ಭಾಲ್ಕಿ ತಾಲೂಕಿನ ಆಯ್ದ ಸರಕಾರಿ ಪ್ರೌಢಶಾಲೆಗಳಲ್ಲಿ ಟ್ಯಾಬ್-ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ.
ಭಾಲ್ಕಿ ತಾಲೂಕಿನ ಆಯ್ದ ಸರಕಾರಿ ಪ್ರೌಢಶಾಲೆಗಳಲ್ಲಿ ಟ್ಯಾಬ್-ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ.
ಭಾಲ್ಕಿ: ಕಲ್ಯಾಣ ಕರ್ನಾಟಕದ ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಕಾರಣದಿಂದ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆ ಮತ್ತು ವಯಕ್ತಿಕರಿಸಿದ ಕಲಿಕೆ ಶಿಕ್ಷಣದಲ್ಲಿ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಪ್ರಜ್ಞಾ ಫೌಂಡೇಷನ್ ಹಾಗೂ ಐ.ಐ.ಎಫ್.ಎಲ್. ಸಂಸ್ಥಾ ಫೈನಾನ್ಸಿಯಲ್ ಲಿಮಿಟೆಡ್ ವತಿಯಿಂದ ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಆಯ್ದ ಸರಕಾರಿ ಪ್ರೌಢಶಾಲೆಗಳಿಗೆ ಟ್ಯಾಬ್-ಲ್ಯಾಬ್ ವಿನೂತನ ತಂತ್ರಜ್ಞಾನ ಆಧಾರಿತ ಕಲಿಕೆ ಕಾರ್ಯಕ್ರಮ ಇತ್ತೀಚಗೆ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮವನ್ನು ದಿನಾಂಕ: 07-01-2025 ಸರಕಾರಿ ಪ್ರೌಢಶಾಲೆ ಲಖಣಗಾಂವ ಶಾಲೆಯ ಆವರಣದಲ್ಲಿ ಬೆಳೆಗ್ಗೆ 10:30ಕ್ಕೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಟ್ಯಾಬ್-ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಎಲ್. ಪ್ರಸನ್ನಕುಮಾರ ಮಕ್ಕಳ ವಯಕ್ತಿಕ ಕಲಿಕೆ ಬಹಳ ಪ್ರಮುಖವಾಗುತ್ತದೆ. ಇಂದು ಬಿಡುಗಡೆ ಮಾಡಿರುವ ಟ್ಯಾಬ್-ಲ್ಯಾಬ್ ವೈಶಿಷ್ಟ್ಯಪೂರ್ಣವಾಗಿದ್ದು ಆಫ್ ಲೈನ್ ಪಠ್ಯವಿದ್ದು ಮಕ್ಕಳಿಗೆ ಉಪಯೋಗವಾಗಲಿದೆ. ಟ್ಯಾಬ್ ನಲ್ಲಿ ಅನಿಮೇಟೆಡ್ ವಿಡಿಯೋಗಳು, ಮೈಂಡಮ್ಯಾಪ್‌ಗಳು, ಪಠ್ಯದ ಆಡಿಯೋ ವಿಡಿಯೋಗಳು ಇದ್ದು ಇವುಗಳನ್ನು ಸರಿಯಾಗಿ ಬಳಕೆ ಮಾಡುವುದರ ಮೂಲಕ ಮಕ್ಕಳು ಪುನರ್ ಬಲನ ಮಾಡಿ ಅರ್ಥಮಾಡಿಕೊಳ್ಳಲು ಹೆಚ್ಚು ಅವಕಾಶ ಕೊಡಲಾಗಿದೆ. ಈ ಟ್ಯಾಬ್-ಲ್ಯಾಬ್ ನ ಮೂಲಕ ಶಾಲೆಗಳು ಸದೂಪಯೋಗ ಪಡೆಯಬೇಕು, ತಂತ್ರಜ್ಞಾನದ ಮೂಲಕ ಮಕ್ಕಳು ಕಲಿಯುವಂತಾಗಬೇಕು. ಐ.ಐ.ಎಫ್.ಎಲ್. ಹಾಗೂ ಪ್ರಜ್ಞಾ ಫೌಂಡೇಷನ ಮೂಲಕ ಇದೊಂದು ವಿಭಿನ್ನ ವಿನೂತನವಾದ ಪ್ರಯತ್ನವಾಗಿದ್ದು, ಟ್ಯಾಬ್ ಮೂಲಕ ಮಕ್ಕಳಲ್ಲಿ ಕಲಿಕೆ ಹೆಚ್ಚಿಸುತ್ತಿರುವುದು ಅತ್ಯಂತ ಪ್ರಶಂಸನೀಯ ಕೆಲಸವಾಗಿದೆ ಎಂದರು.
ಐ.ಐ.ಎಫ್.ಎಲ್. ನ ಸಿ.ಎಸ್.ಆರ್. ಜನರಲ್ ಮ್ಯಾನೇಜರ್ ಶಂಭೂಲಿಂಗ ಕೆ. ಮಾತನಾಡುತ್ತಾ ನಾವೆಲ್ಲರೂ ಆರ್ಟಿಫಿಷಿಯಲ್ ಇಂಟಲಿಜೆನ್ಸ ಯುಗದಲ್ಲಿದ್ದೇವೆ, ಬೆರಳ ತುದಿಯಲ್ಲಿ ತಂತ್ರಜ್ಞಾನದ ಮೂಲಕ ಕಲಿಯುವ ಎಲ್ಲಾ ಅವಕಾಶಗಳಿವೆ, ಈ ಟ್ಯಾಬ್ ಗಳಲ್ಲಿ ಪಠ್ಯದ ಎಲ್ಲಾ ವಿಷಯಗಳನ್ನು ಕಲಿಯುವ ಹೊಸ ದಾರಿಗಳನ್ನು ತೋರಿಸಲಾಗಿದೆ. ತಾವೆಲ್ಲರೂ ಇದರ ಸದೂಪಯೋಗ ಪಡೆಯಿರಿ. ಐ.ಐ.ಎಫ್.ಎಲ್. ಸಂಸ್ಥಾ ಒಂದು ಕಿರು ಹಣಕಾಸು ಸಂಸ್ಥೆಯಾಗಿದ್ದು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದೆ. ಪ್ರಸ್ತುತ ಸಂಸ್ಥೆಯು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು 30 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯು 20000 ಕ್ಕೂ ಹೆಚ್ಚು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶವನ್ನು ಒದಗಿಸಿದೆ. ಮಹಿಳೆಯರಿಗೆ ಸಣ್ಣ ವ್ಯಾಪಾರ ಅಥವಾ ಇತರೆ ಕೆಲಸಗಳನ್ನು ಮಾಡಲು ಸಾಲ ನೀಡುವ ಮೂಲಕ ಅವರ ಆರ್ಥಿಕ ಸಬಲೀಕರಣ ಮಾಡುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ವಾವಲಂಬಿ ಜೀವನಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಫೌಂಡೇಷನ ಅಧ್ಯಕ್ಷ ಕಾಶೀನಾಥ ಪುಜಾರಿ ನಮ್ಮ ಸಂಸ್ಥೆಯ ಗುರಿ ಒಟ್ಟಾರೆ ಗ್ರಾಮದ ಅಭಿವೃದ್ಧಿಯಾಗಿದೆ. ಗಾಂಧೀಜಿಯ ಕಂಡ ಕನಸು ನೆನಸು ಮಾಡುವುದಾಗಿದೆ. ನಾವು ಒಂದು ಗ್ರಾಮದಲ್ಲಿರುವ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈಮರ್ಲ್ಯ, ಜೀವನೋಪಾಯ, ಬಡತನ ನಿರ್ಮೂಲನೆ, ಮಹಿಳಾ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ ಹೀಗೆ ಆ ಗ್ರಾಮದ ಒಟ್ಟಾರೆ ಅಭಿವೃದ್ಧಿ ಸರಕಾರದ ಸಹಕಾರದೊಂದಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ.
ನಮ್ಮ ಕಾರ್ಯಕ್ರಮಗಳಾದ ಕೌನ ಬನೇಗಾ ಜ್ಞಾನಪತಿ, ಕಂದನಿಂದ ಕಥೆ, ಮಕ್ಕಳ ಹೃದಯಾಂತರಾಳ, ಸಾಧಕ ಶಿಕ್ಷಕರು, ಮಕ್ಕಳು ಮೆಚ್ಚಿದ ಶಿಕ್ಷಕರು, ಹತ್ತರ ಭಯ ಹತ್ತಿರ ಬೇಡಾ, ಭಯ ಬೇಡಾ ಭರವಸೆಯಿರಲಿ, ಹೀಗೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಶಿಕ್ಷಣದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ೫ಕ್ಕೂ ಹೆಚ್ಚು ಜಿಲ್ಲೆಗಳು, ೪ ತಾಲೂಕುಗಳು, ೪೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಅಧಿಕಾರಿಗಳೊಂದಿಗೆ ಅವರ ಸಹಕಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ ಟ್ಯಾಬ್-ಲ್ಯಾಬ್ ಕಾರ್ಯಕ್ರಮವು ೧೦ ಶಾಲೆಗಳು, ೧೦೦೦ಕ್ಕೂ ಅಧಿಕ ಮಕ್ಕಳನ್ನು ತಲುಪಲಿದೆ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಐ.ಐ.ಎಫ್. ಎಲ್. ಸಂಸ್ಥೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
“ಟ್ಯಾಬ್-ಲ್ಯಾಬ್ ನ ವೈಶಿಷ್ಠ್ಯ: ಪ್ರತಿ ಟ್ಯಾಬ್-ಲ್ಯಾಬ್ ನಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಟ್ಯಾಬ್ ಇರುತ್ತವೆ. ಪ್ರತೀ ಟ್ಯಾಬ್ ನಲ್ಲಿ 8ನೇ, 9ನೇ ಮತ್ತು 10ನೇ ತರಗತಿಯ ಪಠ್ಯ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಪಾಠಗಳು, ಅನಿಮೇಟೆಡ್ ವಿಡಿಯೋಗಳು, ಮೈಂಡ್ ಮ್ಯಾಪ್ ಗಳು, ಇಂಟರ್ ಆಕ್ಟೀವ್ ವರ್ಕಶೀಟ್ ಗಳು, ಅಭ್ಯಾಸ ಪ್ರಶ್ನೆಗಳು, ಹೆಚ್ಚುವರಿ ಪ್ರಶ್ನೋತ್ತರ, ರಸಪ್ರಶ್ನೆ ಹೀಗೆ ವಿವಿಧ ರೀತಿಯಿಂದ ವಿಭಿನ್ನವಾಗಿ ವಯಕ್ತಿಕವಾಗಿ ಮಕ್ಕಳಿಗೆ ಕಲಿಯಲು ಅವಕಾಶ ಕೊಡುತ್ತವೆ. ಪ್ರಸ್ತುತ ವಿದ್ಯಾರ್ಥಿಗಳು ಪರೀಕ್ಷಾ ಸಮಯಕ್ಕೆ ಹತ್ತಿರವಿರುವುದರಿಂದ ಪುನರ್ ಬಲನ, ಪುನರ್ ಮನನ ಅಭ್ಯಾಸಕ್ಕೆ ಈ ಟ್ಯಾಬ್ ಗಳು ಅಲ್ಲಿರುವ ಪಠ್ಯ ಅತ್ಯಂತ ಅವಶ್ಯಕವಾಗಲಿವೆ ಹಾಗೂ ವಿದ್ಯಾರ್ಥಿಗಳ ಅಭ್ಯಾಸಕ್ಕೆ ನೆರವಾಗಲಿವೆ.
“ನಮ್ಮ ಶಾಲೆಗೆ ಐ.ಐ.ಎಫ್.ಎಲ್. ಹಾಗೂ ಪ್ರಜ್ಞಾ ಫೌಂಡೇಷನ ಮೂಲಕ ಟ್ಯಾಬ್-ಲ್ಯಾಬ್ ಸ್ಥಾಪಿಸಲಾಗಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಈ ಟ್ಯಾಬ್ ಗಳು ಬಳಕೆ ಮಾಡುತ್ತೇವೆ. ಈ ಟ್ಯಾಬ್ ಗಳಲ್ಲಿರುವ ವಿಡಿಯೋಗಳು, ಮೈಂಡ ಮ್ಯಾಪ್ ಗಳು , ಅನಿಮೇಷನಗಳು ಮಕ್ಕಳಲ್ಲಿ ಕಲಿಯುವ ತಿಳಿದುಕೊಳ್ಳುವ ಆಸಕ್ತಿಯನ್ನು ಹೆಚ್ಚು ಮಾಡಲಿವೆ ಎನ್ನುವ ಭರವಸೆಯಿದೆ. ಈ ಟ್ಯಾಬ್ -ಲ್ಯಾಬ್ ನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತೇವೆ. ಐ.ಐ.ಎಫ್.ಎಲ್. ಗೆ ನಾವು ಧನ್ಯವಾದ ಅರ್ಪಿಸುತ್ತೇವೆ.
-ಪ್ರವೀಣ ಕಾಂಬಳೆ -ಪ್ರಧಾನ ಗುರುಗಳು ಸರಕಾರಿ ಪ್ರೌಢಶಾಲೆ ಲಖಣಗಾಂವ
“ನಮ್ಮ ಶಾಲೆಯಲ್ಲಿ ಟ್ಯಾಬ್-ಲ್ಯಾಬ್ ರಚನೆ ಮಾಡಿದು ಅವುಗಳಲ್ಲಿರುವ ವಿಡಿಯೋಗಳು ಚೆನ್ನಾಗಿವೆ. ಅನಿಮೇಷನ ಮೂಲಕ ಚಿತ್ರ ನೋಡಿ, ವಿಡಿಯೋ ನೋಡಿ ನಾವು ಪಾಠಗಳನ್ನು ಹೆಚ್ಚು ಕಲಿಯುತ್ತೇವೆ. ವಯಕ್ತಿಕವಾಗಿ ವಿಡಿಯೋಗಳನ್ನು ನೋಡುತ್ತಾ ಕಲಿಯುವುದರಿಂದ ಹೆಚ್ಚು ನೆನಪಿಟ್ಟುಕೊಳ್ಳಲು ಸಹಾಯಕವಾಗಲಿದೆ. ಐ.ಐ.ಎಫ್.ಎಲ್. ಹಾಗೂ ಪ್ರಜ್ಞಾ ಫೌಂಡೇಷನ ಗೆ ನಾವು ಧನ್ಯವಾದ ಹೇಳುತ್ತೇವೆ.
ಕು. ಶ್ರೀದೇವಿ ನಾಗನಾಥ – ವಿದ್ಯಾರ್ಥಿನಿ
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ್ ಹೋಳ್ಕೊರ್, ಶಿಕ್ಷಣ ಸಂಯೋಜಕ ಸಹದೇವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತು ಕಾಟಕರ್, ಗ್ರಾಮೀಣ ಪೋಲಿಸ್ ಠಾಣೆ ಭಾಲ್ಕಿ ಪಿ.ಎಸ್.ಐ ಅಶೋಕ ಪಾಟೀಲ, ಸಿ.ಎಸ್.ಆರ್. ವಿಭಾಗದಿಂದ ರಾಮಣಗೌಡ, ಮಂಜುನಾಥ, ಶಾಲೆಯ ಮುಖ್ಯ ಗುರುಗಳಾದ ಪ್ರವೀಣ ಕಾಂಬಳೆ ಮತ್ತು ಶಾಲಾ ಸಿಬ್ಬಂದಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು, ಶಾಲಾ ಅಭಿವೃದ್ಧಿ ಅಧ್ಯಕ್ಷರು ಹಾಗೂ ಸದಸ್ಯರು ವಿದ್ಯಾರ್ಥಿಗಳು ಹಾಜರಿದ್ದರು.