ಮೈಸೂರು ದಸರಾ ಕವಿಗೋಷ್ಠಿಗೆ ಡಾ. ಶರಣಬಸಪ್ಪ ವಡ್ಡನಕೇರಿ ಆಯ್ಕೆ

ಮೈಸೂರು ದಸರಾ ಕವಿಗೋಷ್ಠಿಗೆ ಡಾ. ಶರಣಬಸಪ್ಪ ವಡ್ಡನಕೇರಿ ಆಯ್ಕೆ

ಮೈಸೂರು ದಸರಾ ಕವಿಗೋಷ್ಠಿಗೆ ಡಾ. ಶರಣಬಸಪ್ಪ ವಡ್ಡನಕೇರಿ ಆಯ್ಕೆ

ಮೈಸೂರು: ಮುಂಬರುವ ದಸರಾ ಕವಿಗೋಷ್ಠಿಗೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೋಂಗರಗಾಂವ್ ಗ್ರಾಮದ ಮೂಲದ ಪ್ರಾಧ್ಯಾಪಕ ಹಾಗೂ ಖ್ಯಾತ ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ತಿಂಗಳ 24ರಂದು ಮೈಸೂರಿನಲ್ಲಿ ನಡೆಯುವ ದಸರಾ ಕವಿಗೋಷ್ಠಿಯಲ್ಲಿ ಅವರು ತಮ್ಮ ಕವನಗಳನ್ನು ವಾಚಿಸಲಿದ್ದಾರೆ.

ಡಾ. ವಡ್ಡನಕೇರಿ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಊರಿನಲ್ಲಿ ಪೂರ್ಣಗೊಳಿಸಿ, ನಂತರ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕನ್ನಡ, ಪತ್ರಿಕೋದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ಪದವಿ ಹಾಗೂ ಅಧ್ಯಯನ ನಡೆಸಿದ್ದಾರೆ. ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.

ಸಾಹಿತ್ಯ ರಚನೆಯಲ್ಲಿ ಅವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಈಗಾಗಲೇ 100 ಕ್ಕಿಂತ ಹೆಚ್ಚು ಸೃಜನ ಮತ್ತು ಸೃಜನೇತರ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಜೊತೆಗೆ 150 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಕರಾಗಿ ಹೊರತಂದಿದ್ದಾರೆ. ಅವರ “ಸ್ಪರ್ಧಾ ಕನ್ನಡ” ಸೇರಿದಂತೆ ಅನೇಕ ಕೃತಿಗಳು ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳಲ್ಲಿ ಜನಪ್ರಿಯತೆ ಪಡೆದಿವೆ. ಕಲಬುರಗಿಯ ಸಾಹಿತ್ಯ ಹಾಗೂ ಸಂಸ್ಕೃತಿಕ ವಲಯದಲ್ಲಿ ಅವರು ಮಹತ್ವದ ಸ್ಥಾನ ಗಳಿಸಿದ್ದಾರೆ.

ಡಾ. ವಡ್ಡನಕೇರಿ ಅವರ ಹೆಸರಿನಲ್ಲಿ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಇಂದಿಯನ್ ಬುಕ್ ಆಫ್ ರೆಕಾರ್ಡ್, ಪ್ರೆಸ್ಟಿಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿ ಹಲವು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಗೌರವ ದಾಖಲಾಗಿವೆ. ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಅವರು ಭಾಗವಹಿಸಿ ಅಧ್ಯಕ್ಷತೆ ವಹಿಸಿರುವುದರ ಜೊತೆಗೆ ವಿವಿಧ ಸಂಘ-ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ ಪ್ರಪಂಚದಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ.

-