ಗಾಂಧೀಜಿಯ ಸರ್ವೋದಯ ತತ್ವ ಇಂದಿನ ಕಾಲಕ್ಕೂ ಮಾರ್ಗದೀಪರ-ಜಂಪಾ

ಗಾಂಧೀಜಿಯ ಸರ್ವೋದಯ ತತ್ವ ಇಂದಿನ ಕಾಲಕ್ಕೂ ಮಾರ್ಗದೀಪರ-ಜಂಪಾ

ಗಾಂಧೀಜಿಯ ಸರ್ವೋದಯ ತತ್ವ ಇಂದಿನ ಕಾಲಕ್ಕೂ ಮಾರ್ಗದೀಪರ-ಜಂಪಾ

ಹುಮನಾಬಾದ್, ಅ.25:ಎಸ್.ಬಿ.ಸಿ.ಎಸ್. ಕಲಾ ಮತ್ತು ಎಸ್.ವಿ. ವಾಣಿಜ್ಯ, ವಿಜ್ಞಾನ ಕಾಲೇಜು ಹುಮನಾಬಾದದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಕಾರ್ಯಕ್ರಮದ ಅಂಗವಾಗಿ “ಮಹಾತ್ಮ ಗಾಂಧೀಜಿಯ ಸರ್ವೋದಯ ತತ್ವದ ಮಹತ್ವ”ಷವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಹುಮನಾಬಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವೀರಾಂತರೆಡ್ಡಿ ಜಂಪಾ ಅವರು ಉದ್ಘಾಟಿಸಿ ಮಾತನಾಡಿದರು. ಅವರು ಗಾಂಧೀಜಿಯವರು ಜನಸಾಮಾನ್ಯರ ಹಿತಕ್ಕಾಗಿ ಜೀವನವನ್ನೇ ಅರ್ಪಿಸಿದ ಮಹಾನ್ ತತ್ವಜ್ಞಾನಿ ಎಂದು ಕೊಂಡಾಡಿದರು. “ಗಾಂಧೀಜಿ ತಮ್ಮ ವಿಚಾರ ಪ್ರಸರಣಕ್ಕಾಗಿ ಪತ್ರಿಕಾ ಮಾಧ್ಯಮವನ್ನು ಆಶ್ರಯಿಸಿ ಇಂಡಿಯನ್ ಒಪೀನಿಯನ್, ಹರಿಜನ ಮುಂತಾದ ಪತ್ರಿಕೆಗಳ ಮೂಲಕ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ನೈತಿಕ ವಿಚಾರಗಳನ್ನು ಜನರಿಗೆ ತಲುಪಿಸಿದರು,” ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ರವೀಂದ್ರನಾಥಪ್ಪ ಕೆ. ಅವರು ಗಾಂಧೀಜಿಯ ತತ್ವಗಳು ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾದ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಹುಮನಾಬಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರವೀಂದ್ರಕುಮಾರ ಭಂಡಾರಿ ಅವರು “ಗಾಂಧೀಜಿ ವರ್ಧಾ ಹಾಗೂ ಸಾಬರಮತಿ ಆಶ್ರಮಗಳಲ್ಲಿ ಎಲ್ಲ ಧರ್ಮ, ಜಾತಿಯವರನ್ನೂ ಒಟ್ಟುಗೂಡಿಸಿ ಸಹಬಾಳ್ವೆಯ ಸಂದೇಶ ನೀಡಿದರು. ಪ್ರೀತಿ ಮನುಷ್ಯನ ನೈಸರ್ಗಿಕ ಗುಣವೆಂದು ಅವರು ನಂಬಿದ್ದರು” ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸಕರಾಗಿ ಯುವ ಸಾಹಿತಿ ಶಕೀಲ ಐ.ಎಸ್. ಅವರು ಮಾತನಾಡಿ, “ಗಾಂಧೀಜಿಯ ಸರ್ವೋದಯ ತತ್ವವು ಎಲ್ಲರ ಒಳಿತಿನ ಸಿದ್ಧಾಂತ. ಗ್ರಾಮ ಸ್ವಾವಲಂಬನೆ, ನೈರ್ಮಲ್ಯ, ನೂಲುವ ಕಾಯಕ, ವೃತ್ತಿ ಆಧಾರಿತ ಶಿಕ್ಷಣ, ಮಾನವೀಯ ಅವಲಂಬನೆ — ಇವುಗಳೆಲ್ಲ ಗಾಂಧೀಜಿಯ ಜೀವನದ ಮೂಲತತ್ವಗಳು. ಇಂದಿನ ಕಾಲದಲ್ಲಿ ಅವುಗಳನ್ನು ಪುನಃ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ,” ಎಂದು ಹೇಳಿದರು.

ಚಕೋರ ಸಾ ಜಿಲ್ಲಾ ಸಂಚಾಲಕ ಡಾ. ಮಕ್ತುಂಬಿ ಎಂ. ಅವರು ಉಪಸ್ಥಿತರಿದ್ದು, “ಮಕ್ಕಳಲ್ಲಿ ಸ್ವಚ್ಚತಾ ಅಭಿಯಾನಗಳ ಮೂಲಕ ಅರಿವು ಮೂಡಿಸಬೇಕು. ಇದು ಆರೋಗ್ಯ ಹಾಗೂ ನೈರ್ಮಲ್ಯ ಜೀವನಕ್ಕೆ ಮಾರ್ಗದರ್ಶಕ” ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕು. ಸಂಜೀವಿನಿ ಮತ್ತು ಕು. ಭಾಗ್ಯಶ್ರೀ ಪ್ರಾರ್ಥನೆ ನೆರವೇರಿಸಿದರು. ಪ್ರೊ. ಪ್ರವೀಣ ಈಶ್ವರ ಕಲಬುರಗಿ ಸ್ವಾಗತಿಸಿದರು, ಪ್ರೊ. ದೀಪಕ ಕಲಬುರಗಿ ನಿರೂಪಣೆ ನಡೆಸಿದರು, ಡಾ. ಸಂಗಪ್ಪ ತೌಡಿ ವಂದನಾರ್ಪಣೆ ಮಾಡಿದರು