ಡೆಕ್ಕನ್ ಒಳಗೊಂಡಂತೆ ದಕ್ಷಿಣ ಭಾರತದ ನಗರಗಳ ನಿರ್ಮಾಣ ಅಥವಾ ರಚನೆಯಲ್ಲಿ ಬಹಮನಿಗಳ ಪ್ರಭಾವ - ಎಸ್. ಕೆ. ಅರುಣಿ ಅಭಿಮತ

ಡೆಕ್ಕನ್ ಒಳಗೊಂಡಂತೆ ದಕ್ಷಿಣ ಭಾರತದ ನಗರಗಳ ನಿರ್ಮಾಣ ಅಥವಾ ರಚನೆಯಲ್ಲಿ ಬಹಮನಿಗಳ ಪ್ರಭಾವ - ಎಸ್. ಕೆ. ಅರುಣಿ ಅಭಿಮತ

ಡೆಕ್ಕನ್ ಒಳಗೊಂಡಂತೆ ದಕ್ಷಿಣ ಭಾರತದ ನಗರಗಳ ನಿರ್ಮಾಣ ಅಥವಾ ರಚನೆಯಲ್ಲಿ ಬಹಮನಿಗಳ ಪ್ರಭಾವ - ಎಸ್. ಕೆ. ಅರುಣಿ ಅಭಿಮತ

ಕಲಬುರಗಿಯ ವಿಭಾಗೀಯ ಪತ್ರಾಗಾರ ಕಛೇರಿ ಹಾಗೂ ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿ. ಜಿ. ಮಹಿಳಾ ಮಹಾವಿದ್ಯಾಲಯದ ಸಹಯೋಗದಲ್ಲಿ 'ಬಹಮನಿ ಸಾಮ್ರಾಜ್ಯ: ಚರಿತ್ರೆ ಮತ್ತು ಸಂಸ್ಕೃತಿ' ಕುರಿತಾದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಇಂದು ಚಾಲನೆ ಕೊಡಲಾಯಿತು.

ಮೊದಲನೇ ಗೋಷ್ಠಿಯಲ್ಲಿ "ಬಹಮನಿಯರ ಆಳ್ವಿಕೆಯಲ್ಲಿ ರೂಪಗೊಂಡ ನಗರಗಳ ಸ್ವರೂಪ ಮತ್ತು ಅವುಗಳ ವಾಸ್ತು - ರಚನಾ ಶೈಲಿಗಳ ಅವಲೋಕನ" ಎಂಬ ವಿಷಯದ ಕುರಿತು ICHR ದ ಪ್ರಾದೇಶಿಕ ನಿರ್ದೇಶಕರಾದ ಡಾ. ಶಿವಶರಣ ಅರುಣಿ (ಎಸ್. ಕೆ ಅರುಣಿ) ಅವರು ಉಪನ್ಯಾಸ ನೀಡಿದರು. ಇವರು ತಮ್ಮ ಉಪನ್ಯಾಸದಲ್ಲಿ ಕ್ರಿ.ಶ.14ನೇ ಶತಮಾನದಲ್ಲಿ ಆಳ್ವಿಕೆ ಆರಂಭಿಸಿದ ಬಹಮನಿ ಸುಲ್ತಾನರು ದಖ್ಖನ್ ಪ್ರದೇಶದಲ್ಲಿ ನಗರೀಕರಣ ಪ್ರಕ್ರಿಯೆಗೆ ನಾಂದಿ ಹಾಡಿದರು. ಬಹಮನಿ ಸುಲ್ತಾನರು ತಮ್ಮ ರಾಜ್ಯದಲ್ಲಿ ಕಲಬುರ್ಗಿ ಒಳಗೊಂಡಂತೆ ಫಿರೋಜಾಬಾದ, ಬೀದರ, ಸಗರ, ಮಳಖೇಡ, ಪಕೀಂದ, ಸೋಲಾಪುರ ಇತ್ಯಾದಿಗಳನ್ನು ನಗರಗಳನ್ನಾಗಿ ರೂಪಿಸಿದರು. ಮುಖ್ಯವಾಗಿ ಕಲಬುರಗಿಯು ಪ್ರಾಚೀನದಲ್ಲಿ ಉಲ್ಲೇಖಗೊಂಡ 'ಕಲಂಬುರಗಿ' ವಾಣಿಜ್ಯ ಪಟ್ಟಣವನ್ನು ನೂತನವಾಗಿ ಸ್ಥಾಪನೆಯಾದ ರಾಜ್ಯದ ರಾಜಧಾನಿಯನ್ನಾಗಿ ನಿರ್ಮಿಸಿದ ಬಗ್ಗೆ ವಿವರಿಸಿದರು. ಕಲಬುರಗಿಯು ಬಹಮನಿಯರ ಆಶ್ರಯದಲ್ಲಿ ರಾಜಧಾನಿ ನಗರವಾಗಿ ರಚನೆಯಾಗಿ ಕೋಟೆ, ನಗರ(ನಾಗರಿಕರ ವಸತಿಯಾಗಿ) ನಿರ್ಮಾಣಗೊಂಡ ರಾಜಧಾನಿ ನಗರವಾಗಿ ಸುಮಾರು 75 ವರ್ಷಗಳ ಕಾಲ ಮುಂದುವರೆದಿತ್ತು. ಈ 75 ವರ್ಷಗಳಲ್ಲಿ ಬಹಮನಿ ಸುಲ್ತಾನರು ಭದ್ರವಾದ ಕೋಟೆಯೊಂದನ್ನು ಅದಕ್ಕೆ ಹೊಂದಿಕೊಂಡಂತೆ ಶಹಾಬಜಾರ ಒಳಗೊಂಡಂತೆ ವಿಶಾಲವಾದ ನಗರವನ್ನು ರಚಿಸಿದರು. ರಾಜಧಾನಿ ನಗರಕ್ಕೆ ಹೊಂದಿಕೊಂಡಂತೆ 'ಸುಲ್ತಾನಪುರ' ಎಂಬ ಉಪನಗರವನ್ನು ನಿರ್ಮಿಸಿದ್ದು ಪ್ರಾಯಶಃ ಡೆಕ್ಕನ್ ಪ್ರದೇಶದಲ್ಲಿಯೇ ಪ್ರಥಮವಾಗಿ ಉಪನಗರ ನಿರ್ಮಾಣ ಮಾಡುವ ಕಲ್ಪನೆ ಕಲಬುರಗಿಯಲ್ಲಿ ಕಾಣಬಹುದು.

ಬಹಮನಿ ಸುಲ್ತಾನ ಫಿರೋಜ ಶಹಾನು ಕಲಬುರಗಿಯನ್ನು ತೊರೆದು ಮತ್ತೊಂದು ಹೊಸ ರಾಜಧಾನಿ ನಗರವನ್ನು ಸ್ಥಾಪಿಸುವ ಉದ್ದೇಶದಿಂದ 1400ರಲ್ಲಿ ಭೀಮ ನದಿಯ ಎಡದಂಡೆಯ ಮೇಲೆ 'ಫಿರೋಜಾಬಾದ' ಎಂಬ ನಗರವನ್ನು ಸ್ಥಾಪಿಸಿದನು. ಈ ನಗರ ಬಹಮನಿ ಸುಲ್ತಾನ ರಾಜ್ಯಕ್ಕೆ ಹೊಸ ರಾಜಧಾನಿ ಆಗಬೇಕಾಗಿತ್ತು. ರಾಜಕೀಯ ಕಾರಣಗಳಿಂದಾಗಿ ಫಿರೋಜಾಬಾದ ಕೇವಲ 20 ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು. ಆದರೆ ಫಿರೋಜಾ ಶಹಾನ ಸಹೋದರ ಅಹಮದ್ ಶಹಾನೂ ಕಲಬುರಗಿ ಮತ್ತು ಫಿರೋಜಾಬಾದಗಳೆರಡನ್ನು ತೊರೆದು ಬೀದರಿಗೆ ವರ್ಗಾವಣೆ ಮಾಡಿ ಬಹಮನಿ ರಾಜ್ಯದ ರಾಜಧಾನಿಯನ್ನಾಗಿ ನಿರ್ಮಿಸಿಕೊಂಡರು. ಬೀದರ ಬಹುಮನಿಯ ರಾಜಧಾನಿಯಾಗಿ ಬಹು ಉತ್ತರದ ಕೋಟೆಯುಕ್ತ ನಗರವನ್ನಾಗಿ ರೂಪಿಸಿದರು. ಇದು ಕಲಬುರಗಿಗಿಂತಲೂ ಭಿನ್ನವಾಗಿ ಕೋಟೆಯುಕ್ತ ನಗರ ಸೂಫಿ ಸಂತರ 'ಅಷ್ಟೂರ' ಪವಿತ್ರತೆಯ ನೆಲೆಯನ್ನು ರಚಿಸಿದರು. ಒಟ್ಟಿನಲ್ಲಿ ಬಹಮನಿ ಸುಲ್ತಾನರು ಮಧ್ಯಕಾಲೀನ ಸಂದರ್ಭದಲ್ಲಿ ನಗರೀಕರಣ ಪ್ರಕ್ರಿಯೆಗೆ ನಾಂದಿ ಹಾಡಿದರು. ಅಲ್ಲದೆ, ಡೆಕ್ಕನ್ ಒಳಗೊಂಡಂತೆ ದಕ್ಷಿಣ ಭಾರತದ ನಗರಗಳ ನಿರ್ಮಾಣ ಅಥವಾ ರಚನೆಯಲ್ಲಿ ಇವರ ಪ್ರಭಾವವನ್ನು ಗುರುತಿಸಬಹುದು. ಉದಾಹರಣೆಯಾಗಿ ನೋಡುವುದಾದರೆ ಕ್ರಿಸ್ತಶಕ 1537ರಲ್ಲಿ ರಚನೆಗೊಂಡ ಬೆಂಗಳೂರು ನಗರದ ರಚನೆಯಲ್ಲಿ ಬೀದರ್ ನಗರದ ಪ್ರಭಾವ ಗುರುತಿಸಬಹುದೆಂದು ಅಭಿಪ್ರಾಯಪಟ್ಟರು.

ವಿಚಾರ ಸಂಕಿರಣದಲ್ಲಿ ಕಾಲೇಜು ಪ್ರಾಂಶುಪಾಲರಾದ ಆರ್.ಬಿ.ಕೊಂಡಾ, ಪತ್ರಾಗಾರ ಕಛೇರಿಯ ಹಿರಿಯ ಸಹಾಯಕ ನಿರ್ದೇಶಕ ಡಾ. ವೀರಶೆಟ್ಟಿ, ಇತಿಹಾಸ ಪ್ರಾಧ್ಯಾಪಕರಾದ ಶುಭಾಶ್ಚಂದ್ರ ದೊಡ್ಡಮನಿ, ಮಲ್ಲಿಕಾರ್ಜುನ ಬಾಗೋಡಿ, ಡಾ. ಝಾಕಿಯಾ ಕೆ. ಅನ್ಸಾರಿ, ಅಬ್ದುಲ್ ಅಜೀಜ್ ರಜಪುತ್, ಅರುಣಕುಮಾರ ಜೋಳದಕೂಡ್ಲಿಗಿ, ವಿಜಯಕುಮಾರ್ ಸಾಲಿಮನಿ, ಬಸವರಾಜ ಭಾಗಾ, ಗುರುಪ್ರಕಾಶ್ ಹೂಗಾರ, ಉಮರ್ ಮಸಳಿ, ಶರಣಬಸಪ್ಪ ಅವಟೆ, ಶಂಭುಲಿಂಗ ವಾಣಿ, ಮುಂತಾದವರು ಉಪಸ್ಥಿತರಿದ್ದರು.