ಶೆಟ್ಟಿ ಸಿನಿಮಾಸ್ ಗೆ ರಾಷ್ಟ್ರೀಯ ಐ ಮ್ಯಾಕ್ಸ್ ಸಿನಿ ಪ್ರಶಸ್ತಿ ಯುವಕರ ಐಕಾನ್ ಸಂಗಪ್ಪ ಶೆಟ್ಟಿ ಸಾಧನೆ ಕಲ್ಯಾಣ ಕರ್ನಾಟಕದ ಹೆಮ್ಮೆ

ಶೆಟ್ಟಿ ಸಿನಿಮಾಸ್ ಗೆ ರಾಷ್ಟ್ರೀಯ ಐ ಮ್ಯಾಕ್ಸ್ ಸಿನಿ ಪ್ರಶಸ್ತಿ
ಯುವಕರ ಐಕಾನ್ ಸಂಗಪ್ಪ ಶೆಟ್ಟಿ ಸಾಧನೆ ಕಲ್ಯಾಣ ಕರ್ನಾಟಕದ ಹೆಮ್ಮೆ
ಕಲಬುರಗಿ : ರಾಷ್ಟ್ರೀಯ ಮಟ್ಟದ " ಐ ಮ್ಯಾಕ್ಸ್ ಬಿಗ್ ಸಿನಿಮಾ - 2025 "ಪ್ರಶಸ್ತಿ ಪುರಸ್ಕೃತರಾದ ಕಲಬುರಗಿಯ ಶೆಟ್ಟಿ ಸಿನಿಮಾಸ್ ನ ಆಡಳಿತ ನಿರ್ದೇಶಕರಾದ ಯುವ ಉದ್ಯಮಿ ಸಂಗಪ್ಪ ಗಿರಿಜಾ ಶಂಕರ್ ಶೆಟ್ಟಿಯವರು ಯುವಕರ ಐಕಾನ್ ಆಗಿ ಹೆಮ್ಮೆ ತಂದಿದ್ದಾರೆ ಎಂದು ದಿಶಾ ಕಾಲೇಜಿನ ಅಧ್ಯಕ್ಷರಾದ ಶಿವಾನಂದ ಖಜೂರಗಿ ತಿಳಿಸಿದ್ದಾರೆ.
ಕಲಬುರಗಿಯ ಶೆಟ್ಟಿ ಸಿನಿಮಾ ಥಿಯೇಟರ್ ಸಭಾಂಗಣದಲ್ಲಿ ಐ ಮ್ಯಾಕ್ಸ್ ಬಿದ್ದು ಸಿನಿಮಾ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ರಾಷ್ಟ್ರದ ಎರಡನೇ ಹಂತದ ನಗರಗಳಲ್ಲಿರುವ ಅತ್ಯುತ್ತಮ ಸಿನೆಮಾ ಥಿಯೇಟರ್ ಎಂಬ ಹೆಗ್ಗಳಿಕೆಗೆ ಕಲಬುರಗಿ ಪಾತ್ರವಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದು ಭಾರತದ ರಂಗಭೂಮಿ ಮನರಂಜನಾ ನಕಾಶೆಯಲ್ಲಿ ಕಲಬುರಗಿಯ ಹೆಸರು ದಾಖಲೆ ಮಾಡಿರುವ ಹೆಗ್ಗಳಿಕೆ ಸಂಗಪ್ಪ ಶೆಟ್ಟಿಯವರಿಗೆ ಸಲ್ಲುತ್ತದೆ. ಇವರಂತಹ ಯುವಶಕ್ತಿಯಿಂದ ಮಾತ್ರ ಬದಲಾವಣೆ ಸಾಧ್ಯವಾಗಿದ್ದು ಕಲಬುರಗಿಗೆ ಸಿನಿಮಾರಂಗದ ಮನರಂಜನಾ ಕ್ಷೇತ್ರ ದಲ್ಲಿ ಮಾಡಿದ ಸಾಧನೆಯಂತೆ ಕ್ರೀಡಾ ಕ್ಲಬ್ ಕೂಡಾ ಆರಂಭಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
*ನಾಗರಿಕ ಸನ್ಮಾನ ಅಗತ್ಯ: ನಿರಗುಡಿ
ಕಲಬುರಗಿಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಇಂತಹ ಗಮನಾರ್ಹ ಸಾಧನೆ ಮಾಡಿ ಕೀರ್ತಿಪತಾಕೆ ಹಾರಿಸಿದ ಯುವ ಶಕ್ತಿಯ ಪ್ರತಿನಿಧಿಯಾದ ಉದ್ಯಮಿ ಸಂಗಪ್ಪ ಶೆಟ್ಟಿಯವರು
ಐಮ್ಯಾಕ್ಸ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಾಗರಿಕ ಸನ್ಮಾನ ಮಾಡಿ ಗೌರವಿಸಬೇಕಾಗಿದೆ. ವಿದೇಶಗಳಲ್ಲಿರುವ ಥಿಯೇಟರ್ ಗಳಿಗೆ ಸಮಾನ ದರ್ಜೆಯಲ್ಲಿರುವ ಭವ್ಯವಾದ ಶೆಟ್ಟಿ ಥಿಯೇಟರ್ ನಮಗೆ ಹೆಮ್ಮೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್ ನಿರಗುಡಿ ಹೇಳಿದರು.
*ಪ್ರಶಸ್ತಿಯು ಕಲಬುರಗಿ ಪ್ರಗತಿಗೆ ಮಾನದಂಡ : ನಿಂಗಣ್ಣ*
ಕಲಬುರಗಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ದರ್ಜೆಯಲ್ಲಿ ಥಿಯೇಟರ್ ನಿರ್ಮಾಣ ಮಾಡಿ ಸಿಂಗಾಪುರ್, ದುಬೈ ನಗರಗಳಲ್ಲಿರುವಂತೆ ಅನುಭವವನ್ನು ಕೊಡುವ ಸಾಧನೆಗೆ ಈಗ ಗೌರವ ಸಂದಿರುವುದು ಹೆಮ್ಮೆಯ ಸಂಗತಿ ಮತ್ತು ಇದು ಸಿನಿಮಾ ವೀಕ್ಷರಿಗೆ ದೊರೆತ ಮನ್ನಣೆಯಾಗಿದೆ. ಇದರಿಂದಾಗಿ ಕಲಬುರಗಿ ಹಿಂದುಳಿದಿಲ್ಲ ಮತ್ತು ಪ್ರಗತಿಯ ಮಾನದಂಡವಾಗಿ ಈ ಪ್ರಶಸ್ತಿಯನ್ನು ಗುರುತಿಸಲಾಗಿದೆ ಎಂದು ಹಿರಿಯ ಸಾಹಿತಿ ಡಾ. ಚಿ. ಸಿ. ನಿಂಗಣ್ಣ ಹೇಳಿದರು.
*ಸಾಧನೆಗೆ ಗೌರವದ ಪುರಸ್ಕಾರ: ಮಾಲಿ ಪಾಟೀಲ್*
ಸಿನಿಮಾ ಮಂದಿರಗಳಿಗೆ ಸಿನಿಪ್ರಿಯರು ಕಾಲಿಡುತ್ತಿಲ್ಲ ಎಂಬ ಆತಂಕದ ನಡುವೆ ಯುವ ಉದ್ಯಮಿ ಸಂಗಪ್ಪ ಶೆಟ್ಟಿಯವರು
ಕಲಬುರಗಿಯಲ್ಲಿ ವಿಶ್ವ ದರ್ಜೆಯ ಥಿಯೇಟರ್ ನಿರ್ಮಾಣ ಮಾಡಿ ಸಿನಿಪ್ರಿಯರನ್ನು ಥಿಯೇಟರ್ ಗೆ ಆಕರ್ಷಿಸುವಂತೆ ಮಾಡಿರುವುದು ಮೆಚ್ಚಲೇ ಬೇಕಾದ ಸಂಗತಿಯಾಗಿದ್ದು ರಾಷ್ಟ್ರೀಯ ಮಟ್ಟದ ಪುರಸ್ಕಾರದಿಂದ ಕಲ್ಯಾಣ ಕರ್ನಾಟಕದ ಭಾಗಕ್ಕೆ ಗರಿಮೆ ಮೂಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷರಾದ ಸಿ. ಎಸ್. ಮಾಲಿ ಪಾಟೀಲ್ ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ ಸ್ಪರ್ಧಾತ್ಮಕ ರಂಗದಲ್ಲಿ ರಾಷ್ಟ್ರೀಯ ಮಟ್ಟದ ಪುರಸ್ಕಾರವನ್ನು ಕಲಬುರಗಿಗೆ ತಂದು ಕೊಡುವಲ್ಲಿ ಯಶಸ್ವಿಯಾದ ಸಂಗಪ್ಪ ಶೆಟ್ಟಿ ಅವರ ಸಾಧನೆಯನ್ನು ಎಲ್ಲರೂ ಸಂಭ್ರಮಿಸುವಂತಾಗಿದೆ. ಕೀಳರಿಮೆ ಬಿಟ್ಟು ಸಾಧನೆ ಮಾಡಿದರೆ ಯಶಸ್ಸು ಸಾಧ್ಯ ಎಂಬುದಕ್ಕೆ ಈ ರಾಷ್ಟ್ರೀಯ ಪ್ರಶಸ್ತಿಯು ಸಾಕ್ಷಿ ಮತ್ತು ಪ್ರೇರಣೆ ಎಂದರು. ನಂತರ ಸಂಗಪ್ಪ ಶೆಟ್ಟಿಯವರನ್ನು ಮೈಸೂರು ಪೇಟ, ಶಾಲು, ಹಾರ ಫಲಪುಷ್ಪ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿಗಳಾದ ಸತೀಶ್ ವಿ ಗುತ್ತೇದಾರ್, ಮಹಾದೇವ ಗುತ್ತೇದಾರ್, ವೆಂಕಟೇಶ ಕಡೇಚೂರ್, ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ, ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್, ರಾಜೇಶ್ ಡಿ ಗುತ್ತೇದಾರ್, ಅನಿಲ್ ಯರಗೋಳ, ಕುಪೇಂದ್ರ ಗುತ್ತೇದಾರ್ ತಡಕಲ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್ ಮತ್ತಿತರರು ಉಪಸ್ಥಿತರಿದ್ದರು.