ಶಾಸಕ ಬಿ.ಅರ್.ಪಾಟೀಲ್ ಗೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪ
ಶಾಸಕ ಬಿ.ಅರ್.ಪಾಟೀಲ್ ಗೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪ
ಆಳಂದನಲ್ಲಿ ಶಾಸಕರಿಂದ ಶಾಸನದ ಬದಲು ಶೋಷಣೆ
ಕಲಬುರಗಿ: ಆಳಂದ ಕ್ಷೇತ್ರದಲ್ಲಿ ಮಿತಿ ಮೀರಿ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಅದಕ್ಕೆ ಶಾಸಕ ಬಿ.ಆರ್.ಪಾಟೀಲ ಹಾಗೂ ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪಿಸಿದರು.
ನಗರದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿ ಪಡಿತರ ಆಹಾರ ಧಾನ್ಯ, ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಹಾರ ಧಾನ್ಯ ಮತ್ತು ಮೊಟ್ಟೆ ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ. ಇದಕ್ಕೆ ಬಿ.ಆರ್. ಪಾಟೀಲ ಮತ್ತು ಆರ್. ಕೆ. ಪಾಟೀಲ ಅವರೇ ಹೊಣೆ ಎಂದು ದೂರಿದರು.
ಈ ಹಿಂದೆ ಮಹಾರಾಷ್ಟ್ರ ಕ್ಕೆ ಪಡಿತರ ಧಾನ್ಯ ಸಾಗಿಸುತ್ತಿದ್ದವರನ್ನು ಹಿಡಿದು ಪೊಲೀಸರಿಗೆ ಮಾಹಿತಿ ಒದಗಿಸಿದರೂ, ಅಕ್ರಮ ಧಾನ್ಯ ಸಂಗ್ರಹಿಸಿದವರು ಸುಳ್ಳು ದಾಖಲೆ ನೀಡಿ ಬಿಡುಗಡೆಯಾದರು. ಈ ಕುರಿತು ದೂರು ನೀಡಿದರೂ ಪ್ರಕರಣ ದಾಖಲಿಸಲಿಲ್ಲ. ಈ ಹಿಂದೆ ಅಕ್ರಮವಾಗಿ ಪಡಿತರ ಸಂಗ್ರಹಿಸಿದ್ದ ರೋಜ್ ಟ್ರೇಡರ್‌ನ ಗೋದಾಮು ಮೇಲೆ ಡಿಸಿ ಹಾಗೂ ಎಸ್.ಪಿ. ಅವರ ಸಹಾಯದಿಂದ ದಾಳಿ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಈ ವೇಳೆ ಟ್ರೇಡರ್‌ನ ಮಾಲೀಕನ ಸಹೋದರ ಹಾಗೂ ಶಾಸಕರ ಬೆಂಬಲಿಗ, ಪುರಸಭೆ ಮಾಜಿ ಸದಸ್ಯ ಲಿಂಗರಾಜ ಪಾಟೀಲ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು. ಕೊನೆಗೆ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಮರುದಿನ ಬೆಳಿಗ್ಗೆ ಎಫ್‌ಐಆರ್ ದಾಖಲಾಯಿತು ಎಂದರು.
ಬಿ.ಆರ್. ಪಾಟೀಲ ಮತ್ತು ಅವರ ಬೆಂಬಲಿಗರ ಅಕ್ರಮ ಬಯಲಿಗೆಳೆಯುತ್ತಿರುವುದರಿಂದ ಸಂಬಂಧವೇ ಇರದ ಲಾರಿಯನ್ನು ಹಿಡಿದು ಚಾಲಕನನ್ನು ಹೊಡೆದು ಬೆದರಿಸಿ ಪಡಿತರ ಅಕ್ಕಿ ಅಕ್ರಮ ಸಾಗಣೆಯಲ್ಲಿ ನನ್ನ ಹೆಸರು ಹೇಳಲು ಒತ್ತಾಯಿಸಿದ್ದಾರೆ. ಲಾರಿ ಚಾಲಕ ದೂರು ಕೊಟ್ಟರೂ ಪ್ರಕರಣ ದಾಖಲಿಸುತ್ತಿಲ್ಲ. ಲಾರಿ ಚಾಲಕನಿಗೆ ಜೀವ ಬೆದರಿಕೆ ಹಾಕಿದ ಶಾಸಕರ ಬೆಂಬಲಿಗರಾದ ಫಿರ್ದೋಸ್ ಅನ್ಸಾರಿ ಮತ್ತು ಪಿಂಟು ಜಮಾದಾರ, ಸಂಗಡಿಗರ ವಿರುದ್ಧ ಪ್ರಕರಣ ದಾಖಲಿಸಬೇಕು ಆಗ್ರಹಿಸಿದರು.ಆಳಂದ ಕ್ಷೇತ್ರದ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.