ಅತಿಕ್ರಮಿಸಿಕೊಂಡಿರುವ ಬಂಡಿ ದಾರಿ ತೆರವುಗೊಳಿಸಿ, ರಸ್ತೆ ಕಲ್ಪಿಸಿಕೊಡಿ : ಪ್ರತಿಭಟನೆ
ಅತಿಕ್ರಮಿಸಿಕೊಂಡಿರುವ ಬಂಡಿ ದಾರಿ ತೆರವುಗೊಳಿಸಿ, ರಸ್ತೆ ಕಲ್ಪಿಸಿಕೊಡಿ : ಪ್ರತಿಭಟನೆ
ಚಿಂಚೋಳಿ : ಚಂದಾಪೂರ ದಲಿತರ ಬಡಾವಣೆ ಆಶ್ರಯ ಕಾಲೋನಿಗೆ ಹೋಗುವ ಬಂಡಿ ದಾರಿ ಮತ್ತು ಚಿಂಚೋಳಿ –ತಾಂಡೂರ ಮುಖ್ಯರಸ್ತೆಗೆ ಕೂಡು ರಸ್ತೆ ಕಲ್ಪಿಸುವ ಸರ್ವೇ ನಂ. 17,18, 209 ರ ಸೀಮೆ ಬದುವಿನ ರಸ್ತೆಯನ್ನು ಅತಿಕ್ರಮಿಸಿರುವ ಜಮೀನುದಾರರಿಂದ ಬಿಡಿಸಿ, ಓಡಾಡಲು ರಸ್ತೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ, ಚಿಂಚೋಳಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ವೀರ ಕನ್ನಡಿಗರ ಸೇನೆ ತಾಲೂಕ ಘಟಕ ವತಿಯಿಂದ ಬೀದರ್ - ಮಹೇಬೂಬ್ ನಗರ ರಸ್ತೆ ತಡೆದು ಪ್ರತಿಭಟನೆ ನಡೆಸಿ, ತಹಸೀಲ್ದಾರರಿಗೆ ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಿ, ಆಗ್ರಹಿಸಿತು.
ಸಂಘಟಕ ಮಾರುತಿ ಗಂಜಗಿರಿ, ಗೌತಮ್ ಬೊಮ್ಮನಳ್ಳಿ, ಕೆ.ಎಂ.ಬಾರಿ, ಗೋಪಾಲ ಇಡಗೊಟ್ಟಿ ಅವರು ಮಾತನಾಡಿ, ಸರ್ವೇ ನಂ. 17, 18, 19, 20, 210, 208, 207 ಮತ್ತು 209 ರ ಸೀಮಿ ಬದುವಿನಿಂದ ಹಾದು ಹೋಗುವ ಸರ್ವೇ ನಂ. 206ರಲ್ಲಿ ಸರ್ಕಾರ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಸರ್ವೇ ನಂಬರುಗಳ ಸೀಮೆ ಬದುವಿನ ರಸ್ತೆಯನ್ನು ಜಮೀನುದಾರರು ಅತಿಕ್ರಮಿಸಿಕೊಂಡು ಓಡಾಡುವ ರಸ್ತೆ ಬಂದ್ ಮಾಡಲಾಗಿದ್ದರಿಂದ ಜನರು 4 ಕಿ.ಮೀ ಸುತ್ತಿಕೊಂಡು ಕಾಲೋನಿಗೆ ತೆರಳಬೇಕಾಗಿದೆ. ಸೀಮೆ ಬದುವಿನಿಂದ ಓಡಾಡಲು ರಸ್ತೆ ಕಲ್ಪಿಸಿದರೆ ಆಶ್ರಯ ಕಾಲೋನಿ, ಬೆಳ್ಳಿ –ಬೆಳಕು, ಬಸವ ನಗರ, ಜೈ ಭೀಮ್ ನಗರ, ಮದೀನಾ ಕಾಲೋನಿ ಜನರು ಕೇವಲ 1.5 ಕಿ.ಮೀ ಅಂತರದಲ್ಲಿಯೇ ಮನೆಗೆ ಸೇರಬಹುದಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ನಂ. 17 ರಿಂದ 210 ರವರೆಗೆ ಸರ್ವೇ ಕಾರ್ಯಕೈಗೊಂಡು, ಅತಿಕ್ರಮಿಸಿಕೊಂಡಿರುವ ಜಮೀನುದಾರರ ವಶದಿಂದ ಬಿಡಿಸಿ, ಕಾಲೋನಿಗೆ ರಸ್ತೆ ಕಲ್ಪಿಸಿಕೊಡಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿ, ಒತ್ತಾಯಿಸಿದ್ದಾರೆ.
ಜನರ ಕಷ್ಟಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು : ಚಿಂಚೋಳಿಯಲ್ಲಿ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕ್ಷೇತ್ರದ ಶಾಸಕ ಡಾ. ಅವಿನಾಶ ಜಾಧವ ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಜನಸ್ಪದನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಗಿದ್ದರೂ ಕೂಡ 2 ಸಾವಿರ ಜನಸಂಖ್ಯೆ ಮತದಾರರು ಹೊಂದಿರುವ ಕಾಲೋನಿಗಳಿಗೆ ತೆರಳುವ ರಸ್ತೆ ಸಮಸ್ಯೆ ಬಗ್ಗೆ ಹರಿಯದೆ ಸಮಸ್ಯೆಯಾಗಿಯೇ ಉಳಿದಿದು ಕೊಂಡಿದೆ ಸಂಸದ ಸಾಗರ ಖಂಡ್ರೆ ಅವರು ಗಮನ ಹರಿಸಬೇಕು. - ಸಂಘಟಕ ಮಾರುತಿ ಗಂಜಗಿರಿ
ಈ ಸಂದರ್ಭದಲ್ಲಿ ವೀರಣ್ಣ ಹೋಸಮನಿ , ಅಮರ ಲೋಡನೂರ್, ಸಿದ್ದು ರಂಗನೂರ, ಸಂತೋಷ ಗುತ್ತೇದಾರ, ಶಿವಯೋಗಿ ರಂಗನೂರ್, ಕಾಶಿರಾಮ ದೇಗಲ್ಮಡಿ, ರೇವಣಸಿದ್ದಪ್ಪ ಸುಬೇದಾರ, ಕೆ. ಮಹೇಶ, ಈರಪ್ಪ ತಾಡಪಳ್ಳಿ, ಸೇರಿದಂತೆ ಕಾಲೋನಿ ನಿವಾಸಿಗಳು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದರು.