ರಾಜ್ಯದಲ್ಲಿ ಮುಂದುವರೆದ ಲೋಕಾಯುಕ್ತ ದಾಳಿ : 11 ಭೃಷ್ಟ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 44 ಸ್ಥಳಗಳಲ್ಲಿ ತೀವ್ರ ಪರಿಶೀಲನೆ

ರಾಜ್ಯದಲ್ಲಿ ಮುಂದುವರೆದ ಲೋಕಾಯುಕ್ತ ದಾಳಿ  : 11 ಭೃಷ್ಟ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 44 ಸ್ಥಳಗಳಲ್ಲಿ ತೀವ್ರ ಪರಿಶೀಲನೆ

ಬೆಂಗಳೂರು : ರಾಜ್ಯದಲ್ಲಿ ಲೋಕಾಯುಕ್ತ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆದಿದ್ದು ,ಮಂಗಳವಾರ ರಾಜ್ಯದಾದ್ಯಂತ 44 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ .

11 ಸರ್ಕಾರಿ ಅಧಿಕಾರಿಗಳು ತಮ್ಮ ಆದಾಯಕ್ಕೆ ಮೀರಿ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ಸಂಘಟಿಸಲಾಗಿದೆ.

ಆದಾಯದ ಮೂಲಗಳಿಗೆ ಮೀರಿದ ಆಸ್ತಿ ಹೊಂದಿರುವ ಶಂಕಿತರನ್ನು ಗುರಿಯಾಗಿಸಿಕೊಂಡು ಪತ್ತೆ ಕಾರ್ಯ ಕೈಗೊಳ್ಳಲಾಗಿದೆ.

ಆರೋಪಿತರಾದ ವಿಟ್ಲ ಶಿವಪ್ಪ ಢವಳೇಶ್ವರ್, ಗ್ರಾಮ ಲೆಕ್ಕಾಧಿಕಾರಿ, ಬೋರೆ ಗಾಂವ್, ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕು ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶ ಹಾವೇರಿ, ಕಾಶಿನಾಥ ಭಜಂತ್ರಿ, ಸಹಾಯಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಹಾವೇರಿ. ದಾವಣಗೆರೆಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕಾಮರಾಜ್, ಪಿ.ಎಚ್. ರವೀಂದ್ರಕುಮಾರ್, ಸಹಾಯಕ ನಿರ್ದೇಶಕ, ಜಿಲ್ಲಾ ತರಬೇತಿ ಸಂಸ್ಥೆ, ಬೀದರ್, ನಾಗೇಶ್ ಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೈಸೂರು ಮಹಾನಗರ ಪಾಲಿಕೆ, ಮೈಸೂರು, ಪ್ರಕಾಶ್ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್, ಕರ್ನಾಟಕ ರಾಜ್ಯ ರಸ್ತೆ ನಿಗಮ, ರಾಮನಗರ, ವೆಂಕಟೇಶ ಎಸ್.ಮಜುಂದಾರ್, ಸಹಾಯಕ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ, ಬೆಳಗಾವಿ, ಮತ್ತು ಗೋವಿಂದಪ್ಪ ಸಹಾಯಕ ಕಾರ್ಯಪಾಲಕ ಅಭಿಯಂತರ, ಧಾರವಾಡ ಇವರುಗಳಿಗೆ ಸೇರಿದ ಆಸ್ತಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ.

ಲೋಕಾಯುಕ್ತ ಮೂಲಗಳ ಪ್ರಕಾರ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವಿಭಾಗದ ತಂಡಗಳು ಆರೋಪಿಗಳ ಕಚೇರಿ, ನಿವಾಸ ಮತ್ತು ಅವರ ಹತ್ತಿರದ ಸಂಬಂಧಿಗಳಿಗೆ ಸೇರಿದ ಆಸ್ತಿಗಳು ಸೇರಿದಂತೆ ಅವರ ಆವರಣಗಳಲ್ಲಿ ಶೋಧ ಕಾರ್ಯ ನಡೆಸುತ್ತಿವೆ. 

ಈ ಹುಡುಕಾಟದ ಸಮಯದಲ್ಲಿ, ನಗದು, ಆಭರಣಗಳು ಮತ್ತು ಸ್ಥಿರ ಹಾಗೂ ಚರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಂದು ಸಂಜೆ ವೇಳೆಗೆ ಶೋಧ ಕಾರ್ಯ ಮುಕ್ತಾಯವಾಗುವ ನಿರೀಕ್ಷೆ ಇದ್ದು, ಆ ಬಳಿಕ ಆರೋಪಿ ಅಧಿಕಾರಿಗಳು ಹೊಂದಿರುವ ಅಕ್ರಮ ಆಸ್ತಿಗಳ ಮೌಲ್ಯವನ್ನು ಬಹಿರಂಗಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. 

ಲೋಕಾಯುಕ್ತ ಪೊಲೀಸರು ಕೈಗೊಂಡ ಭೃಷ್ಟರ ಬೇಟೆಗೆ ರಾಜ್ಯದಾದ್ಯಂತ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.