ಹಡಪದ ಅಪ್ಪಣ್ಣ

ಹಡಪದ ಅಪ್ಪಣ್ಣ

ಆಚಾರದ ಅರಿವು ಹೊರಗಾದ ಮೇಲೆ.

ಅಂಗದ ಮೇಲೆ ಲಿಂಗವಿದ್ದು ಫಲವೇನು?

ಕುರುಡನ ಕೈಯ ಕನ್ನಡಿ ಇದ್ದ ಹಾಗೆ,

ಬರಡಾವಿಗೆ ಶಿಶು ಹುಟ್ಟಿದ ಹಾಗೆ, 

ಕುರುಡಗೆ ಕಣ್ಣೆಬೇನೆ ಬಂದ ಹಾಗೆ,

ಕುರುಡಿಗೆ ಮಕ್ಕಳಾದ ಹಾಗೆ, 

ದೀನನ ಮನೆಯಲ್ಲಿ ಹೊನ್ನಿದ ಹಾಗೆ.

ಇವರೇನ ಮಾಡಿದರೇನು?

ತಮ್ಮ ಹಾನಿವೃದ್ಧಿಯನರಿಯದನ್ನಕ್ಕ, 

ಕಾಲ ಕಾಮಾದಿಗಳ ಬಾಯೊಳಗೆ ಸಿಲ್ಕಿ,

ಅಗಿದಗಿದು ತಿನಿಸಿಕೊಳುತಿಪ್ಪರಲ್ಲ, ಎನ್ನ 

ದೇವ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.

        *ಹಡಪದ ಅಪ್ಪಣ್ಣ*

     *ವಚನ ಅನುಸಂಧಾನ*

ಬಾಲ್ಯದಿಂದಲೇ ಅಪ್ಪ ಬಸವಣ್ಣನವರು ಬದುಕಿನ ವೈಪರೀತ್ಯಗಳನ್ನು ಕಂಡು ದೀರ್ಘ ಚಿಂತನೆಯನ್ನ ಮಾಡಿದ್ದಾರೆ. ಧರ್ಮ ಮತ್ತು ದೇವರ ವಿಷಯವ ನ್ನು ಮುಂದಿಟ್ಟು ಶ್ರೇಣೀಕೃತ ವ್ಯವಸ್ಥೆಯ ಅತ್ಯಂತ ಕೆಳವರ್ಗದ ಶ್ರಮಜೀವಿಗಳಲ್ಲಿ ಜ್ಞಾನದ ವಂಚನೆ ಜೊತೆಗೆ ಪಾಪ ಪುಣ್ಯದ ಭಯ ಹುಟ್ಟಿಸಿದ್ದರ ಪ್ರತಿ ಫಲವಾಗಿ ಸಮಾಜದ ಜನ ಜೀವನದಲ್ಲಿ ಮತ್ತು ದೇವಸ್ಥಾನಗಳಲ್ಲಿ ಈ ಅಸ್ಪೃಷ್ಯತೆಯ ಕಾರಣಕ್ಕೆ ಇಂಥಾ ಜನವರ್ಗದವರಿಗೆ ದೇವಸ್ಥಾನದ ಪ್ರವೇಶ ನಿರಾಕರಿಸಿದ್ದನ್ನು ಅಪ್ಪ ಬಸವಣ್ಣನವರು ಕಣ್ಣಾರೆ ಕಂಡವರಾಗಿದ್ದರು. ಹಾಗಾಗಿ ಈ ಶೋಷಣೆಯ ಕೇಂದ್ರಗಳಾಗಿದ್ದ ದೇವಾಲಯ ಸಂಸ್ಕೃತಿಯನ್ನೇ ನಿರಾಕರಿಸಿದ್ದಷ್ಟೇ ಅಲ್ಲದೆ ಅಂಥಹಾ ಶೋಷಿತರ ಮನೆತನಕ ಹೋಗಿ ಅವರಲ್ಲಿ ಪ್ರೀತಿ ವಿಶ್ವಾಸವನ್ನ ತುಂಬಿ ಅವರುಗಳ ಕೈಗೆ; ತಮ್ಮ ದೀರ್ಘಕಾಲದ ಚಿಂತನೆಯ ಫಲವಾದಂಥಾ ಬಯಲು ತತ್ವದ ಆ ದೇವರ ಕುರುಹಾದ 'ಇಷ್ಟಲಿಂಗ'ವನ್ನು ಅವರಿಗೆ ಕರುಣಿಸಿ ಕೊಟ್ಟದ್ದು, ಅವರು ಸ್ವತಃ ಸಾಧನೆಯ ಮೂಲಕ ತಮ್ಮ ಅಂತರಂಗವನ್ನ ಬೆಳಗಿಕೊಂಡು ಬಹಿರಂಗದ ಬದುಕನ್ನು ಶುದ್ಧವಾಗಿಟ್ಟುಕೊಳ್ಳಲು ಕಲಿಸಿದರು. 'ಇಷ್ಟಲಿಂಗ'ದ ಈ ಯೋಜನಯ ಆ ಫಲವನ್ನು ಆಗ ಪಡೆದುಕೊಂಡವರು ಒಂದು ಲಕ್ಷದ ಮೇಲೆ ತೊಂಭತ್ತಾರು ಸಾವಿರ ಗಣಂಗಳು ಮತ್ತು ಏಳ್ನೂರಾ ಎಪ್ಪತ್ತು ಅಮರ ಗಣಂಗಳು ರೂಪಗೊಂಡದ್ದು ಚಾರಿತ್ರಿಕ ಸತ್ಯವೇ ಆಗಿರುತ್ತದೆ

ಇಂಥಾ ಪರಿಣಾಮಕಾರಿ 'ಇಷ್ಟಲಿಂಗ" ಸಾಧನೆಯ

ಮಾಡುವಲ್ಲಿನ ಅರಿವುಗೇಡಿತನದ ಕುರಿತಂತೆ ಈ ಮೇಲಿನ ಹಡಪದ ಅಪ್ಪಣ್ಣ ಶರಣರ ವಚನವು ಮಾತನಾಡಿದೆ. ಅದನ್ನೀಗ ಇಲ್ಲಿ ಅನುಸಂಧಾನವ

ಮಾಡುವ ಮೂಲಕ ಪರಿಶೀಲಿಸಿ ನೋಡೋಣ.

*ಆಚಾರದ ಅರಿವು ಹೊರಗಾದ ಮೇಲೆ.*

*ಅಂಗದ ಮೇಲೆ ಲಿಂಗವಿದ್ದು #ಫಲವೇನು?*

ಅರಿವು ಮತ್ತು ಆಚರಣೆಯು ಇಷ್ಟಲಿಂಗ ಸಾಧನೆ ಮಾಡಲು ಅತ್ಯಗತ್ಯವಾಗಿದೆ.ಇವೆರಡೂ ಒಂದಕ್ಕೆ ಒಂದು ಪೂರಕ ಕ್ರಿಯಾಚರಣೆಗಳಾಗಿವೆ. ಕೇವಲ ಇಷ್ಟಲಿಂಗ ಕಟ್ಟಿಕೊಂಡು ಅದರ ನೈಜ ಅರಿವನ್ನು ಮಾಡಿಕೊಳ್ಳದೇ ಒಳಗಿನ ಆ ಅರಿವು ಹೊರಗಾಗಿ ಹೊರಗಿನ ಆಚರಣೆಯನ್ನಷ್ಟೇ ಮಾಡಿದರೆ ಇಲ್ಲಿ ಅಂಗದ ಮೇಲೆ ಲಿಂಗ ಇದ್ದೂ ಪ್ರಯೋಜನ ಇಲ್ಲ ಎನ್ನುವರು ಶರಣ ಹಡಪದ ಅಪ್ಪಣ್ಣನವರು.

*#ಕುರುಡನ ಕೈಯ ಕನ್ನಡಿ ಇದ್ದ ಹಾಗೆ,*

*ಬರಡಾವಿಗೆ ಶಿಶು ಹುಟ್ಟಿದ ಹಾಗೆ*, 

*ಕುರುಡಗೆ ಕಣ್ಣೆಬೇನೆ ಬಂದ ಹಾಗೆ,*

*ಕುರುಡಿಗೆ ಮಕ್ಕಳಾದ ಹಾಗೆ,*

*ದೀನನ ಮನೆಯಲ್ಲಿ ಹೊನ್ನಿದ ಹಾಗೆ.*

*ಇವರೇನ #ಮಾಡಿದರೇನು?*

ಅರಿವಿಲ್ಲದೆ ಇಷ್ಟಲಿಂಗದ ಆಚರಣೆ ಮಾಡಿದರೆ ಹೇಗಾಗುತ್ತದೆ ಎನ್ನುವುದಕ್ಕೆ ಐದು ಅರ್ಥಪೂರ್ಣ

ಉದಾಹರಣೆ ಹೇಳಿದ್ದಾರೆ. ಕುರುಡನ ಕೈಯಲ್ಲಿನ ಕನ್ನಡಿ ಪ್ರಯೋಜನ ಇಲ್ಲ. ಬರಡು ಆಕಳು ಕರು ಹಾಕಿದರೆ ಅದಕ್ಕೆ ಹಾಲೆಲ್ಲಿಂದ ಕುಡಿಸುವುದು!? ಕಣ್ಣೇ ಇಲ್ಲದ ಕರುಡಗೆ ಕಣ್ಣುಬೇನೆ ಬಂದ್ರೆ ಏನು ಮಾಡುವುದು!? ಕುರುಡಿಗೆ ಮೊದಲೇ ಕಣ್ಣುಗಳು ಕಾಣದಿರುವಾಗ ಮಕ್ಕಳು ಹುಟ್ಟಿದರೆ ಎಷ್ಟುಕಷ್ಟ! ಹಾಗೆಯೇ ದೀನನ ಮನೆಯಲ್ಲಿ ಹೊನ್ನು ಇದ್ದರೆ ಆತ ಏನು ಮಾಡ ಬಲ್ಲನು!? ಆದ್ದರಿಂದ ಹೀಗೆ ಅರಿವು ಇಲ್ಲದೇ ಆಚರಣೆಯನ್ನು ಮಾಡಿದ್ದಾದರೆ ಯಾವುದೇ ಪ್ರಯೋಜನ ಇಲ್ಲ. ಅರಿವು ಮುಖ್ಯ ಆನಂತರ ಆಚರಣೆಯಾದರೆ ಪ್ರಯೋಜನೆಯ ಫಲ ಖಂಡಿತಾ ಸಿಗುತ್ತದೆ ಎನ್ನುವುದು ವಚನದ ಈ ಸಾಲುಗಳಲ್ಲಿನ ತಾತ್ಪರ್ಯವಾಗಿದೆ.

*ತಮ್ಮ ಹಾನಿವೃದ್ಧಿಯನರಿಯದನ್ನಕ್ಕ,*

*ಕಾಲ ಕಾಮಾದಿಗಳ ಬಾಯೊಳಗೆ ಸಿಲ್ಕಿ,*

*ಅಗಿದಗಿದು ತಿನಿಸಿಕೊಳುತಿಪ್ಪರಲ್ಲ,* *ಎನ್ನ ದೇವ ಬಸವಪ್ರಿಯ #ಕೂಡಲಚೆನ್ನಬಸವಣ್ಣಾ.*

ಹೀಗೆ ಅರಿವು ಇರದೇ ಇಷ್ಟಲಿಂಗ ಆಚರಣೆಯ

ಮಾಡಿದಲ್ಲಿ ಆಗುವ ಹಾನಿ,ಹಾಗೆಯೇ ಅರಿವಿಂದ ಮಾಡುವ ಆಚರಣೆಯ ಲಾಭ, ಈ ಲಾಭನಷ್ಟದ ವ್ಯವಹಾರಿಕ ಅರಿವನ್ನೇ ಅರಿಯದೆ ಕಾಮ ಮತ್ತು ಕಾಲ/ ಮೃತ್ಯುವಿನ ಬಾಯಿಗೆ ಸಿಲುಕಿ ಅವುಗಳ ದವಡೆಗೆ ಈಡಾಗಿ ಅರಿವುಗೇಡಿತನದಿ ಸುಮ್ಮನೆ ಸತ್ತುಹೋಗುವರಲ್ಲಾ! ಎನ್ನ ದೇವ ಬಸವಪ್ರಿಯ ಕೂಡಲಚೆನ್ನಬಸವಣ್ಣಾ ಎಂದು ಅಪ್ಪಣ್ಣ ಶರಣ ಈ ವಚನದಲ್ಲಿ ಅರಿವು ಆಚರಣೆ ಪರಸ್ಪರ ಕೂಡಿ ಮಾಡಿದ ಇಷ್ಟಲಿಂಗ ಸಾಧನೆ ಪ್ರಯೋಜನಕಾರಿ ಆಗಿರುತ್ತದೆ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ.

               ಅಳಗುಂಡಿ ಅಂದಾನಯ್ಯ