ಸಿಎಂ ಮತ್ತು ಬಿ.ಆರ್. ಪಾಟೀಲ್ ನಡುವೆ ಬಿರುಕು ಇಲ್ಲ

ಸಿಎಂ ಮತ್ತು ಬಿ.ಆರ್. ಪಾಟೀಲ್ ನಡುವೆ ಬಿರುಕು ಇಲ್ಲ –
ಸಂಬಂಧ ಹಾಳು ಮಾಡಲು ಕೆಲವರ ಷಡ್ಯಂತ್ರ: ಬಿ.ಆರ್. ಪಾಟೀಲ್ ಸ್ಪಷ್ಟನೆ
ಬೆಂಗಳೂರು, ಜು.3:"ಸಿದ್ದರಾಮಯ್ಯ ಮತ್ತು ನನ್ನ ನಡುವೆ ಆತ್ಮೀಯ ಸಂಬಂಧವಿದೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಈ ಸಂಬಂಧ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ನನ್ನ ಹೇಳಿಕೆಯನ್ನು ತಿರುಗಿಸಿ ತೇಜೋವಧೆ ಮಾಡಲಾಗುತ್ತಿದೆ. ಇದು ಸರಿಯಲ್ಲ" ಎಂದಿದ್ದಾರೆ.
"ಕೆ.ಆರ್. ಪೇಟೆಯಲ್ಲಿ ಆತ್ಮೀಯರೊಂದಿಗೆ ಮಾತನಾಡುವ ಸಂದರ್ಭ ಸಿದ್ದರಾಮಯ್ಯ ವಿಚಾರ ಬಂದಾಗ ನಾನು ಅವರಿಗೆ ಲಕ್ಕಿ, ಲಾಟರಿ ಹೊಡೆದು ಸಿಎಂ ಆದರು ಎಂದು ಹಾಸ್ಯಾತ್ಮಕವಾಗಿ ಹೇಳಿದ್ದೆ. ನಾನೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದೆ ಎನ್ನುವುದು ತಪ್ಪು. ಅವರು ಅವರನ್ನು ಭೇಟಿಯಾಗುವಾಗ ನಾನೂ ಜೊತೆಗಿದ್ದೆ. ಈ ಸಲ ಭೇಟಿ ಬೇಡ ಎಂದಿದ್ದರೂ ನಾನು ಒತ್ತಾಯಿಸಿದ್ದರಿಂದ ಅವರು ಹೋಗಿದ್ದರು" ಎಂದು ವಿವರಿಸಿದ್ದಾರೆ.
"ಸಿದ್ದರಾಮಯ್ಯ ಅವರು ಜನನಾಯಕರು. ನಾವು 9 ಶಾಸಕರು ಜೆಡಿಎಸ್ ಬಿಟ್ಟು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೇವೆ. ಮುಖ್ಯಮಂತ್ರಿ ಆಗಿದ್ದು ನಮ್ಮ ಕಾರಣದಿಂದ ಅಲ್ಲ, ಜನ ಬೆಂಬಲದ ಕಾರಣದಿಂದ" ಎಂದಿರುವ ಪಾಟೀಲ್, "ನಮ್ಮ ಸಂಬಂಧ ಹಾಳು ಮಾಡುವ ಪ್ರಯತ್ನಗಳೇ ಈಗ ನಡೆಯುತ್ತಿವೆ. ಇದು ದೌರ್ಭಾಗ್ಯಕರ" ಎಂದು ತಿಳಿಸಿದ್ದಾರೆ.