“ನಡೆ, ನುಡಿ ಮತ್ತು ಮಡಿ ಧರ್ಮದ ಪ್ರತೀಕ” – ತಾವರಗೇರಾ ಶ್ರೀಗಳು

“ನಡೆ, ನುಡಿ ಮತ್ತು ಮಡಿ ಧರ್ಮದ ಪ್ರತೀಕ” – ತಾವರಗೇರಾ ಶ್ರೀಗಳು
ಆಳಂದ ತಾಲೂಕಿನ ಆಲೂರ (ಬಿ) ಗ್ರಾಮದ ಶಾಂತಲಿಂಗೇಶ್ವರ ಮಠದಲ್ಲಿ ಲಿಂಗೈಕ್ಯ ಪೂಜ್ಯ ರೇವಣ್ಣಯ್ಯ ಹಿರೇಮಠ ಮತ್ತು ಗುರುಲಿಂಗಯ್ಯ ಹಿರೇಮಠ ಅವರ ನೂತನ ಸಮಾಧಿಗೆ ಲಿಂಗಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜರುಗಿತು. ಈ ಕಾರ್ಯಕ್ರಮದಲ್ಲಿ ತಾವರಗೇರಾ ಶ್ರೀ ಸಿದ್ದಾರೂಢ ಮಠದ ಶ್ರೀ ಸಿದ್ದಾರೂಢ ಮಹಾಸ್ವಾಮಿಗಳು ಆಶೀರ್ವಚನ ನೀಡಿ, “ನಮ್ಮ ನಡೆ, ನುಡಿ ಮತ್ತು ಮಡಿ ಧರ್ಮದ ಪ್ರತೀಕವಾಗಿದೆ. ದೇವರು, ದೇವಸ್ಥಾನಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದರು.
ಆಲೂರಿನ ಶಾಂತಲಿಂಗೇಶ್ವರ ಮಠದ ಪೂಜ್ಯ ಗುರುಲಿಂಗಯ್ಯ ಮುತ್ಯಾ ಹಿರೇಮಠ ಪವಾಡ ಪುರುಷರಾಗಿದ್ದರು. ಅವರು ಅನೇಕ ಗ್ರಾಮಗಳ ಭಕ್ತರ ಆಸೆಗಳ ಈಡೇರಿಸಿದ ಮಹಾನ್ ಸಾಧಕರಾಗಿ ಪ್ರಸಿದ್ಧರಾಗಿದ್ದರು. ಈ ಮಠದ ಪರಮ ಭಕ್ತರಾದ ಆರೋಗ್ಯ ಇಲಾಖೆಯ ಶ್ರೀ ಬಸವರಾಜ ಪರಾಸ್ತೆ ಅವರು ಸుమಾರು ೩೦ ಲಕ್ಷ ರೂ. ವೆಚ್ಚದಲ್ಲಿ ಶಾಂತಲಿಂಗೇಶ್ವರ ಗುಡಿಯ ನವೀಕರಣ ಕಾರ್ಯ ಮಾಡಿಸಿದ್ದಾರೆ. ಮೂರ್ತಿ ಸ್ಥಾಪನೆಯು ಮುಂದಿನ ದಿನಗಳಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಾಸೋಹದ ವಿಭಾಗದ ನೇತೃತ್ವ ವಹಿಸಿದ್ದ ಕೆ.ಎಸ್.ಆರ್.ಟಿ.ಸಿ ನಿವೃತ್ತ ಅಧಿಕಾರಿ ಗುರುಲಿಂಗಯ್ಯ ಮಠಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಭಕ್ತರಿಗೆ ಪ್ರಸಾದ ಮತ್ತು ಸಂಗೀತ ಕಾರ್ಯಕ್ರಮದ ವ್ಯವಸ್ಥೆ ಕೂಡ ಕಲಾವಿದರು ವಿನೋದ ದಸ್ತಾಪೂರ, ಶಿವಕುಮಾರ ಪಾಟೀಲ ಮತ್ತು ಸಂತೋಷ ಕೋಡ್ಲಿಯವರಿಂದ ನಿಭಾಯಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹಾಗೂ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖರಿಗೆ ಹಾಗೂ ಹಲವಾರು ಭಕ್ತರಿಗೆ ತಾವರಗೇರಾ ಶ್ರೀಗಳಿಂದ ಆಶೀರ್ವಾದ ಲಭಿಸಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ವೇ.ಮೂ. ಮಹಾಲಿಂಗಯ್ಯ ಭಟ್, ಚನ್ನವೀರಯ್ಯ ಭಟ್, ಪುಟ್ಟರಾಜ ಮಠಪತಿ, ವಿಶ್ವನಾಥ ಮಠಪತಿ ಸೇರಿದಂತೆ ಹಲವು ಭಕ್ತರು ಸಕ್ರಿಯವಾಗಿ ಪಾಲ್ಗೊಂಡರು.
ಹೆಚ್ಚು ಭಕ್ತರ ಹಾಜರಾತಿಯಿಂದ, ಶ್ರದ್ಧಾ ಹಾಗೂ ಭಕ್ತಿಭಾವದಿಂದ ಸಮಾರಂಭ ಯಶಸ್ವಿಯಾಗಿ ನೆರವೇರಿತು.