ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ | ರಾಜ್ಯಾದ್ಯಂತ ದಾಸೋಹ ದಿನ ಆಚರಣೆ ಇಂದು ದಾಸೋಹ ದಿನ ಸರ್ಕಾರದಿಂದ ಆಚರಿಸಲು ಮನವಿ
ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ | ರಾಜ್ಯಾದ್ಯಂತ ದಾಸೋಹ ದಿನ ಆಚರಣೆ ಇಂದು ದಾಸೋಹ ದಿನ ಸರ್ಕಾರದಿಂದ ಆಚರಿಸಲು ಮನವಿ
ಕಲಬುರಗಿ:ಜ:20- ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಶಿವೈಕ್ಯರಾದ ದಿನ ಜನವರಿ ೨೧ರಂದು ಆಚರಿಸುವ ದಾಸೋಹ ದಿನವನ್ನು ಸರ್ಕಾರದಿಂದಲೇ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ-ಬೀದರ್‌ನ ಶ್ರೀ ಸಿದ್ಧಗಂಗಾ ಹಳೇ ವಿದ್ಯಾರ್ಥಿ ಹಾಗೂ ಹಿತೈಷಿಗಳ ಸಂಘ ಮನವಿ ಮಾಡಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ದೇವೆಂದ್ರಪ್ಪ ಅವಂಟಿ, ಮಕ್ಕಳಲ್ಲಿಯೇ ದೇವರನ್ನು ಕಂಡ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಶಿವೈಕ್ಯರಾಗಿ ಇಂದಿಗೆ ಐದು ವರ್ಷ ಪೂರೈಸಿ ೬ನೇ ವರ್ಷಕ್ಕೆ ಕಾಲಿರಿಸಲಾಗಿದೆ.
ವಿಶ್ವದಲ್ಲಿಯೇ ಶ್ರೇಷ್ಠವಾದ ಅನ್ನ, ಜ್ಞಾನ ಮತ್ತು ವಸತಿಯನ್ನು ಉಚಿತವಾಗಿ ನೀಡುವ ಮೂಲಕ ಲಕ್ಷಾಂತರ ಬಡ ಮಕ್ಕಳ ಬಾಳು ಬೆಳಗಿದ ಮಹಾನ್ ಸಂತರಾದ ಶಿವಕುಮಾರ ಶ್ರೀಗಳ ದಿವ್ಯ ಆಶೀರ್ವಾದದಿಂದ ಇಂದಿಗೂ ಶ್ರೀ ಮಠದಲ್ಲಿ ೧೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ.
ಇಂತಹ ಶ್ರೇಷ್ಠ ಸಂತ ಶಿವೈಕ್ಯರಾದ ಪುಣ್ಯ ದಿನ ಜನವರಿ ೨೧ರಂದು ಸರ್ಕಾರ ದಾಸೋಹ ದಿನ ಎಂದು ಘೋಷಣೆ ಮಾಡಿದೆ. ಆದರೆ ಕಳೆದ ವರ್ಷ ಸರ್ಕಾರ ಆಚರಣೆ ಮಾಡದ ಕಾರಣ ಲಕ್ಷಾಂತರ ಭಕ್ತರು ಮತ್ತು ಹಳೇ ವಿದ್ಯಾರ್ಥಿ ಹಾಗೂ ಹಿತೈಷಿಗಳಿಗೆ ನೋವುಂಟಾಗಿದೆ. ಹೀಗಾಗಿ ಸರ್ಕಾರ ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳ ಈ ದಿನವನ್ನು ಸರ್ಕಾರವೇ ಆಚರಿಸುವ ಲಕ್ಷಾಂತರ ಭಕ್ತರ ಮತ್ತು ಹಳೇ ವಿದ್ಯಾರ್ಥಿ ಹಾಗೂ ಹಿತೈಷಿಗಳ ಭಾವನೆಗೆ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ವೇಳೆ ಮನವಿ ಸ್ವೀಕರಿಸಿದ ಸಚಿವ ಈಶ್ವರ ಖಂಡ್ರೆ ಅವರು, ಈ ವಿಷಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಕುಮಾರ ಪಾಟೀಲ್ ತೇಗಂಪೂರ ಬೀದರ್, ಮೋಹನ ಕುಮಾರ, ಶಿವಕುಮಾರ ಮಂಡ್ಯ, ಪಂಪನಗೌಡ ಬಳ್ಳಾರಿ, ದೇವೇಂದ್ರ ಕರಂಜೆ ಬೀದರ್, ರಮೇಶ ಪಾಟೀಲ್ ಸೇರಿದಂತೆ ಅನೇಕ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.