ ಮೊಮ್ಮಗನನ್ನೂ ಕಳೆದುಕೊಂಡೆ. ದೇವರು ಇದ್ದಿದ್ದರೆ ನಮ್ಮ ಕುಟುಂಬದ ಈ ಸ್ಥಿತಿ ಆಗುತ್ತಿತ್ತಾ?"

ಅವರು ಹೇಳಿದರು, “ಮೊದಲ ಮಗನು 25 ವರ್ಷಗಳ ಹಿಂದೆ ಕರೆಂಟ್ ಶಾಕ್‌ನಿಂದ, ಇನ್ನೊಬ್ಬನು ಅಪಘಾತದಿಂದ, ಮಗಳು (ಅಕ್ಷಯ್ ತಾಯಿ) ಕಳೆದ ವರ್ಷ ಕ್ಯಾನ್ಸರ್‌ನಿಂದ, ಈಗ ಮೊಮ್ಮಗನೂ ಮರದ ಕೊಂಬೆಯಿಂದ… ದೇವರು ಎಲ್ಲಿದ್ದಾನೆ?”

ಇಂದು ಸಂಜೆ ಅಕ್ಷಯ್ ಅಂತಿಮ ದರ್ಶನಕ್ಕೆ ಬನ್ನೆಂದು ಕುಟುಂಬಸ್ಥರು ಆಪ್ತರನ್ನು ಕರೆದಿದ್ದಾರೆ. ಈ ದಾರುಣ ಘಟನೆ ಬೃಹತ್ ನಗರಗಳಲ್ಲಿ ಜನಸಾಮಾನ್ಯರ ಮೇಲೆ ಬೀಳುವ ಪ್ರಕೃತಿದುರಂತಗಳ ವಿರುದ್ಧ ಗಮನ ಹರಿಸುವ ಅಗತ್ಯವಿದೆ ಎಂಬ ಸಂದೇಶ ನೀಡಿದೆ.