ನಾಟಕಕಾರ ಆಲ್ದಾಳ ಸ್ಮಾರಕ ನಿರ್ಮಾಣಕ್ಕೆ ಶ್ರೀಗಳ ಸಲಹೆ

ನಾಟಕಕಾರ ಆಲ್ದಾಳ ಸ್ಮಾರಕ ನಿರ್ಮಾಣಕ್ಕೆ ಶ್ರೀಗಳ ಸಲಹೆ
ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಏಕೈಕ ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತ ನಾಟಕಕಾರರಾಗಿದ್ದ ಎಲ್.ಬಿ.ಕೆ.ಆಲ್ದಾಳ ಹೆಸರನ್ನು ಚಿರಸ್ಥಾಯಿಗೊಳಿಸಲು ಅವರ ಹೆಸರಿನಲ್ಲಿ ಟ್ರಸ್ಟ್ ಮಾಡಿದ್ದು ಸ್ವಾಗತಾರ್ಹವಾಗಿದ್ದು, ಟ್ರಸ್ಟ್ ಅಡಿಯಲ್ಲಿ ಆಲ್ದಾಣ ಸ್ಮಾರಕ ನಿರ್ಮಾಣವಾಗಬೇಕು ಎಂದು ಸಾನಿಧ್ಯ ವಹಿಸಿದ್ದ ಬಸವಕಲ್ಯಾಣ ತಾಲೂಕಿನ ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಸಲಹೆ ನೀಡಿದರು.
ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿರುವ ಕಮತಗಿ ತಂಗಮAದಿರಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಲ್.ಬಿ.ಕೆ.ಆಲ್ದಾಳ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ, ಶುಕ್ರವಾರ ಮೌನವ್ರತದ ಹಿನ್ನಲೆಯಲ್ಲಿ ಲಿಖಿತ ಸಂದೇಶ ನೀಡಿದ ಅವರು, ಆಲ್ದಾಳರ ಕೊಡುಗೆ ಈ ನಾಡಿಗೆ ಅತ್ಯುತ್ತಮವಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆಲ್ದಾಳರ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಾರಕೂಡದ ಸಂಸ್ಥಾನ ಹಿರೇಮಠದಲ್ಲಿ ಆಯೋಜಿಸುವುದಾದರೆ, ಮುಂದಿನ ಮೂರು ವರ್ಷಗಳ ಕಾಲ ಶ್ರೀಮಠದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಸಾನ್ನಿಧ್ಯವಹಿಸಿದ್ದ ಜೇವರ್ಗಿ ತಾಲೂಕಿನ ಶಾಖಾಪೂರ ತಪೋವನ ಮಠದ ಡಾ.ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಕಲ್ಯಾಣ ನಾಡಿನ ಶರಣಪರಂಪರೆಯನ್ನು ಅಧ್ಯಯನ ಮಾಡಿದ್ದ ಆಲ್ದಾಳರು ಕಲ್ಯಾಣ ಭಾಗದ ಬಹುಮುಖ್ಯ ಮಠಗಳ ಚರಿತ್ರೆ ಹಾಗೂ ಮಠಾಧೀಶರ ಕುರಿತು ನಾಟಕಗಳನ್ನು ಬರೆದು ಪ್ರಕಟಿಸಿ, ನಾಡಿನ ಶರಣ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದನ್ನು ಮರೆಯಕೂಡದು. ಮುಂದಿನ ಪೀಳಿಗೆ ಅವರನ್ನು ನೆನಪಿಸಿಕೊಳ್ಳುವ ರೀತಿಯಲ್ಲಿ ಅವರ ಸ್ಮಾರಕ ನಿರ್ಮಾಣವಾಗಬೇಕು ಎಂದರು. ಸಾನ್ನಿಧ್ಯವಹಿಸಿದ್ದ ಶ್ರೀನಿವಾಸ ಸರಡಗಿಯ ಸಂಸ್ಥಾನ ಹಿರೇಮಠದ ಡಾ. ರೇವಣಸಿದ್ಧ ಶಿವಾಚಾರ್ಯರು ಮತ್ತು ಚಿತ್ತಾಪುರ ತಾಲೂಕು ಅಳ್ಳಳ್ಳಿ ಗದ್ದಿಗೆಮಠ ಮಹಾತ್ಮಪೀಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಗಳು ಮಾತನಾಡಿದರು.
ಆಲ್ದಾಳ ಕವಿಗಳು ರಚಿಸಿದ ವೈರಾಗ್ಯಮೂರ್ತಿ ಕರಿಗೂಳೇಶ್ವರ ಮಹಾತ್ಮೆ ಅರ್ಥಾತ್ ಮೂರು ಮುತ್ತುಗಳು ಕೃತಿಯನ್ನು ತೋಟಗಾರಿಕೆ ಇಲಾಖೆಯ ಹಾಫಕಾಮ್ ಮಾಜಿ ಅಧ್ಯಕ್ಷರಾದ ಬಸವರಾಜ ಪಾಟೀಲ ಊಡಗಿ ಬಿಡುಗಡೆ ಮಾಡಿ ಮಾತನಾಡಿದರು.
ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅವರು, ಎಲ್.ಬಿ.ಕೆ.ಆಲ್ದಾಳ ಟ್ರಸ್ಟ್ ಉದ್ಘಾಟಿಸಿ, ಹಿರಿಯ ನಾಟಕಕಾರ ರಾಜಣ್ಣ ಜೇವರ್ಗಿ ಅವರಿಗೆ ಆಲ್ದಾಳ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಉದ್ಯಮಿಗಳಾದ ನೀಲಕಂಠರಾವ ಮೂಲಗೆ, ರಮೇಶ ಜಿ.ತಿಪ್ಪನೂರ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಲ್.ಬಿ.ಶೇಕ್ ಮಾಸ್ತರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಶಂಕರ ಹಿಪ್ಪರಗಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಬಿ.ಎಚ್.ನಿರಗುಡಿ ನಿರೂಪಿಸಿದರು. ಖಜಾಂಚಿ ಸೂರ್ಯಕಾಂತ ಹಂಗನಳ್ಳಿ ವಂದಿಸಿದರು.
ನನ್ನ ಸಮಕಾಲೀನ ಕವಿ, ನಾಟಕಕಾರರಾಗಿದ್ದ , ವೈಯಕ್ತಿಕವಾಗಿ ಆತ್ಮೀಯರಾಗಿದ್ದ ಆಲ್ದಾಳರಂತಹ ಹಿರಿಯ ನಾಟಕಕಾರರ ಸ್ಮರಣೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಸಂತಸವಾಗಿದೆ.
- ಜೇವರ್ಗಿ ರಾಜಣ್ಣ, ಪ್ರಶಸ್ತಿ ಪುರಸ್ಕೃತರು.
ಭಕ್ತಿ ಭಾವದಲ್ಲಿ ತೇಲಿಸಿದ ನಾಟಕ
ಟ್ರಸ್ಟ್ ಉದ್ಘಾಟನೆ ಸಂದರ್ಭಕ್ಕೆAದು ಸೇಡಂನ ಶ್ರೀ ಮಡಿವಾಳೇಶ್ವರ ನಾಟ್ಯಸಂಘದ ಕಲಾವಿದರು ಅಭಿನಯಿಸಿದ, ಆಲ್ದಾಳರು ರಚಿಸಿದ ಸದ್ಭಾವನಮೂರ್ತಿ ಸಪ್ಪಣ್ಣಾರ್ಯ ನಾಟಕವು ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು. ನುರಿತ ಕಲಾವಿದರ ಅಮೋಘ ಅಭಿನಯದಿಂದಾಗಿ ಈ ಆಧ್ಯಾತ್ಮಿಕ ನಾಟಕವು ಪ್ರೇಕ್ಷಕರನ್ನು ಭಕ್ತಿಭಾವದಲ್ಲಿ ತೇಲಿಸಿತು. ಸೇಡಂನ ಹಾಲಪ್ಪಯ್ಯ ವಿರಕ್ತಮಠದ ಶ್ರೀ ಪಂಚಾಕ್ಷರ ಸ್ವಾಮಿಗಳು ಪ್ರದರ್ಶನ ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ, ಗುರಪ್ಪ ಪಾಟೀಲ ನಂದೂರ, ಸಿದ್ದಪ್ಪ ತಳ್ಳಳ್ಳಿ, ವೀರಣಗೌಡ ರೆಮ್ಮಣ್ಣಿ, ಹೊಳೆ ಹುಚ್ಚೇಶ್ವರ ನಾಟ್ಯಸಂಘದ ಮಾಲೀಕರಾದ ಪಾಪು ಕಲ್ಲೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.