ಕಾವ್ಯ ಹುಟ್ಟುವ ಕ್ಷಣ ಸೋಜಿಗ : ಪ್ರೊ.ವಿಸಾಜಿ

ಡಾ.ಅಂಬುಜಾ ಮಳಖೇಡಕರ ರಚಿಸಿದ 8 ಕೃತಿಗಳ ಬಿಡುಗಡೆ
ಕಾವ್ಯ ಹುಟ್ಟುವ ಕ್ಷಣ ಸೋಜಿಗ : ಪ್ರೊ.ವಿಸಾಜಿ
ಕಲಬುರಗಿ : ಕಾಲಾನುಕಾಲದಿಂದಲೂ ಕಾವ್ಯ ಹುಟ್ಟುವ ಕ್ಷಣ ಸೋಜಿಗವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರೊ.ವಿಕ್ರಮ ವಿಸಾಜಿ ಹೇಳಿದರು.
ಲೇಖಕಿ, ಅನುವಾದಕಿ ಡಾ. ಅಂಬುಜಾ ಮಳಖೇಡಕರ್ ರಚಿಸಿದ ಮತ್ತು ಅನುವಾದಿಸಿದ ಎಂಟು ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾವ್ಯ ಹೇಗೆಯೇ ಹುಟ್ಟಿರಲಿ, ಅದರಲ್ಲಿ ಆದೃತೆಯ ಭಾವ ಇರದಿದ್ದರೆ ಅದು ಕೇವಲ ಶಬ್ದಗಳ ಸಂಯೋಜನೆಯಾಗುವುದು ಎಂದರು.
ಚೈತನ್ಯಮಯಿ ಆರ್ಟ್ ಗ್ಯಾಲರಿ ಮುಖ್ಯಸ್ಥ ಡಾ.ಎ.ಎಸ್.ಪಾಟೀಲ ಸಮಾರಂಭ ಉದ್ಘಾಟಿಸಿದರು.
ಕನ್ನಡ ಕೃತಿಗಳನ್ನು ಬಿಡುಗಡೆ ಮಾಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಪುರುಷರ ಸಮನಾಗಿ ಬರೆಯುತ್ತಿರುವ ಮಹಿಳೆಯರಿಗೆ ಶಕ್ತಿ ಬಂದಿದ್ದು, ಕೇವಲ ದೈವೀ ಕೃಪೆಯಿಂದಲ್ಲ. ಬದಲಿಗೆ ಅಕ್ಷರದ ಅರಿವಿನಿಂದ. ಆ ಅರಿವು ಮಹಿಳೆಯರಿಗೆ ಲಭಿಸಿದ್ದು ಸಂವಿಧಾನದಿಂದ ಎಂಬುದನ್ನು ಮರೆಯ ಕೂಡದು ಎಂದರು.
ಹಿಂದಿ ಕೃತಿಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಸಂದೀಪ ರಣಭೀರಕರ್ ಮಾತನಾಡಿ, ಅನುವಾದದ ಕಾರ್ಯ ಸುಲಭವಲ್ಲ. ಎರಡು ಭಾಷೆಗಳು ಮತ್ತು ಆಯಾ ಭಾಷೆಯ ಸಂಸ್ಕೃತಿ ಅರ್ಥ ಮಾಡಿಕೊಳ್ಳುವ ಶಕ್ತಿ ಹೊಂದಿದರೆ ಉತ್ತಮ ಅನುವಾದ ಸಾಧ್ಯವಾಗುತ್ತದೆ. ಮೂಲ ಭಾಷೆಯ ಕೃತಿಯನ್ನು ಅನುವಾದಕರು ಮರು ಸೃಷ್ಟಿ ಮಾಡಬೇಕಾಗುತ್ತದೆ. ಡಾ. ಅಂಬುಜಾ ಅವರು ಯಶಸ್ವಿಯಾಗಿ ಅನುವಾದ ಮಾಡಿದ್ದಾರೆ ಎಂದರು.
ಕನ್ನಡ ಕೃತಿಗಳನ್ನು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಪರಿಚಯಿಸಿದರು. ಹಿಂದಿ ಕೃತಿಗಳನ್ನು ಖಾಜಾ ಬಂದೇನವಾಜ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಆಫ್ ಶಾ ಬೇಗಂ ಅಹಮದಲಿ ಪರಿಚಯಿಸಿದರು.
ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಾರಿಕಾದೇವಿ ಕಾಳಗಿ ಅವರು, ಸಂಸ್ಕೃತಿ ಪ್ರಕಾಶನ ಮತ್ತು ಸುವನಾ ಪ್ರಕಾಶನದ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಲೇಖಕ- ಪ್ರಕಾಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಎಂಟು ಕೃತಿಗಳ ಲೇಖಕಿ ಡಾ.ಅಂಬುಜಾ ಮಳಖೇಡಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಿರಣ ಪಾಟೀಲ ನಿರೂಪಿಸಿದರು. ವಿಠ್ಠಲರಾವ ಕುಲಕರ್ಣಿ ವಂದಿಸಿದರು. ಇದೇ ಸಂದರ್ಭದಲ್ಲಿ ಲೇಖಕಿ ಡಾ.ಅಂಬುಜಾ ಅವರ ತಂದೆ-ತಾಯಿ ಅವರ 55 ನೇ ವಿಹಾಹ ವಾರ್ಷಿಕೋತ್ಸವ ಆಚರಿಸಲಾಯಿತು. ಮನೋವಿಜ್ಞಾನ ಲೇಖಕ ಡಾ.ವೆಂಕಟರೆಡ್ಡಿ ರುದ್ರವಾರ, ಚಂದ್ರಕಾಂತ ಕುಲಕರ್ಣಿ, ಡಾ.ಪ್ರೇಮ ಚಂದ ಚವಹಾಣ್, ನಾರಾಯಣರಾವ ಮಳಖೇಡಕರ್, ವಿದ್ಯಾವತಿ ಪಾಟೀಲ, ಪ್ರಶಾಂತ ಕುಂಬಾರ ಇತರರು ಉಪಸ್ಥಿತರಿದ್ದರು. ಲೇಖಕ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ, ರಮೇಶ ಜೋಶಿ, ಮಹಮ್ಮದ್ ರಫಿ ಗಾಯನ ಕಾರ್ಯಕ್ರಮ ನೀಡಿದರು.