ಅವೈಜ್ಞಾನಿಕ ಸಮೀಕ್ಷಾ ವರದಿಗೆ ಧಿಕ್ಕಾರ:ನ್ಯಾಯವಾದಿ ಜೇ. ವಿನೋದ್ ಕುಮಾರ

ಅವೈಜ್ಞಾನಿಕ ಸಮೀಕ್ಷಾ ವರದಿಗೆ ಧಿಕ್ಕಾರ:ನ್ಯಾಯವಾದಿ ಜೇ. ವಿನೋದ್ ಕುಮಾರ
ಕಲಬುರಗಿ: ಏ.೧೮.ರಾಜ್ಯದಲ್ಲಿ ನೇಕಾರ ಸಮುದಾಯದ ಜನಸಂಖ್ಯೆಯು ಕನಿಷ್ಠ 70 ಲಕ್ಷಕ್ಕೂ ಹೆಚ್ಚು ಇದ್ದರೂ, ಸರ್ಕಾರ ಬಿಡುಗಡೆ ಮಾಡಿದ ಸಾಮಾಜಿಕ ಸಮೀಕ್ಷಾ ವರದಿಯಲ್ಲಿ ಕೇವಲ 9 ಲಕ್ಷ ಜನರು ಮಾತ್ರ ಇರುವಂತೆ ತೋರಿಸಲಾಗಿದೆ. ಈ ಅವೈಜ್ಞಾನಿಕ ಸಮೀಕ್ಷೆಗೆ ನಾನು ಧಿಕ್ಕಾರ ವ್ಯಕ್ತಪಡಿಸುತ್ತೇನೆ ಎಂದು ನ್ಯಾಯವಾದಿ ಜೇ. ವಿನೋದ್ ಕುಮಾರ ಹೇಳಿದರು.
ಈ ವರದಿಯಲ್ಲಿ ಕೇವಲ ದೇವಾಂಗ ಮತ್ತು ಕುರಹಿನಶೆಟ್ಟಿ ಎಂಬ ಎರಡು ಜಾತಿಗಳ ಹೆಸರನ್ನಷ್ಟೇ ಉಲ್ಲೇಖಿಸಲಾಗಿದೆ. ಆದರೆ ನೇಕಾರ ಸಮುದಾಯದಲ್ಲಿ ಪ್ರಮುಖವಾಗಿ ಇರುವ ಹಟಗಾರ, ಪಟ್ಟಸಾಲಿ, ಪದ್ಮಸಾಲಿ, ಸ್ವಕುಳಸಾಲಿ, ತೊಗಟವೀರ ಸೇರಿದಂತೆ 5 ಪ್ರಮುಖ ಜಾತಿಗಳು ಮತ್ತು 21 ಉಪಪಂಗಡಗಳ ಉಲ್ಲೇಖವೇ ಇಲ್ಲ. ಇದು ಸಮುದಾಯದ ವೈವಿಧ್ಯತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು.
ಈ ರೀತಿ ಸಮೀಕ್ಷೆ ಮಾಡುವುದು ಕೇವಲ ರಾಜಕೀಯ ಲಾಭಕ್ಕಾಗಿ ನಡೆಯುತ್ತಿರುವ ತಂತ್ರವಷ್ಟೇ. ನೈಜವಾಗಿ ಸಾಮಾಜಿಕ ನ್ಯಾಯವನ್ನು ಕಾಪಾಡುವ ದೃಷ್ಟಿಕೋಣ ಹೊಂದಿದ್ದರೆ, ಸರ್ಕಾರ ಮುಂದಿನ ಎರಡು ವರ್ಷಗಳಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ, ನೇಕಾರ ಸಮುದಾಯದ ನೈಜ ಸ್ಥಿತಿಯನ್ನು ದಾಖಲಿಸಬೇಕು ಮತ್ತು ಹೊಸ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಇದೊಂದು ಶರಣ ಸಂಸ್ಕೃತಿಗೆ ಹಾಗೂ 11ನೇ ಶತಮಾನದಲ್ಲಿ ದಾಸಿಮಯ್ಯ ನವರು ಜಾಗೃತಿಗೆ ತಂದ ನೇಕಾರ ಪರಂಪರೆಗೆ ಅಪಮಾನವಾಗಿದೆ. ಇಂತಹ ತಾರತಮ್ಯದಿಂದ ಕೂಡಿದ ವರದಿಯನ್ನು ನೀಡಿರುವ ಹಿಂದುಳಿದ ವರ್ಗಗಳ ಆಯೋಗದ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ.
1998 ರಲ್ಲಿ ಅರಮನೆ ಮೈದಾನದಲ್ಲಿ ನಡೆದ ನೇಕಾರ ಸಮಾವೇಶದಲ್ಲಿಯೇ ನೇಕಾರರು ರಾಜ್ಯದ ಕೃಷಿಕ ಸಮಾಜದ ನಂತರದ ಅತ್ಯಂತ ದೊಡ್ಡ ಸಮುದಾಯವೆಂದು ದೃಢಪಡಿಸಲಾಗಿದೆ. ಈ ಸಮುದಾಯವನ್ನು ಸಮಗ್ರವಾಗಿ ದುರ್ಬಳಕೆ ಮಾಡಿಕೊಳ್ಳುವ ಕಪಟ ರಾಜಕಾರಣಿಗಳಿಗೆ, ಮತ ಬ್ಯಾಂಕ್ ರಾಜಕಾರಣಿಗಳಿಗೆ ಹಾಗೂ ನೇಕಾರರ ಪರ ಧ್ವನಿ ಎತ್ತದ ನಾಯಕರಿಗೆ ನಾವು ಧಿಕ್ಕಾರ ವ್ಯಕ್ತಪಡಿಸುತ್ತೇವೆ.
ಮೇ 1 - ಕಾಯಕ ದಿನದಂದು, ನೇಕಾರ ಸಮುದಾಯಕ್ಕೆ ನ್ಯಾಯ ಒದಗಿಸುವ ತೀರ್ಮಾನವನ್ನು ಕೈಗೊಳ್ಳಬೇಕೆಂದು ನ್ಯಾಯವಾದಿ ಜೇ. ವಿನೋದ್ ಕುಮಾರ ಪ್ರಧಾನ ಕಾರ್ಯದರ್ಶಿ, ಕ.ಕ. ಪ್ರತ್ಯೇಕ ರಾಜ್ಯ ಹೋರಾಟ ಜಾಗ್ರತಿ ಸಮಿತಿ
ಸಂಚಾಲಕರು, ಕ.ಕ. ನೇಕಾರ ಹೋರಾಟ ಸಮಿತಿ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
---