18 ವರ್ಷ ಮೇಲ್ಪಟ್ಟ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಡಿ.ಸಿ.ಮನವಿ

18 ವರ್ಷ ಮೇಲ್ಪಟ್ಟ ಅರ್ಹರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಡಿ.ಸಿ.ಮನವಿ

ಕಲಬುರಗಿ : ೧೯ನೇ ಆಗಸ್ಟ್ ,

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ 01-01-2025 ಅರ್ಹತಾ ದಿನವನ್ನಾಗಿ ಪರಿಗಣಿಸಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವು ಇದೇ ಆಗಸ್ಟ್ 20 ರಿಂದ ಆರಂಭವಾಗಲಿದ್ದು,18 ವರ್ಷ ಮೇಲ್ಪಟ್ಟ ಅರ್ಹ ಯುವಕ-ಯುವತಿಯರು ಮತದಾರರ ಪಟ್ಟಿಯಲಿ ತಮ್ಮ ಹೆಸರು ಸೇರಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿ.ಫೌಜಿಯಾ ತರನ್ನುಮ ಅವರು ಮನವಿ ಮಾಡಿದ್ದಾರೆ.

ಆಗಸ್ಟ್ 20 ರಿಂದ ಅಕ್ಟೋಬರ್ 18ರ ವರೆಗೆ ಬಿ.ಎಲ್.ಓ.ಗಳಿಂದ ಮನೆ-ಮನೆ ಭೇಟಿ, ಚುನಾವಣಾ ಗುರುತಿನ ಚೀಟಿಯಲ್ಲಿ ದೋಷ ಸರಿಪಡಿಸುವಿಕೆ, ಮತಗಟ್ಟೆ ಮತ್ತು ಭಾಗದ ವ್ಯಾಪ್ತಿ ಪರಿಷ್ಕರಣೆ ಕಾರ್ಯ ಕೈಗೊಂಡು ಅಕ್ಟೋಬರ್ 29 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದರು.

ಕರಡು ಮತದಾರರ ಪಟ್ಟಿಗೆ ಅಕ್ಟೋಬರ್ 29 ರಿಂದ ನವೆಂಬರ್ 28ರ ವರೆಗೆ ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 

ಡಿಸೆಂಬರ್ 24 ರೊಳಗೆ ಬಂದಂತಹ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ 2025ರ ಜನವರಿ 6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದೆಂದು ಜಿಲ್ಲಾ ಚುನಾವಣಾಧಿಕಾರಿ ಫೌಝಿಯಾ ತರನ್ನುಮ ತಿಳಿಸಿದ್ದಾರೆ.

ವಿ.ಎಸ್.ಪಿ. ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದು:

18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ವೋಟರ್ ಹೆಲ್ಪ್ ಲೈನ್, ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಆನ್‌ಲೈನ್ ಅಥವಾ ಬಿ.ಎಲ್.ಓ. ಬಳಿ ನಮೂನೆ-6 ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬಹುದಾಗಿದೆ. ಡಬಲ್ ಎಂಟ್ರಿ ಮತ್ತು ನಿಧನ ಪ್ರಕರಣದಲ್ಲಿ ನಮೂನೆ-7ರ ಮೂಲಕ ತೆಗೆದುಹಾಕಲು ಮತ್ತು ನಮೂನೆ-8ರಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.