ಐತಿಹಾಸಿಕ ಸುರಪುರ ಅರಮನೆಗೆ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಭೇಟಿ

ಐತಿಹಾಸಿಕ ಸುರಪುರ ಅರಮನೆಗೆ ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಭೇಟಿ
ಸುರಪುರ:-ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕನ್ನಡ ಭಾರತಿ ಯೋಜನೆ ಅಡಿಯಲ್ಲಿ ಐತಿಹಾಸಿಕ ವ್ಯಕ್ತಿಗಳ ನೂರು ಕೃತಿಗಳು ಪ್ರಕಟವಾಗುತ್ತಿದ್ದು ಅದರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ ಈ ಸಾಲಿನಲ್ಲಿ ಸ್ವಾತಂತ್ರ್ಯ ಸೇನಾನಿ ಸುರಪುರದ ರಾಜಾ ವೆಂಕಟಪ್ಪ ನಾಯಕ ಹಾಗೂ ಅವರ ತಾಯಿ ಶೂರರಾಣಿ ಈಶ್ವರಮ್ಮ ಅವರ ಕುರಿತು ಎರಡು ಕೃತಿಗಳನ್ನು ಪ್ರಕಟಿಸುತ್ತಿದ್ದು ಖ್ಯಾತ ಲೇಖಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ರಾಣಿ ಈಶ್ವರಮ್ಮ ಕುರಿತು ಕೃತಿ ರಚನೆಯ ಜವಾಬ್ದಾರಿ ಹೊಂದಿದ್ದಾರೆ.ಅವರು ಐತಿಹಾಸಿಕ ಸುರಪುರ ಅರಮನೆಗೆ ಭೇಟಿ ನೀಡಿ ಅರಮನೆಯ ಸಂಸ್ಥಾನಿಕರಾದ ರಾಜಾ ಡಾ.ಕೃಷ್ಣಪ್ಪನಾಯಕ ಅವರನ್ನು ಭೇಟಿ ಮಾಡಿ ಸುದೀರ್ಘ ವಾಗಿ ಅವರ ಸಂದರ್ಶನ ಮಾಡಿ ವಿವರ ಪಡೆದರು.
ಈಗಾಗಲೇ ಎಪ್ಪತ್ತಕಿಂತ ಹೆಚ್ಚು ಕೃತಿಗಳನ್ನು ವಿವಿಧ ಪ್ರಕಾರಗಳಲ್ಲಿ ಬರೆದು ನಾಡಿನಾದ್ಯಂತ ಹೆಸರು ಮಾಡಿರುವ ಡಾ.ಸಿದ್ಧರಾಮ ಹೊನ್ಕಲ್ ಅವರು ಡಾ.ಬಿ.ಎಲ್.ವೇಣು ಅವರ ಮೂಲಕ ಸುರಪುರದ ರಾಜಾ ವೆಂಕಟಪ್ಪ ನಾಯಕರ ಕುರಿತು ಕಾದಂಬರಿ ಬರೆಯಿಸಿದ್ದರು. ಈಗ ಸ್ವತಹ ಅವರೇ ರಾಣಿ ಈಶ್ವರಮ್ಮ ಕುರಿತು ಕೃತಿ ಬರೆಯಬೇಕು ಅನ್ನೋದು ನಮ್ಮ ಆಶಯ ಆಗಿತ್ತು. ಅದಕ್ಕೆ ಅವರು ಒಪ್ಪಿಕೊಂಡು ಈ ಕೃತಿ ರಚನೆಗೆ ಮುಂದಾಗಿರುವದು ಸಂತಸ ತಂದಿದೆ.ಶೀಘ್ರದಲ್ಲೆ ಅವರು ರಾಣಿ ಈಶ್ವರಮ್ಮ ಅವರು ಹುಟ್ಟಿ ಬೆಳೆದ ರತ್ನಗಿರಿ ಸಂಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ತಿಳಿಸಿದ್ದಾರೆ.
ಇದು ಬಹಳ ಸಂತಸದ ವಿಷಯ.ಮರೆತು ಹೋಗಬಹುದಾದ ಐತಿಹಾಸಿಕ ನೂರಾರು ವ್ಯಕ್ತಿಗಳ ಬಗ್ಗೆ ಅಕಾಡೆಮಿಯ ಮೂಲಕ ಕೃತಿ ಪ್ರಕಟಣೆ ಮಾಡಿ ಹೈಸ್ಕೂಲ್ ಹಾಗೂ ಪಿಯೂ ಮಟ್ಟದ ವಿದ್ಯಾರ್ಥಿಗಳಿಗೆ ಆ ಮೂಲಕ ಇಡೀ ಜನಮಾನಸಕ್ಕೆ ಪರಿಚಯ ಮಾಡಿಸುವ ಈ ಕೆಲಸ ಬಹಳ ಮಹತ್ವದ್ದು ಆಗಿದೆ.ಆ ಹಿನ್ನೆಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರಿಗೂ ಅಭಿನಂದನೆಗಳು ಸಲ್ಲಬೇಕು.
ಅದರಲ್ಲೂ ವಿಶೇಷವಾಗಿ ನಮ್ಮ ಈ ಸಗರನಾಡಿನವರೇ ಆದ ಡಾ.ಸಿದ್ಧರಾಮ ಹೊನ್ಕಲ್ ರು ಇಡೀ ನಾಡಿನಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಬೆಳೆದರು ಸಹ ತಮ್ಮ ನೆಲದ ಅರಸು ಮನೆತನಗಳ ಇತಿಹಾಸವನ್ನು ಸೃಜನಶೀಲವಾಗಿ ಕಟ್ಟಿಕೊಟ್ಟು ಜನ ಮಾನಸಕ್ಕೆ ತಲುಪಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ರಾಜಾ ಡಾ.ಕೃಷ್ಣಪ್ಪನಾಯಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಸಂದರ್ಶನದ ಸಮಯದಲ್ಲಿ ಲೇಖಕರ ಗೆಳೆಯರಾದ ಶಿವಕುಮಾರ ಮಸ್ಕಿ ಹಾಗೂ ಯುವ ಕವಿ ಜಾವೇದ್ ಅವರು ಉಪಸ್ಥಿತರಿದ್ದರು.
ಸುದ್ಧಿ ಮೂಲ:- ಶಿವಕುಮಾರ ಮಸ್ಕಿ ಸುರಪುರ.