ಕರ್ನಾಟಕ ಹೈಕೋರ್ಟ್ ನಲ್ಲಿ ಬಾನು ಮುಷ್ತಾಕ್ ಅವರ ಗೆಲವು ಸಂವಿಧಾನದ ಮೌಲ್ಯಗಳ ಗೆಲುವು, ಪ್ರಜಾಪ್ರಭುತ್ವದ ಗೆಲುವು- ಮುಕ್ಕಣ್ಣ ಕರಿಗಾರ

ಕರ್ನಾಟಕ ಹೈಕೋರ್ಟ್ ನಲ್ಲಿ ಬಾನು ಮುಷ್ತಾಕ್ ಅವರ ಗೆಲವು ಸಂವಿಧಾನದ ಮೌಲ್ಯಗಳ ಗೆಲುವು, ಪ್ರಜಾಪ್ರಭುತ್ವದ ಗೆಲುವು- ಮುಕ್ಕಣ್ಣ ಕರಿಗಾರ

ಕರ್ನಾಟಕ ಹೈಕೋರ್ಟ್ ನಲ್ಲಿ ಬಾನು ಮುಷ್ತಾಕ್ ಅವರ ಗೆಲವು ಸಂವಿಧಾನದ ಮೌಲ್ಯಗಳ ಗೆಲುವು, ಪ್ರಜಾಪ್ರಭುತ್ವದ ಗೆಲುವು- ಮುಕ್ಕಣ್ಣ ಕರಿಗಾರ

ಬೀದರ :ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿನ ಹೈಕೋರ್ಟ್ ವಿಭಾಗೀಯ ಪೀಠವು ಮಾಜಿ ಸಂಸದ ಪ್ರತಾಪಸಿಂಹ ಮತ್ತಿತರರು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಲೇಖಕಿ ಬಾನು ಮುಷ್ತಾಕ್ ಅವರು

ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಸರಕಾರದ ನಿರ್ಧಾರಕ್ಕೆ ತಡೆ ನೀಡಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸುವ ಮೂಲಕ ಕರ್ನಾಟಕ ಹೈಕೋರ್ಟ್ ಪ್ರತಾಪಸಿಂಹ ಅವರಿಗೆ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಪಾಠಗಳನ್ನು ಹೇಳಿಕೊಟ್ಟಿದೆ.ಇದು ಕರ್ನಾಟಕ ಸರಕಾರದ ಗೆಲುವು ಮತ್ತು ಬಾನು ಮುಷ್ತಾಕ್ ಅವರಿಗೆ ಸಂದ ಗೆಲುವು ಮಾತ್ರವಾಗಿರದೆ ಸಂವಿಧಾನದ ಮೌಲ್ಯಗಳ ಗೆಲುವು,ಪ್ರಜಾಪ್ರಭುತ್ವದ ಗೆಲುವು.ಮುಖ್ಯ ನ್ಯಾಯಾಧೀಶರಾದ ವಿಭು ಖಬ್ರು ಅವರ ನೇತೃತ್ವದಲ್ಲಿನ ಹೈಕೋರ್ಟ್ ಪೀಠವು ಮಾಜಿ ಸಂಸದ ಪ್ರತಾಪಸಿಂಹ, ಟಿ ಆರ್ ಗಿರೀಶಕುಮಾರ್,ಆರ್ ಸೌಮ್ಯ ಅವರು ಸಲ್ಲಿಸಿದ್ದ ಪ್ರತ್ಯೇಕ ಐಪಿಎಲ್ ಗಳನ್ನು ವಜಾಗೊಳಿಸುವ ಮೂಲಕ ಭಾರತದ ಸಂವಿಧಾನದ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದಿದೆ.

    ಪ್ರತಾಪಸಿಂಹ ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದಾಗ ನಾನು 06.09.2025 ರಂದು ಬರೆದಿದ್ದ " ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡಬಾರದು ಎಂದು ಹಂಬಲಿಸುವ ಪ್ರತಾಪಸಿಂಹ ಅವರ ಸಂವಿಧಾನ ವಿರೋಧಿ ನಡೆ" ಎನ್ನುವ ನನ್ನ " ಮೂರನೇಕಣ್ಣು" ವಾಟ್ಸಾಪ್ ಅಂಕಣಬರಹಗಳ ಲೇಖನದಲ್ಲಿ ನಾನು ಸಂವಿಧಾನದ ಪೀಠಿಕೆಯಿಂದ ಹಿಡಿದು ವಿವಿಧ ಅನುಚ್ಛೇದಗಳಂತೆ ಪ್ರತಾಪಸಿಂಹ ಅವರ ನಡೆ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವದರಿಂದ " ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ತಡೆಯಾಜ್ಞೆ ನೀಡುವುದಿಲ್ಲ ಎನ್ನುವ ಸಂಗತಿ ಗೊತ್ತಿದ್ದರೂ ಪ್ರತಾಪಸಿಂಹ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು ಅವರ ಪ್ರಚಾರಪ್ರಿಯತೆಯಲ್ಲದೆ ಮತ್ತೇನೂ ಅಲ್ಲ" ಎಂದು ಸ್ಪಷ್ಟವಾಗಿ ಹೇಳಿದ್ದೆ.ಕರ್ನಾಟಕ ಹೈಕೋರ್ಟ್ ನ ಈ ತೀರ್ಪು ನನ್ನಂತಹ ಸಂವಿಧಾನಬದ್ಧ ಮನಸ್ಸುಗಳಿಗೆ ನೆಮ್ಮದಿಯನ್ನುಂಟು ಮಾಡಿದೆ.

        ಈ ಸಂದರ್ಭದಲ್ಲಿ ಮತ್ತೊಂದು ಬೇಸರದ ಸಂಗತಿಯನ್ನು ಪ್ರಸ್ತಾಪಿಸಲೇಬೇಕು.ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟನೆ ಮಾಡಿಸುವ ಸರಕಾರದ ನಿಲುವು ಮತ್ತು ಬಾನು ಮುಷ್ತಾಕ್ ಅವರನ್ನು ವಿರೋಧಿಸುವವರ ಸಂವಿಧಾನ ವಿರೋಧಿ ನಿಲುವು ಮತ್ತು ಸಂಕುಚಿತ ಭಾವನೆಗಳನ್ನು ನಮ್ಮ ' ಖ್ಯಾತನಾಮ ಸಾಹಿತಿಗಳು' ಎನ್ನಿಸಿಕೊಂಡವರು ಖಂಡಿಸದೇ ಇರುವುದು. ಮೈಸೂರಿನ ಕೆಲವು ಜನ ಮಹಿಳಾ ಲೇಖಕಿಯರು ಬಾನು ಮುಷ್ತಾಕ್ ಅವರ ಬೆಂಬಲಕ್ಕೆ ನಿಂತದ್ದು ಬಿಟ್ಟರೆ ಕನ್ನಡದ ಬಹುದೊಡ್ಡ ಬರಹಗಾರರು ಎಂದು ಬೀಗುತ್ತಿರುವವರು ಬಾನು ಮುಷ್ತಾಕ್ ಅವರ ಪರವಾಗಿ ಮಾತನಾಡಲೇ ಇಲ್ಲ ! ಅಲ್ಲಲ್ಲಿ ಕೆಲವರು ವೈಯಕ್ತಿಕ ನೆಲೆಯಲ್ಲಿ ಮಾತನಾಡಿದರು.ಏನಾಗಿದೆ ನಮ್ಮ ಕನ್ನಡ ಕವಿ ಸಾಹಿತಿಗಳಿಗೆ? ಸಂವಿಧಾನದ ಮೌಲ್ಯಗಳ ಬಗ್ಗೆ ಮಾತನಾಡದಷ್ಟು ಕನ್ನಡ ಸಾಹಿತಿಗಳ ಧ್ವನಿ ಉಡುಗಿ ಹೋಗಿದೆಯೆ? ನಮ್ಮ ಸಾಹಿತಿಗಳ ಸಣ್ಣತನಕ್ಕೆ ಇದೊಂದು ನಿದರ್ಶನ.ಬರಹದಿಂದಷ್ಟೇ ದೊಡ್ಡವರಾಗಿರುವ ನಮ್ಮ ಬಹುಪಾಲು ಸಾಹಿತಿಗಳು ಬದುಕಿನಿಂದ ದೊಡ್ಡವರಾಗಿಲ್ಲ.ಬದುಕು ಮತ್ತು ಬರಹಗಳೆರಡರಿಂದಲೂ ದೊಡ್ಡವರಾದವರು ಮಾತ್ರ ನಮಗೆ ಆದರ್ಶ.ಕವಿ ಸಾಹಿತಿಗಳೆನ್ನಿಸಿಕೊಂಡವರೇ ದೇಶದ ಸಂಸ್ಕೃತಿ,ಸದ್ಭಾವನೆ,ಸಮನ್ವಯ ತತ್ತ್ವಗಳನ್ನು ಪ್ರತಿಪಾದಿಸದಿದ್ದರೆ? ಸಾಹಿತಿಗಳೇ ಸಂವಿಧಾನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳದಿದ್ದರೆ?

      ಬಾನು ಮುಷ್ತಾಕ್ ಅವರು ಬೂಕರ್ ಪ್ರಶಸ್ತಿ ಪಡೆದುದನ್ನು ಅರಗಿಸಿಕೊಳ್ಳದ ನಮ್ಮ ಸಾಹಿತಿಗಳ ಅಸಹನೆಯು ಅವರ ಮೌನದ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ.ನಮ್ಮಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರು ಇರುವಂತೆ ಅದನ್ನು : ಹೊಡೆದವರು' ' ಹೊಡೆಯಬಯಸುವವರು' ಇದ್ದಾರೆ.ಜ್ಞಾನಪೀಠ ಪ್ರಶಸ್ತಿಯಂತಹ ಪ್ರತಿಷ್ಠಿತ ಪ್ರಶಸ್ತಿಯ ಮೇಲೆ ಕಣ್ಣಿಟ್ಟವರು ತಾವು ಬಾನು ಮುಷ್ತಾಕ್ ಅವರನ್ನು ಬೆಂಬಲಿಸಿದರೆ ಪ್ರಶಸ್ತಿ ಕೈತಪ್ಪಬಹುದು ಎನ್ನುವ ಜಾಣನಡೆ ಅನುಸರಿಸಿರಬಹುದು.ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಕನ್ನಡ ಸಾಹಿತ್ಯಲೋಕಕ್ಕೆ ಸಂದಗೌರವ.ಇತರರು ಅರ್ಥಮಾಡಿಕೊಳ್ಳಲಿ ಬಿಡಲಿ ನಮ್ಮ ಸಾಹಿತಿಗಳು ಇದನ್ನು ಅರ್ಥಮಾಡಿಕೊಳ್ಳಬೇಕಿತ್ತು.ಈ ಸಂದರ್ಭದಲ್ಲಿ ಕುವೆಂಪು, ಕಾರಂತ,,ತೇಜಸ್ವಿ,ಲಂಕೇಶ ಅವರಂತಹವರು ಇದ್ದಿದ್ದರೆ?

      ಕರ್ನಾಟಕ ಹೈಕೋರ್ಟ್ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಬಾನು ಮುಷ್ತಾಕ್ ಅವರನ್ನು ವಿರೋಧಿಸಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಯವವರಿಗೆ ಸ್ಪಷ್ಟವಾದ ಒಂದು ಪಾಠ ಕಲಿಸಿದೆ.' ಅನ್ಯ ಕೋಮಿಗೆ ಸೇರಿದವರು ಎನ್ನುವ ಒಂದೇ ಕಾರಣಕ್ಕೆ ಬಾನು ಮುಷ್ತಾಕ್ ಅವರನ್ನು ವಿರೋಧಿಸುವವರು ಯಾವ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿದೆ ? ' ಎಂದು ಪ್ರಶ್ನಿಸಿರುವ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ಪೀಠದ ಪ್ರಶ್ನೆಗೆ ಜಾತಿ ಮತ ಧರ್ಮಗಳ ಹೆಸರಿನಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುತ್ತಿರುವ ಕಳೆ ಕೊಳೆ ತುಂಬಿಕೊಂಡ ಮಲಿನಮನಸ್ಕರುಗಳು ಆತ್ಮವಿಮರ್ಶೆ ಮಾಡಿಕೊಂಡು ಉತ್ತರ ಕಂಡುಕೊಳ್ಳಬೇಕು.ಭಾರತದಲ್ಲಿ ಬದುಕುತ್ತಿರುವ ಯಾರೇ ಆಗಿರಲಿ ವೈಯಕ್ತಿಕ ನೆಲೆಯಲ್ಲಿ ಅವರವರ ನಂಬಿಕೆಯಂತೆ ನಡೆದುಕೊಳ್ಳಬಹುದೇ ಹೊರತು ಸಾರ್ವಜನಿಕ ಜೀವನದಲ್ಲಿ ಪ್ರಬುದ್ಧ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಲೇಬೇಕು ಎನ್ನುವ. ಸಂದೇಶವೂ ಅಡಗಿದೆ ಬಾನು ಮುಷ್ತಾಕ್ ಅವರ ಗೆಲುವಿನಲ್ಲಿ.