ಭಾರತೀಯ ಸಂಸ್ಕೃತಿ ಉತ್ಸವದ ಯಶಸ್ವಿಗೆ ಹೋಟೆಲ್ ಉದ್ಯಮಗಳಿಗೆ ಬಸವರಾಜ್ ಪಾಟೀಲ್ ಸೇಡಂ ಕರೆ

ಭಾರತೀಯ ಸಂಸ್ಕೃತಿ ಉತ್ಸವದ ಯಶಸ್ವಿಗೆ ಹೋಟೆಲ್ ಉದ್ಯಮಗಳಿಗೆ  ಬಸವರಾಜ್ ಪಾಟೀಲ್ ಸೇಡಂ ಕರೆ

ಹೋಟೆಲ್ ಮಾಲಕರ ಸಂಘದ ಸಭೆಯಲ್ಲಿ ಬಸವರಾಜ್ ಪಾಟೀಲ್ ಸೇಡಂ ಹೇಳಿಕೆ

ಭಾರತೀಯ ಸಂಸ್ಕೃತಿ ಉತ್ಸವದ ಯಶಸ್ವಿಗೆ ಹೋಟೆಲ್ ಉದ್ಯಮಗಳಿಗೆ ಕರೆ

ಕಲಬುರಗಿ : ಭಾರತೀಯ ಸಂಸ್ಕೃತಿ ಉತ್ಸವ-7 ನೆಯ ಕಾರ್ಯಕ್ರಮವು ಮುಂದಿನ ವರ್ಷ ಜನವರಿ 29 ರಿಂದ 10 ದಿನಗಳವರೆಗೆ ಸೇಡಂನಲ್ಲಿ ನಡೆಯಲಿದ್ದು ಹೋಟೆಲ್ ಉದ್ಯಮಿಗಳು ಇದರ ಯಶಸ್ವಿಗೆ ಕೈಜೋಡಿಸಲು ಮುಖ್ಯ ಸಂಯೋಜಕರಾದ ಮಾಜಿ ಲೋಕಸಭಾ ಸದಸ್ಯರಾದ ಡಾ. ಬಸವರಾಜ್ ಪಾಟೀಲ್ ಸೇಡಂ ಕರೆ ನೀಡಿದರು. 

   ಕಲಬುರಗಿ ಯಾತ್ರಿಕ ನಿವಾಸ್ ಸಭಾಂಗಣದಲ್ಲಿ ನವಂಬರ್ 4ರಂದು ಸೋಮವಾರ ನಡೆದ ಕಲಬುರಗಿ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಮಾಲಕರ ಸಭೆಯನ್ನುದ್ದೇಶಿಸಿ ಮಾತನಾಡಿ ಸುಮಾರು ಆರು ಲಕ್ಷ ಜನ ದೇಶ - ವಿದೇಶಗಳಿಂದ ಈ ಉತ್ಸವಕ್ಕೆ ಆಗಮಿಸುತ್ತಿದ್ದಾರೆ. ರಾಜಕೀಯ ಗಣ್ಯರು, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಅನಿವಾಸಿ ಭಾರತೀಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಲಬುರಗಿಯಲ್ಲಿ ವಾಸ್ತವ್ಯ ಮಾಡಿ ಸೇಡಂನ ಬೀರನಹಳ್ಳಿ ಕ್ರಾಸ್ ನಲ್ಲಿ 300 ಎಕರೆ ಪ್ರದೇಶದಲ್ಲಿ ಆಯೋಜಿಸಲಾದ ಕುಂಭಮೇಳ ಮಾದರಿಯ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಲಬುರಗಿಯ ಆತಿಥ್ಯ ಮತ್ತು ಸ್ವಾಗತ ಮಾದರಿಯಾಗಿ ಜಗದಗಲದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಲು ಹೋಟೆಲ್ ಉದ್ಯಮಿಗಳು ವಸತಿ ಮತ್ತು ಊಟೋಪಚಾರ ವ್ಯವಸ್ಥೆಯನ್ನು ನೀಡಿ ನೆರವಾಗಬೇಕು ಎಂದರು. ಭಾರತದ ಅಸ್ಮಿತೆಯನ್ನು ಬಲಪಡಿಸುವ ಮತ್ತು ಹೊಸ ಬೆಳವಣಿಗೆಯನ್ನು ಪ್ರೇರೇಪಿಸುವ ಈ ಸಂಸ್ಕೃತಿ ಉತ್ಸವ ವಿಕಾಸದೆಡೆಗೆ ದೊಡ್ಡ ಮೈಲಿಗಲ್ಲಾಗಲಿದೆ. ನಗರದ ಎಲ್ಲ ವಸತಿಗೃಹ, ಕಲ್ಯಾಣ ಮಂಟಪ, ಅತಿಥಿ ಗೃಹಗಳನ್ನು ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ರಿಯಾಯಿತಿ ದರದಲ್ಲಿ ನೀಡಿ ಆದರಾತಿ ಥ್ಯದೊಂದಿಗೆ ಭಾರತೀಯ ಸಂಸ್ಕೃತಿ ಉತ್ಸವವು ಸರ್ವರ ಉತ್ಸವವನ್ನಾಗಿ ಸಬೇಕು ಎಂದು ಬಸವರಾಜ್ ಪಾಟೀಲ್ ಹೇಳಿದರು. 

     ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನರಸಿಂಹ ಮೆಂಡನ್ ಮಾತನಾಡಿ ಭಾರತೀಯ ಸಂಸ್ಕೃತಿ ಉತ್ಸವವು ಕಲ್ಬುರ್ಗಿಯ ಜನರ ಹೆಮ್ಮೆ ಮತ್ತು ಗೌರವದ ಪ್ರತೀಕವಾಗಿದ್ದು ಅದರ ಯಶಸ್ಸಿಗೆ ಹೋಟೆಲ್ ಉದ್ಯಮಿಗಳ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು. ವಸತಿ ಮಾಲಕರ ಸಂಘದ ಉಪಾಧ್ಯಕ್ಷರಾದ ಗಿರಿಧರ ಭಟ್ ಮಾತನಾಡಿ ನಗರದ ಎಲ್ಲಾ ವಸತಿಗೃಹಗಳನ್ನು ಎ, ಬಿ, ಸಿ, ವರ್ಗೀಕರಣ ಮಾಡಿ ಸಸ್ಯಹಾರಿ ಮಾಂಸಾಹಾರಿ ಹೋಟೆಲ್ ಗಳ ಪಟ್ಟಿಯನ್ನು ಸಿದ್ಧಪಡಿಸಿ ಆಯೋಜನಾ ಸಮಿತಿಗೆ ನೀಡಲಾಗುವುದು ಮತ್ತು ಅತಿಥಿಗಳನ್ನು ಗೌರವಯುತವಾಗಿ ಆತಿಥ್ಯ ನೀಡಿ ಸತ್ಕರಿಸಲಾಗುವುದು ಎಂದರು. ವಸತಿ ಗೃಹಗಳನ್ನು ಸಂಪೂರ್ಣವಾಗಿ ಹತ್ತು ದಿನಗಳ ಕಾಲ ಆಯೋಜಕರಿಗೆ ನೀಡುವುದರ ಮೂಲಕ ಸಂಸ್ಕೃತಿ ಉತ್ಸವದ ಯಶಸ್ವಿಗೆ ಪೂರ್ಣವಾಗಿ ಕೈ ಜೋಡಿಸುವುದಾಗಿ ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ್ ತಿಳಿಸಿದರು. ವಸತಿ ಗೃಹಗಳಲ್ಲಿ ರಿಯಾಯಿತಿ ದರದಲ್ಲಿ ವ್ಯವಸ್ಥೆ ನೀಡಿ ಉತ್ಸವದ ಯಶಸ್ಸಿಗೆ ನೆರವಾಗುವುದಾಗಿ ಉದ್ಯಮಿ ಅಶೋಕ್ ಗುತ್ತೇದಾರ್ ಬಡದಾಳ ಹೇಳಿದರು. 

     ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ಮಾಧ್ಯಮ ವಿಭಾಗದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಧ್ಯಮ ವಿಭಾಗದ ಪ್ರಭಾಕರ ಜೋಶಿ ಸೇಡಂ, ವಸತಿ ವಿಭಾಗದ ತಿಪ್ಪೇಸ್ವಾಮಿ, ಸದಾನಂದ ಪಟ್ಟಣಶೆಟ್ಟಿ ಉಪಾಧ್ಯಕ್ಷರಾದ ಮೊಯಿನುದ್ದೀನ್, ಪ್ರಧಾನ ಕಾರ್ಯದರ್ಶಿ ಮಹಾಕೀರ್ತಿ ಶೆಟ್ಟಿ, ಖಜಾಂಚಿ ಸುನಿಲ್ ಶೆಟ್ಟಿ, ನರೇಂದ್ರ ಮೋದಿ ವಿಚಾರ ಮಂಚ್ ನ ರಾಜ್ಯಾಧ್ಯಕ್ಷರು ಹಾಗೂ ಉದ್ಯಮಿಗಳಾದ ಶಿವರಾಜ್ ಕೋಟ್ಯಾನ್, ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಇನ್ನಾ, ಹೋಟೆಲ್ ಉದ್ಯಮಿಗಳಾದ ರಾಮಚಂದ್ರ ನಾಯಕ್ , ಉದಯ ಶೆಟ್ಟಿ, ಸಂತೋಷ್ ಪೂಜಾರಿ, ಸಂಜೀವ ಸಿರನೂರಕರ್, ಸಲಹಾ ಸಮಿತಿ ಸದಸ್ಯರಾದ ಮಾಲಾ ಕಣ್ಣಿ ಮತ್ತಿತರರು ಉಪಸ್ಥಿತರಿದ್ದರು.