ಬೀದರ್: ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರಧಾನ ಹಾಗೂ ಪರಿಸರ ಜಾಗೃತಿ ಉಪನ್ಯಾಸ

ಬೀದರ್: ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರಧಾನ ಹಾಗೂ ಪರಿಸರ ಜಾಗೃತಿ ಉಪನ್ಯಾಸ

ಬೀದರ್: ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರಧಾನ ಹಾಗೂ ಪರಿಸರ ಜಾಗೃತಿ ಉಪನ್ಯಾಸ

ಬೀದರ್ ತಾಲೂಕಿನ ಕಂಗನಕೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನಾಚರಣೆ, ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ಪರಿಸರ/ಆರೋಗ್ಯ ಜಾಗೃತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಪರಿಸರ ಜಾಗೃತಿ ವಿಷಯವನ್ನು ಪ್ರಾಥಮಿಕದಿಂದ ಪ್ರೌಢಶಾಲಾ ಮಟ್ಟದವರೆಗಿನ ಪಾಠ್ಯಕ್ರಮದಲ್ಲಿ ಸೇರಿಸಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಮಕ್ಕಳಲ್ಲಿ ಪರಿಸರ ಅರಿವು ಮೂಡಿಸಲು ಶಾಲಾ ಆವರಣದಲ್ಲಿ ಸಸಿ ನೆಡುವುದು, ಅವುಗಳ ಜೋಪಾನ ಮಾಡುವುದು ಸೇರಿದಂತೆ ಪರಿಸರ ಸಂರಕ್ಷಣಾ ಕಾರ್ಯಗಳಲ್ಲಿ ಅವರನ್ನು ತೊಡಗಿಸಬೇಕು ಎಂದರು.

ಉಪನ್ಯಾಸಕರಾಗಿ ಭಾಗವಹಿಸಿದ ಡಾ. ಶ್ರೇಯಾ ಮಹೇಂದ್ರಕರ್ ರವರು ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ನೀಡಿ, ಹೆಣ್ಣು-ಗಂಡು ಭೇದವಿಲ್ಲದೆ ಒಂದೇ ತರದ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು. “ಗುಡ್ ಟಚ್–ಬ್ಯಾಡ್ ಟಚ್ ಬಗ್ಗೆ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸರ್ಕಾರ ಕಠಿಣ ಶಿಕ್ಷೆ ಜಾರಿಗೆ ತರಬೇಕು” ಎಂದು ಅವರು ಒತ್ತಾಯಿಸಿದರು.

ಅರವಿಂದ ಕುಲಕರ್ಣಿ (ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷರು) ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಶಿಕ್ಷಕರು ಸಮಾಜದ ಶಿಲ್ಪಿಗಳು. ಮಕ್ಕಳ ಸಮಗ್ರ ಬೆಳವಣಿಗೆಯ ಹೊಣೆಗಾರಿಕೆ ಅವರ ಮೇಲಿದೆ” ಎಂದರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಸಿದ್ಧಾ ರೋಡ ಭಾಲ್ಕೆ (ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕ ಅಧ್ಯಕ್ಷರು) ಅವರು ಶಿಕ್ಷಕರನ್ನು ಗೌರವಿಸುವುದರ ಮೂಲಕ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಅನೇಕ ಶಿಕ್ಷಕಿಯರಿಗೆ **‘ಶಿಕ್ಷಣ ರತ್ನ’ ಪ್ರಶಸ್ತಿ** ನೀಡಿ ಸನ್ಮಾನಿಸಲಾಯಿತು.

ಶಾಲಾ ಮಕ್ಕಳಿಂದ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆ ನಡೆಯಿತು. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಓಂಕಾರ ಪಾಟೀಲ, ಬಸವರಾಜ್ ಕೇರಳೆ, ಸಂಗಮೇಶ್ವರ ಜಾಂತೆ, ಸಂತೋಷ್ ತೋರಣ, ಗಣಪತಿ ಶಂಭು, ಕೃಷ್ಣಬಾಯಿ ಮೇತ್ರೆ, ಅವಿರ ಸವಂತ, ಅಶೋಕ, ನಾಗಶೆಟ್ಟಿ ಸೇರಿದಂತೆ ಅನೇಕ ಗಣ್ಯರು, ಶಾಲಾ ಮುಖ್ಯಗುರು ಕವಿತಾ, ಶಿಕ್ಷಕಿಯರಾದ ಲಕ್ಷ್ಮಿ ಲಕ್ಕಾ, ರೇಖಾ, ರೂಪ ಶಂಭು ಹಾಗೂ ಗ್ರಾಮಸ್ಥರು ಭಾಗವಹಿಸಿದರು.