ಕಲಬುರ್ಗಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ದಿನಾಚರಣೆ:-ಪ್ರಿಯಾಂಕ್ ಖರ್ಗೆ

ಕಲಬುರ್ಗಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ದಿನಾಚರಣೆ:-ಪ್ರಿಯಾಂಕ್ ಖರ್ಗೆ

ಕಲಬುರ್ಗಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ದಿನಾಚರಣೆ:-ಪ್ರಿಯಾಂಕ್ ಖರ್ಗೆ

ಕಲ್ಯಾಣ ಪಥ ರಸ್ತೆ ನಿರ್ಮಾಣಕ್ಕೆ ಮುಂದಿನ ತಿಂಗಳಿನಿಂದ ಸಮೀಕ್ಷೆ ಆರಂಭ-ಪ್ರಿಯಾಂಕ್ ಖರ್ಗೆ

ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ “ಕಲ್ಯಾಣ ಪಥ” ಯೋಜನೆಯಡಿ ಕಲ್ಯಾಣ ಕರ್ನಾಟಕದಲ್ಲಿ 1,150 ಕಿ.ಮೀ. ರಸ್ತೆಗಳನ್ನು 1,000 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕಾಗಿ ಸಮೀಕ್ಷೆ ಕಾರ್ಯ ಮುಂದಿನ ತಿಂಗಳಿನಿಂದ ನಡೆಯಲಿದೆ ಎಂದು ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗುರುವಾರ ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 78ನೇ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇದಲ್ಲದೆ ಆರ್.ಡಿ.ಪಿ.ಆರ್. ಇಲಾಖೆಯಿಂದ ರಾಜ್ಯದಾದ್ಯಂತ “ಪ್ರಗತಿ ಪಥ” ಯೋಜನೆಯಡಿ 5,180 ಕೋಟಿ ರೂ. ವ್ಯಯ ಮಾಡಿ 7,110 ಕಿ..ಮೀ. ಗ್ರಾಮೀಣ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.

ಬ್ರಿಟೀಷರಿಂದ ಸ್ವಾತಂತ್ರ‍್ಯ ಪಡೆದ ಸಂದರ್ಭದಲ್ಲಿ ಭಾರತವು ಸೂಜಿಗೂ ಬೇರೆ ದೇಶದತ್ತ ಮುಖ ಮಾಡಬೇಕಾದ ಪರಿಸ್ಥಿತಿಯಲ್ಲಿತ್ತು. ಇಂದು ನಾವು ಸೆಮಿ ಕಂಡಕ್ಟರ್ ಚಿಪ್ ತರಿಸುವ ಸಾಮರ್ಥ್ಯ ಹೊಂದಿದ್ದೇವೆ. ಮಂಗಳ ಗ್ರಹದ ಮೇಲೆ ಮಾನವನನ್ನು ಕಳುಹಿಸುತ್ತಿದ್ದೇವೆ. ಇಡೀ ವಿಶ್ವಕ್ಕೆ ಐ.ಟಿ. ಎಕ್ಸ್ ಪೋರ್ಟ್ ನಲ್ಲಿ ಮುಂದಿದ್ದೇವೆ. ಅದರಲ್ಲಿ ಕರ್ನಾಟಕ ವಿಶ್ವದ ನಾಲ್ಕನೇ ಶಕ್ತಿಯಾಗಿ ಹೊರಹೊಮ್ಮಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ಹಸಿವು, ಅಪೌಷ್ಠಿಕತೆ ಹೆಚ್ಚಿತ್ತು. ಕೈಗಾರಿಕೆ ಇರಲಿಲ್ಲ. ಸಾಕ್ಷರತೆ ತೀರ ಕೆಳಮಟ್ಟದಲ್ಲಿತ್ತು. ಸುಮಾರು 500 ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸುವ ದೊಡ್ಡ ಸಮಸ್ಯೆ ಮುಂದಿತ್ತು. ಅಂದಿನ ನಮ್ಮ ಪೂರ್ಜರು ಮತ್ತು ಮಹಾನ್ ನಾಯಕರ ದೂರದೃಷ್ಠಿಯಿಂದ ಕ್ರಮೇಣ ಕ್ಷೀರಕ್ರಾಂತಿ, ಹಸಿರು ಕ್ರಾಂತಿ ಸಾಧ್ಯವಾಯಿತು. ಏಮ್ಸ್, ಐ.ಐ.ಟಿ, ಐ.ಐ.ಐ.ಟಿ, ಹೆಚ್.ಎ.ಎಲ್., ಎಲ್.ಐ.ಸಿ., ಬಿ.ಎಚ್.ಇ.ಎಲ್., ಐ.ಐ.ಎಸ್.ಸಿ. ಹೀಗೆ ಅನೇಕ ಪಿ.ಎಸ್.ಯು.ಗಳನ್ನು ಸ್ಥಾಪಿಸಿ ಸ್ವಾವಲಂಬಿ ಭಾರತವನ್ನಾಗಿ ಮಾಡಿಸಿದ್ದು, ಅವರನೆಲ್ಲ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಸ್ವಾತಂತ್ರ್ಯ ಅಷ್ಟೊಂದು ಸಲೀಸಾಗಿ ದೊರೆತಿಲ್ಲ. ಅಸಂಖ್ಯಾತ ಸ್ವಾತಂತ್ರ ಸೇನಾನಿಗಳ ತ್ಯಾಗ, ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರ್ಯದಿಂದ ಇಂದಿಲ್ಲಿ ನಾವು-ನೀವೆಲ್ಲರು ಸ್ವಚ್ಛಂದ ಗಾಳಿ ಸೇವಿಸುತ್ತಿದ್ದೇವೆ ಎಂದು ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸಿದ ಸಚಿವರು, ವಿಶೇಷವಾಗಿ ಇಂದಿನ ಯುವ ಸಮೂಹ ಸ್ವಾತಂತ್ರ್ಯದ ಹೋರಾಟ ಮತ್ತು ಇತಿಹಾಸದ ಚರಿತ್ರೆ ಓದಬೇಕಾಗಿದೆ. ಪೂರ್ವಜರು ಹಾಕಿಕೊಂಡ ದಾರಿಯಲ್ಲಿ ನಾವು ಸಾಗಬೇಕಾಗಿದೆ ಎಂದು ಯುವ ಸಮೂಹಕ್ಕೆ ಕರೆ ನೀಡಿದರು.

ಇಂತಹ ಮಹಾನ್ ನಾಯಕರ ಆಶಯದಂತೆ ರಾಜ್ಯದಲ್ಲಿ ನಮ್ಮ ಸರ್ಕಾರ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ತರುವ ನಿಟ್ಟಿನಲ್ಲಿ ನಾಡಿನ ಜನ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. “ಶಕ್ತಿ” ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 5ರ ವರೆಗೆ 765.30 ಲಕ್ಷ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಬೆಳೆಸಿದ್ದಾರೆ. “ಅನ್ನ ಭಾಗ್ಯ” ಯೋಜನೆಯಡಿ ಜಿಲ್ಲೆಯ 5,70,256 ಪಡಿತರ ಚೀಟಿಯ 19,63,195 ಸದಸ್ಯರಿಗೆ 5 ಕೆ.ಜಿ. ಉಚಿತ ಪಡಿತರ ನೀಡಿದಲ್ಲದೆ, ಜೂನ್-2024 ಮಾಹೆ ವರೆಗೆ 5,00,324 ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 280.39 ಕೋಟಿ ರೂ. ಡಿ.ಬಿ.ಟಿ. ಮೂಲಕ ಪಾವತಿ ಮಾಡಲಾಗಿದೆ. “ಗೃಹ ಜ್ಯೋತಿ” ಯೋಜನೆಯಡಿ ಜಿಲ್ಲೆಯಲ್ಲಿ 5,46,636 ಜನ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, “ಗೃಹ ಲಕ್ಷ್ಮೀ” ಯೋಜನೆಯಡಿ ಜಿಲ್ಲೆಯ 5,59,299 ಮಹಿಳೆಯರಿಗೆ ಮಾಸಿಕ 2,000 ರೂ. ಗಳಂತೆ 957.66 ಕೋಟಿ ರೂ. ಪಾವತಿ ಮಾಡಲಾಗಿದೆ. “ಯುವ ನಿಧಿ” ಯೋಜನೆಯಡಿ ಜಿಲ್ಲೆಯಲ್ಲಿ 11,845 ಜನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹರಿಗೆ ಜೂನ್-2024 ಅಂತ್ಯದ ವರೆಗೆ ಅಂದಾಜು 5.80 ಕೋಟಿ ರೂ. ನಿರುದ್ಯೋಗ ಭತ್ಯೆ ನೀಡಲಾಗಿದೆ ಎಂದರು.

ಪ್ರತಿಷ್ಠಿತ ಇಂದಿರಾ ಗಾಂಧಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 150 ಹಾಸಿಗೆಯ ಶಾಖೆಯನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುತ್ತಿದೆ. ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆ ಮುಂದಿನ ತಿಂಗಳಿನಲ್ಲಿ ಲೋಕಾರ್ಪಣೆ ಮಾಡಿ ಜನರ ಸೇವೆಗೆ ಒದಗಿಸಲಾಗುವುದು. ಐ.ಟಿ.ಬಿ.ಟಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕಲಬುರಗಿಯಲ್ಲಿ ಮಲ್ಟಿ ಸ್ಕಿಲ್ ಡೆವಲೆಪಮೆಂಟ್ ಸೆಂಟರ್ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಉದ್ದೇಶ ಹೊಂದಿದ್ದೇವೆ. ಇದಲ್ಲದೆ 20 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ಸರ್ಕಾರಿ (ಪುರುಷರ) ಐ.ಟಿ.ಐ. ತರಬೇತಿ ಸಂಸ್ಥೆಯನ್ನು ಪುನಶ್ಚೇತನಗೊಳಿಸಲಾಗುತ್ತಿದೆ ಎಂದರು.

ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2024-25ನೇ ಸಾಲಿಗೆ 62 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನೀಡಿದ್ದು, ಇದುವರೆಗೆ 30.86 ಲಕ್ಷ ಮಾನವ ದಿನ ಸೃಜಿಸಿ 2.29 ಲಕ್ಷ ಜನರಿಗೆ ಉದ್ಯೋಗ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ನಿಟ್ಟಿನಲ್ಲಿ 205 "ಕೂಸಿನ ಮನೆ" ಗಳನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.54.19 ರಿಂದ ಶೇ.54.59ಕ್ಕೆ ಹೆಚ್ಚಾಗಿದೆ ಎಂದರು.

ಆಳಂದ ಪಟ್ಟಣಕ್ಕೆ ಅಮರ್ಜಾ ಅಣೆಕಟ್ಟು ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ 85.86 ಕೋಟಿ ರೂ. ವೆಚ್ಚದ ಕಾಮಗಾರಿಗೆ ನಿನ್ನೇ ಅಡಿಗಲ್ಲು ಹಾಕಿದ್ದೇನೆ. ಮುಂದಿನ ದಿನದಲ್ಲಿ ಜೇವರ್ಗಿಯಲ್ಲಿ 371 ಕೋಟಿ ರೂ. ಮತ್ತು ಫರತಾಬಾದನಲ್ಲಿ 85 ಕೋಟಿ ರೂ. ವೆಚ್ಚದ ಬಹುಗ್ರಾಮ ಕುರಿಯುವ ನೀರು ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗ್ಗಿಂತ ಶೇ.20ರಷ್ಟು ಹೆಚ್ಚು ಮಳೆಯಾಗಿದೆ. ಒಟ್ಟು 8.65 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿ ಇದೂವರೆಗೆ ಗುರಿ ಮೀರಿ 8.90 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಬೀಜ ಮತ್ತು ರಸಗೊಬ್ಬರ ಕೊರತೆ ಇಲ್ಲ. ಹೀಗಾಗಿ ರೈತರು ಆತಂಕ ಪಡಬೇಕಿಲ್ಲ ಎಂದರು. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಕಳೆದ 2023-24ನೇ ವರ್ಷದಲ್ಲಿ 1.59 ಲಕ್ಷ ರೈತರಿಗೆ 189.39 ಕೋಟಿ ರೂ. ಬೆಳೆ ವಿಮೆ ಪರಿಹಾರ ದೊರೆತಿದೆ. ಈ ವರ್ಷವು ಸಹ ಜಿಲ್ಲೆಯ 2,05,977 ರೈತರು ಬೆಳೆ ವಿಮೆ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಕಲಬುರಗಿಯನ್ನು ಕೃಷಿ ಹಬ್ ಮಾಡುವ ಸಂಕಲ್ಪ ನಮ್ಮದಾಗಿದೆ. ತಾಲೂಕಾ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಿ ತೋಟಗಾರಿಕೆ ಬೆಳೆಗಳನ್ನು ಶೇಖರಣೆ ಮಾಡಲಾಗುವುದು. ಬಾಡಿಗೆ ಯಂತ್ರ ಪಡೆಯಲು ಕಸ್ಟಮರ್ ಸರ್ವಿಸ್ ಸೆಂಟರ್ ತೆರೆಯಲಾಗುವುದು ಎಂದ ಅವರು ಜಿಲ್ಲೆಯ ಸುಪ್ರಸಿದ್ದ ದೇವಲ ಗಾಣಗಾಪೂರ ಜೇರ್ಣೋದ್ಧಾರಕ್ಕಾಗಿ ಮತ್ತು ಅದರ ಸುಸ್ಥಿರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಕಲಬುರಗಿ ಅಭಿವೃದ್ಧಿಗೆ ಎಸ್.ಟಿ.ಎಫ್. ರಚನೆ:

ಮುಂದಿನ 20 ವರ್ಷಗಳಲ್ಲಿ ಯಾವೆಲ್ಲ ಕ್ಷೇತ್ರದಲ್ಲಿ ಕಲಬುರಗಿ ಜಿಲ್ಲೆಯ ಮೂಲಸೌಕರ್ಯ ಹೆಚ್ಚಿಸಬೇಕು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ನಿಟ್ಟಿನಲ್ಲಿ ನೀಲಿ ನಕ್ಷೆ ಸಿದ್ದಪಡಿಸಲು ತಜ್ಞರನ್ನೊಳಗೊಂಡ ಸ್ಪೆಷಲ್ ಟಾಸ್ಕ್ ಫರ‍್ಸ್ ರಚನೆ ಮಾಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಘೋಷಿಸಿದರು.

3-4 ತಿಂಗಳಲ್ಲಿ ನೈಸ್ ಅಕಾಡೆಮಿ ಕಾರ್ಯರಂಭ:

ಐ.ಎ.ಎಸ್, ಕೆ.ಎ.ಎಸ್., ಬ್ಯಾಂಕಿಂಗ್ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು 3-4 ತಿಂಗಳಲ್ಲಿ ಕಲಬುರಗಿಯಲ್ಲಿ ನೈಸ್ ಅಕಾಡೆಮಿ ಕಾರ್ಯಾರಂಭ ಮಾಡಲಿದೆ ಎಂದರು.

ಹಲವರಿಗೆ ಸನ್ಮಾನ:

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿ ಸನ್ಮಾನಿಸಲಾಯಿತು. ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚಿನ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭಾರತ ಚುನಾವಣಾ ಆಯೋಗದಿಂದ ಏರ್ಪಡಿಸಿದ ಸ್ವೀಪ್ ಛಾಯಚಿತ್ರ ಸ್ಪರ್ಧೇಯಲ್ಲಿ ವಿಜೇತ ವಿಜಯ ಕರ್ನಾಟಕ ಪತ್ರಿಕೆಯ ಛಾಯಾಗ್ರಾಹಕ ಶಿವಶರಣಪ್ಪ ಬೆಣ್ಣೂರು ಅವರಿಗೆ ಪ್ರಶಸ್ತಿ ಪತ್ರ ನೀಡಿ ಗಣ್ಯರು ಗೌರವಿಸಿದರು. ಇದೇ ಸಂದರ್ಭದಲ್ಲಿ ತಮ್ಮ ನಿಧನದ ಮುನ್ನ ತಮ್ಮ ಕಣ್ಣುಗಳನ್ನು ದಾನ ಮಾಡಿದ ಕಲಬುರಗಿಯ ಅನ್ನಪೂರ್ಣ ಕ್ರಾಸ್ ನಿವಾಸಿ ಶರಣಮ್ಮ ಇವರ ಪುತ್ರಿ ಶಿವಲೀಲಾ ಅವರಿಗೂ ಈ ಸಂದರ್ಭದಲ್ಲಿ ಗಣ್ಯರು ಸನ್ಮಾನಿಸಿದರು.

ಪಥಸಂಚಲನದಲ್ಲಿ ಗಮನ ಸೆಳೆದ ನಾರಿಶಕ್ತಿ ಪ್ರದರ್ಶನ:

ಡಿ.ಎ.ಆರ್. ಪಿ.ಐ. ಚನ್ನಬಸವ ನೇತೃತ್ವದಲ್ಲಿ 18 ವಿವಿಧ ತುಕಡಿಗಳಿಂದ ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ವಿಶೇಷವಾಗಿ ಆರ್.ಡಿ.ಪಿ.ಆರ್ ಇಲಾಖೆಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ನೇಮಿಸಿರುವ ಎನ್.ಆರ್.ಎಲ್.ಎಂ. ಯೋಜನೆಯ ನಾರಿ ಶಕ್ತಿ ಸ್ವಚ್ಛತಾ ಕಾರ್ಮಿಕರು ಮತ್ತು ಸ್ವಚ್ಛ ವಾಹಿನಿಗಳು ಮೊದಲ ಬಾರಿಗೆ ಪಥಸಂಚಲನದಲ್ಲಿ ಭಾಗಿಯಾಗಿ ಸಚಿವರಿಗೆ ಗೌರವ ವಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಮೀನಾಕ್ಷೀ ಭಗವಾನ್ ನೇತೃತ್ವದ 47 ಕಾರ್ಮಿಕರನ್ನು ಒಳಗೊಂಡ ಸ್ವಚ್ಛ ವಾಹಿನಿ ಮತ್ತು ಮಹಿಳಾ ಕಾರ್ಮಿಕರ ತುಕಡಿ ಕಂಡ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಕೃಷಿ ಇಲಾಖೆ, ಜೆಸ್ಕಾಂ, ಸಂಚಾರಿ ಪೊಲೀಸ್, ತೋಟಗಾರಿಕೆ ಹಾಗೂ ಆರೋಗ್ಯ ಇಲಾಖೆಯಿಂದ ಆಕರ್ಷಕ ಸ್ಥಬ್ದಚಿತ್ರಗಳ ಪ್ರದರ್ಶನ ನಡೆಯಿತು. ಶಾಲಾ-ಮಕ್ಕಳಿಂದ ದೇಶಭಕ್ತಿ ಗೀತೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕೆ.ಕೆ.ಅರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಡಿ.ಸಿ. ಬಿ. ಫೌಜಿಯಾ ತರನ್ನುಮ್, ಐ.ಜಿ.ಪಿ ಅಜಯ್ ಹಿಲೋರಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ ಶಂಕರ್, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಡಿ.ಸಿ.ಎಫ್. ಸುಮಿತ್ ಪಾಟೀಲ, ಕೆ.ಕೆ.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.