."ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ" ಪ್ರಶಸ್ತಿಗೆ ಯಾಳವಾರ, ಕುಲಕರ್ಣಿ ಆಯ್ಕೆ
."ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ" ಪ್ರಶಸ್ತಿಗೆ ಯಾಳವಾರ, ಕುಲಕರ್ಣಿ ಆಯ್ಕೆ
ಚಿಂಚೋಳಿ - ಇಲ್ಲಿನ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಕೊಡಮಾಡುವ, ಪ್ರತಿಷ್ಠಿತ "ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ" ಪ್ರಶಸ್ತಿಗೆ ಈ ವರ್ಷ ಕಲ್ಬುರ್ಗಿಯ ನಿವೃತ್ತ ಪ್ರಾಚಾರ್ಯ, ಸಾಹಿತಿ, ಡಾ. ಸ್ವಾಮಿರಾವ ಕುಲ್ಕರ್ಣಿ ಹಾಗೂ ಹುಮನಾಬಾದನ ನಿವೃತ್ತ ಪ್ರಾಚಾರ್ಯ, ಸಾಹಿತಿ, ಡಾ. ಸೋಮನಾಥ ಯಾಳವಾರ ಆಯ್ಕೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷರಾದ ಷ ಬ್ರ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ತಿಳಿಸಿದ್ದಾರೆ. ಪ್ರಶಸ್ತಿಯು ತಲಾ 5 ಸಾವಿರ ₹ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬರುವ ಜನವರಿ 12 ರವಿವಾರದಂದು ಜರುಗುವ ಸಂಸ್ಥೆಯ 33ನೇ ವಾರ್ಷಿಕೋತ್ಸವ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವವಾದ ಸಾಧನೆ ಮಾಡಿದ ಶಿಕ್ಷಕರನ್ನು ಪ್ರೋತ್ಸಾಹಿಸಲು, 2018 ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದುವರೆಗೆ ಎನ್ ಎಸ್ ದೇವರಕಲ್, ಮಲ್ಲಿನಾಥ ಹಿರೇಮಠ, ಪಿ ಜಿ ಹಿರೇಮಠ, ಬಸವರಾಜ ಐನೋಳಿ, ಹೆಚ್. ಕಾಶಿನಾಥ ರೆಡ್ಡಿ, ಆನಂದರಾವ ಝಳಕೆ, ಅಂಬಾರಾಯ ಉಗಾಜಿ, ಡಾ. ಜ್ಯೋತಿಪ್ರಕಾಶ ದೇಶಮುಖ ಮುಂತಾದವರು ಪ್ರಶಸ್ತಿಗೆ ಭಾಜನರಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.