ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಸತ್ವಯುತ ಬರಹಗಳು, ಸಂವೇದನಾಶೀಲ ಕವಿತೆಗಳು, ವಿಚಾರಯುಕ್ತ ಲೇಖನಗಳು ಮತ್ತು ಸೃಜನಶೀಲ ಬರವಣಿಗೆಯಿಂದ ತಮ್ಮದೇ ಆದ ಛಾಪನ್ನು ಮೂಡಿಸುತ್ತಾ, ಅತ್ಯಂತ ಪ್ರತಿಭಾವಂತ ಉದಯೋನ್ಮುಖ ಲೇಖಕಿಯೆಂದು ಗುರುತಿಸಲ್ಪಡುತ್ತಿರುವ ಡಾ. ನಾಗರತ್ನ ಅಶೋಕ ಭಾವಿಕಟ್ಟಿ ಯವರು ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಹುಟ್ಟಿದ್ದು ಬೆಳೆದಿದ್ದು ಪದವಿ ಹಂತದ ವರೆಗಿನ ಶಿಕ್ಷಣ ಪಡೆದದ್ದು ಹುನಗುಂದದಲ್ಲಿಯೆ. ಶ್ರೀಮತಿ ಗೌರಮ್ಮ ಹಾಗೂ ಶ್ರೀ ಮುನಿಯಪ್ಪ ಇವರ ಮಗಳಾದ ಇವರು ಅಪ್ಪಟ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ. ಆ ನೆಲದ ಸಿರಿ ಸಂಸ್ಕೃತಿಯ ಸೊಗಡನ್ನೂ, ಅಲ್ಲಿನ ಭಾಷಾ ಶ್ರೀಮಂತಿಕೆಯ ಸೊಬಗನ್ನೂ ಮೈಗೂಡಿಸಿಕೊಂಡಿರುವ ಇವರು ಅಲ್ಲಿನ ಕ್ರಿಯಾಶೀಲ ಹಾಗೂ ನೇರಾನೇರ ನಡೆ-ನುಡಿಗಳ ವ್ಯಕ್ತಿತ್ವದ ಅಕ್ಷರಶಃ ನಿದರ್ಶನ.

ಹುನಗುಂದದ ವಿ. ಮ. ವಿ. ವ ಸಂಘದ ವಿ. ಎಮ್. ಎಸ್. ಆರ್. ವಸ್ತ್ರದ ಪದವಿ ಪೂರ್ವ ಕಾಲೇಜಿನ ಲ್ಲಿ ಸುಮಾರು ಹದಿನೈದು ವರ್ಷಗಳಿಂದ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ಎಂ. ಎ. ಪದವಿ ಪಡೆದಿದ್ದು ರಾಜ್ಯಶಾಸ್ತ್ರ ವಿಷಯದ ಮೇಲೆ 'ಮೂಲಭೂತ ಹಕ್ಕುಗಳು ಹಾಗೂ ರಾಜ್ಯ ನೀತಿ ನಿರ್ದೇಶಕ ತತ್ವಗಳ ತುಲನಾತ್ಮಕ ಅಧ್ಯಯನ' ಕುರಿತು ಪ್ರಬಂಧ ಮಂಡಿಸಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಉತ್ತಮ ಉಪನ್ಯಾಸಕರಾದ ಇವರು ರಾಜ್ಯದ ಅನೇಕ ಕಡೆಗಳಲ್ಲಿ ಸಾಕಷ್ಟು ಉಪನ್ಯಾಸ ನೀಡಿದ್ದಾರೆ. ಅನೇಕ ತರಬೇತಿ ಶಿಬಿರ ಗಳಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ತಮ್ಮ ಪ್ರಗತಿ ಪರ ಚಿಂತನೆಗಳಿಂದ, ಸೃಜನಾತ್ಮಕ ವಿಚಾರಧಾರೆಗಳಿಂದ, ಭಾವನಾತ್ಮಕ ಬರಹಗಳಿಂದ, ಸಂವೇದನಾಶೀಲ ಕವಿತೆಗಳಿಂದ, ಚೈತನ್ಯಶೀಲ ಬರವಣಿಗೆಯಿಂದ ನಾಡಿನಾದ್ಯಂತ ನಾಡಿನಾದ್ಯಂತ ಹೆಸರುವಾಸಿಯಾಗಿ, ಸಾಹಿತ್ಯಕ್ಶೇತ್ರದಲ್ಲಿ ಪ್ರವರ್ದಮಾನಕ್ಕೆ ಬರುತ್ತಿರುವ ಅತ್ಯುತ್ತಮ ಬರಹಗಾರ್ತಿ. ತಮ್ಮ ಪ್ರಬುದ್ದ ನುಡಿಗಳಿಂದ, ಸೌಜನ್ಯಶೀಲ ನಡೆಯಿಂದ, ಉತ್ತಮ ಕೃತಿಗಳಿಂದ ಸಾಹಿತ್ಯ ವಲಯದಲ್ಲಿ ಅಪಾರ ಜನಪ್ರಿಯತೆಯನ್ನೂ ಮತ್ತು ಜನಪ್ರೀತಿಯನ್ನು ಪಡೆಯುತ್ತಿರುವ ವಿಶಿಷ್ಟ ಲೇಖಕಿ.

 ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ ರಾಜ್ಯಶಾಸ್ತ್ರ ದಾರಿದೀಪ್ತಿ ಎಂಬ ಪ್ರಶ್ನೋತ್ತರ ಮಾಲಿಕೆಯನ್ನು ರಚಿಸಿದ್ದಾರೆ.  ಹುನಗುಂದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಮಹಿಳಾ ಪ್ರತಿನಿಧಿಯಾಗಿ ಕನ್ನಡ ಸೇವೆ ಸಲ್ಲಿಸಿತ್ತಿದ್ದಾರೆ.. ತಮ್ಮ ವೈಚಾರಿಕ ಉಪನ್ಯಾಸ ಗಳಿಂದ ಸಾಹಿತ್ಯಿಕ ಸೇವೆಯಿಂದ ರಾಜ್ಯ ಮಟ್ಟದ ಎಚ್. ಎನ್ ಪ್ರಶಸ್ತಿ ಹಾಗೂ ಸಾಹಿತ್ಯ ಕುಸುಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. BIRDS ಸಂಸ್ಥೆಯ ಆಜೀವ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಐದು ವರ್ಷಗಳ ಕಾಲ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ಮಹಿಳಾ ಅಧ್ಯಕ್ಷೆ ಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಈ ನಿತ್ಯ ನಿರಂತರ ಸಾಹಿತ್ಯ ಪಯಣದಲ್ಲಿ ಸದಾ ಬೆಂಗಾವಲಾಗಿ, ಪ್ರೋತ್ಸಾಹಿಸಿ, ಚಿರಸ್ಫೂರ್ತಿಯಾಗಿರುವ ಇವರ ಪತಿ ಶ್ರೀ ಅಶೋಕ್ ಭಾವಿಕಟ್ಟಿ ಹಾಗೂ ಇವರ ಸಹೋದರಿ ಶ್ರೀಮತಿ ನಿಂಗಮ್ಮ ಭಾವಿಕಟ್ಟಿ ಹಾಗೂ ಇವರ ಮಕ್ಕಳು ಅಭಿನಂದನಾರ್ಹರು.

 ಡಾ.ನಾಗರತ್ನಾ  ಭಾವಿಕಟ್ಟಿ ಅವರು ವಚನ ಸಾಹಿತ್ಯ ಪರಿಷತ್‌ನ ಹುನುಗಂದ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವಾರು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೧೦೦ಕ್ಕೂ ಹೆಚ್ಚು ಉಪನ್ಯಾಸ ಮತ್ತು ಗೋಷ್ಠಿಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

ಮಹಿಳೆಯರ ಹಕ್ಕುಗಳು, ಮಹಿಳೆಯರ ಸಬಲೀಕರಣ ಕು- ರಿತಂತೆ ಉಪನ್ಯಾಸ ನೀಡಿದ್ದಾರಲ್ಲದೆ ಮಾನವ ಹಕ್ಕುಗಳ ಕುರಿತಂತೆ ರಾಷ್ಟ್ರಮಟ್ಟದ ವಿಚಾರಸಂಕಿರಣದಲ್ಲಿ ಗಮನ ಸೆಳೆದಿದ್ದಾರೆ. ವಚನ ಸಾಹಿತ್ಯ ಪರಿಷತ್‌ ನಿಂದ ಹುನಗುಂದಲ್ಲಿ -

ಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವಚನಗಳ ವಾಚನ ಸ್ಪರ್ಧೆ ಏರ್ಪಡಿಸಿ ಸಾವಿರಾರು ವಿದ್ಯಾರ್ಥಿಗಳು ಸುಲಲಿತವಾಗಿ ವಚನಗಳನ್ನು ಪಠಿಸುವಂತೆ ಮಾಡುವಲ್ಲಿ ಮೇಲ್ಪಂಕ್ತಿ ಹಾಕಿದ್ದಾರೆ. ಬೆಂಗಳೂರಿನಲ್ಲಿ ಕ್ಷೇಮಾಭಿವೃದ್ಧಿ ಮಹಿಳಾ ಸಂಘದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕುವ ಕುರಿತಂತೆ ಉಪನ್ಯಾಸ, ಬೆಳಗಾವಿ ಜಿಲ್ಲೆಯ ಅಥಣಿಯ ಸವದಿಯಲ್ಲಿನ ವಿಜಯಮಹಾಂತೇಶ ಶಾಖಾ ಮಠದಲ್ಲಿ ಮಹಿಳೆಯರ ಬವಣೆಗಳು, ವಚನ ಸಾಹಿತ್ಯ ಕು- ರಿತಂತೆ ಉಪನ್ಯಾಸ ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಹಗ- ರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಸಾಗರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆದ ಎರಡನೇ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ ವಚನ ಸಾಹಿತ್ಯದಲ್ಲಿ ಮಹಿಳೆ” ವಿಷಯವನ್ನು ಮಂಡಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯಲ್ಲಿ "ಮಹಿಳೆ ಸಮಗ್ರತೆ ಪ್ರತಿನಿಧೀಕರಣ" ಕು- ರಿತು ವಿಚಾರ ಮಂಡಿಸಿದ್ದಾರೆ. ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ .

ಪ್ರಕಟಿತ ಕೃತಿಗಳು

ನನ್ನೊಡೆಯ ಬುದ್ಧಪ್ರಿಯ ( ಕವನ ಸಂಕಲನ)

ಜ್ಯೋತಿ ಮುಟ್ಟಿದ ಬತ್ತಿ ಜ್ಯೋತಿಯಾಯಿತ್ತು 

( ಲೇಖನಗಳ ಸಂಕಲನ)

ಶೋಕರಾಹಿತ್ಯ ( ಕವನ ಸಂಕಲನ)

ವಿನಂತಿ ಮೇರೆಗೆ ( ಗಝಲ್ ಸಂಕಲನ)

ಮುದ್ರಣ ಹಂತದಲ್ಲಿ

ಅನಭವದಾಗರ ( ಸ್ವರಚಿತ ಆಧುನಿಕ ವಚನಗಳು)

ಸಂವಿಧಾನದ ಸ್ತ್ರೀ ಶಿಲ್ಪಿಗಳು ( ವ್ಯಕ್ತಿ ಚಿತ್ರಣಗಳು)

ಪ್ರಶಸ್ತಿ ಪುರಸ್ಕಾರಗಳು

ಬಳ್ಳಾರಿಯ ಸುಭಾಷ್ ಭರಣಿ ವೇದಿಕೆ ವತ್ತಿಯಿಂದ ರಾಜ್ಯ ಮಟ್ಟದ ಡಾ. ಎಚ್ ಎನ್ ಪ್ರಶಸ್ತಿ ಹುನಗುಂದ ದುದ್ಗಿ ಪರಿವಾರದ ಸಾಹಿತ್ಯ ಕುಸುಮ ಪ್ರಶಸ್ತಿ ಕಮತಗಿಯ ಮೇಘ ಮೈತ್ರಿ ಸಂಘದಿಂದ ರಾಜ್ಯ ಮಟ್ಟದ ಚಂದ್ರ ಮುಕುಟ ಗೌರವ ಪ್ರಶಸ್ತಿ 2022 ನೇ ಸಾಲಿನ ಹುನಗುಂದ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕಲಾದಗಿ ಹೂಗಾರ ರವರ ಜಿಲ್ಲಾ ಮಟ್ಟದ ದತ್ತಿ ಪ್ರಶಸ್ತಿ ಗುಲ್ಬರ್ಗ ಬಸವ ಸಮಿತಿಯಿಂದ ಬಸವ ಪುರಸ್ಕಾರ ಪ್ರಶಸ್ತಿ ಕಲಬುರಗಿ , ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಬಸವ ಪುರಸ್ಕಾರ,ಹುನಗುಂದದ ಸಾಹಿತ್ಯ ಸಂಗಮ ಪ್ರತಿಷ್ಠಾನದ ಯುವ ಲೇಖಕಿ ಪ್ರಶಸ್ತಿ, ,ಇಳಕಲ್ಲ ಚಿತ್ತರಗಿ ವಿಜಯಮಾಂತೇಶ ಸಂಸ್ಥಾನ ಮಠದಿಂದ ಫ.ಗು. ಹಳಕಟ್ಟಿ ಪ್ರಶಸ್ತಿ, ಸಂದಿವೆ.

ರಾಜ್ಯದ್ಯಂತ ಹಲವಾರು ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿ,  ತರಬೇತಿ ಸಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅನೇಕ ತಾಲ್ಲೂಕು ಹಾಗೂ ಜಿಲ್ಲಾ ಆಡಳಿತದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಪಾಲ್ಗೊಂಡು ಸನ್ಮಾನಿತರಾಗಿದ್ದಾರೆ.

                                ಲೇಖಕ-ಎ.ಎನ್.ರಮೇಶ್. ಗುಬ್ಬಿ

                           ಕವಿಗಳು, ನಾಟಕಕಾರರು, ನಿರ್ದೇಶಕರು