ಹಂಪಿ ಕನ್ನಡ ವಿವಿಯ 33ನೇ ನುಡಿಹಬ್ಬ – ಮೂವರು ಸಾಧಕರಿಗೆ ನಾಡೋಜ ಗೌರವ!

ಹಂಪಿ ಕನ್ನಡ ವಿವಿಯ 33ನೇ ನುಡಿಹಬ್ಬ – ಮೂವರು ಸಾಧಕರಿಗೆ ನಾಡೋಜ ಗೌರವ!
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 4ರಂದು ನುಡಿಹಬ್ಬ – ನ್ಯಾ. ಶಿವರಾಜ್ ವಿ. ಪಾಟೀಲ್, ಕುಂ. ವೀರಭದ್ರಪ್ಪ, ಪಂಡಿತ್ ಎಂ. ವೆಂಕಟೇಶ್ ಕುಮಾರ್‌ಗೆ ನಾಡೋಜ ಗೌರವ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 33ನೇ ನುಡಿಹಬ್ಬದ ಉತ್ಸವ ಏಪ್ರಿಲ್ 4ರಂದು ವಿಜೃಂಭಣೆಯಿಂದ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿವಿಯು ಸಮಾಜ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಮೂವರು ಸಾಧಕರಿಗೆ ಪ್ರತಿಷ್ಠಿತ ನಾಡೋಜ ಗೌರವ ಪದವಿ ಪ್ರದಾನ ಮಾಡಲು ನಿರ್ಧರಿಸಿದೆ.
ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಶಿವರಾಜ್ ವಿ. ಪಾಟೀಲ್, ಹೆಸರಾಂತ ಬರಹಗಾರ ಮತ್ತು ಚಿಂತಕ ಕುಂ. ವೀರಭದ್ರಪ್ಪ, ಪದ್ಮಶ್ರೀ ಪುರಸ್ಕೃತ ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಅವರಿಗೆ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡೋಜ ಗೌರವ ಪ್ರದಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ, ವಿವಿಯ ವಿವಿಧ ವಿಭಾಗಗಳ 198 ಪಿಎಚ್.ಡಿ ಪದವೀಧರರಿಗೆ ಉನ್ನತ ಶಿಕ್ಷಣ ಸಚಿವ
ಡಾ. ಎಂ.ಸಿ. ಸುಧಾಕರ್ ಅವರು ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿವಿಯ ವಕ್ತಾರರು ತಿಳಿಸಿದ್ದಾರೆ.
ಈ ವರ್ಷವೂ ನುಡಿಹಬ್ಬದಲ್ಲಿ ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳ ಕುರಿತ ಚರ್ಚೆಗಳು, ವಿಚಾರ ಸಂಕಿರಣಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
— ಕೆಕೆಪಿ ಸುದ್ದಿ