“ಕನ್ನಡ ಭಾಷೆಗೆ ಒಳಗೊಳ್ಳುವ, ಒಳಗೊಳಿಸುವ ಸಂಸ್ಕೃತಿ ಅಗಾಧವಾಗಿದೆ” ಡಾ. ಪುರುಷೋತ್ತಮ ಬಿಳಿಮಲೆ ಅಭಿಮತ
“ಕನ್ನಡ ಭಾಷೆಗೆ ಒಳಗೊಳ್ಳುವ, ಒಳಗೊಳಿಸುವ ಸಂಸ್ಕೃತಿ ಅಗಾಧವಾಗಿದೆ” ಡಾ. ಪುರುಷೋತ್ತಮ ಬಿಳಿಮಲೆ ಅಭಿಮತ
ದಿನಾಂಕ ೦೪-೧೧-೨೦೨೪ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಜೈನ್ ( ಡೀಮ್ಡ್ -ಟು-ಬಿ ಯುನಿವರ್ಸಿಟಿ)ಯ ಸ್ಕೂಲ್ ಆಫ್ ಕಾಮರ್ಸ್, ಸಿ ಎಸ್ & ಐ ಟಿ,ಎಸ್ ಎಚ್ & ಎಸ್ ಎಸ್ ನ ಕನ್ನಡ ಭಾಷಾ ವಿಭಾಗವು ಹಾಗೂ ಆದಿಕವಿ ಪಂಪ ಸಂಶೋಧನಾ ವೇದಿಕೆ
ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸಂಸ್ಕೃತಿ ಹಿರಿಮೆ, ಗರಿಮೆ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಕನ್ನಡ ಅಭಿವೃದ್ದಿ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಮಾತನಾಡುತ್ತ ಕರ್ನಾಟಕ ಭಾಷೆಗೆ ಇರುವ ಪ್ರಾಚೀನತೆ ಕನ್ನಡ ಸಂಸ್ಕೃತಿಗೂ ಇದೆ.ಕೆಲವರಿಗೆ ಬೌದ್ಧ ಧರ್ಮ ಭಾರತದ ಆಚೆ ತನ್ನ ಕವಲುಗಳನ್ನು ಚಾಚಿ ಹುಟ್ಟಿದ ದೇಶದಿಂದ ಇಲ್ಲವಾದಂತೆನ್ನಿಸಿರಬಹುದ ಆದರೆ ನಮ್ಮ ಕನ್ನಡದ ಜನಪದರ ಹಾಡು ಕುಣಿತಗಳ, ಅವರು ರೂಪಿಸಿ ಕೊಟ್ಟ ರಚನೆಗಳಲ್ಲಿ ಅದು ಸದಾ ಜೀವಂತಿಕೆಯಿಂದ ಕೂಡಿದೆ.ಕನ್ನಡಿಗರ ಅಂತಕರಣದ ಸಂವೇದನೆಯಲ್ಲಿ ಅದನ್ನು ಕಾಣಬಹುದು.ಬೆಳಕು ಜ್ಞಾನದ ಸಂಕೇತ ಅದು ಚೈತನ್ಯದ ಸಂಕೇತವೂ ಹೌದು. ಬೌದ್ಧರ ಹಿನ್ನೆಲೆಯಲ್ಲಿ ಜ್ಞಾನವೇ ಬೆಳಕು. ಆ ಬೆಳಕನ್ನು ಜನಪದರು ತಮ್ಮ ಹಾಡು ಕುಣಿತ ಮೊದಲಾದವುಗಳ ಪ್ರದರ್ಶನದ ಆರಂಭದಲ್ಲಿ ಸ್ತುತಿಸುತ್ತಾರೆ.ಗಣೇಶನ ಸ್ತುತಿ ಬಂದದ್ದು ಏಳನೇ ಶತಮಾನದ ನಂತರದಲ್ಲಿ.ಆದರೆ ಬೆಳಕನ್ನು ಸ್ತುತಿಸುವುದರ ಮೂಲಕ ಕುಣಿತ ಹಾಡಿನ ಪ್ರದರ್ಶನ ಪ್ರಾರಂಭಿಸುವ ಸಂಸ್ಕೃತಿ ಜನಪದರಲ್ಲಿ ಇನ್ನು ಇದೆ. ಬೌದ್ಧ ಧರ್ಮದ ಉಚ್ಛ್ರಾಯ ಸ್ಥಿತಿಗೆ ಕನ್ನಡಿಗರ ನೆಲೆ ಪ್ರಮುಖವಾದದ್ದು. ಕಾವೇರಿಯಿಂದ ಗೋದಾವರಿಯ ವರೆಗಿನ ನಡುವಿನ ನಾಡು ಕರ್ನಾಟಕ.ಇದು ಕವಿರಾಜ ಮಾರ್ಗಕಾರನ ಉಲ್ಲೇಖ.ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು ಕನ್ನಡ ಸಂಸ್ಕೃತಿಯನ್ನು ವಿಭಿನ್ನವಾಗಿ ಕಟ್ಟಲು ನೆರವಾದವು. ವ್ಯಾಸರು ಬರೆದ ಮಹಾಭಾರತವನ್ನು ಈಜಿ ತನ್ನದೇ ಆದ ಮಾರ್ಗದಲ್ಲಿ, ತನ್ನದೇ ಆದ ಸಂವೇದನೆಯ ಹಿನ್ನೆಲೆಯಲ್ಲಿ ಮತ್ತೊಂದು ಮಹಾಭಾರತದ ಕಥೆಯನ್ನು ಕಟ್ಟಿ ಕೊಟ್ಟವನು ಕನ್ನಡಿಗ ಪಂಪ.ಇದು ಈಡಿ ಭಾರತ ದೇಶದ ಭಾಷೆಗಳಲ್ಲಿಯೇ ಮೊದಲಿಗೆ ರಚನೆಯಾದ ಕೃತಿ.
ವ್ಯಾಸರು ಕಡೆಗಾಣಿಸಿದ ಎಷ್ಟೋ ವ್ಯಕ್ತಿಗಳನ್ನು ಪಂಪ ತನ್ನ ಜ್ಞಾನದ, ಮನುಷ್ಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ತನ್ನ ಅಂತಃಕರಣದೋಳಗಿಟ್ಟು ಮರು ಸೃಷ್ಟಿಸಿದ್ದಾನೆ. ಇದು ಸರ್ವಕಾಲಕ್ಕೂ ಮನ್ನಣೆ ಗಳಿಸಿತು.ಇದು ಕನ್ನಡಿಗರ ಸಾಹಿತ್ಯಕ ಸಂಸ್ಕೃತಿಯ ಹಿರಿಮೆ.ದೂರದ ಬಿಹಾರದಿಂದ ಬಂದು ಕನ್ನಡ ನೆಲದಲ್ಲಿ ನೆಲೆಸಿದ ಜೈನ ಧರ್ಮ ಕನ್ನಡಿಗರನ್ನು ಅವರಿಸಿ ಕೊಂಡಷ್ಟು ಇನ್ಯಾವುದೇ ಭಾಷಿಕರಿಗೆ ಆವರಿಸಿ ಕೊಂಡಿಲ್ಲ ಕನ್ನಡ ಭಾಷೆಗೆ ಒಳಗೊಳ್ಳುವ, ಒಳಗೊಳಿಸುವ ಸಂಸ್ಕೃತಿ ಅಗಾಧವಾಗಿದೆ. ತನ್ನ ನೆಲದ ಅಸರೆಗೆ ಬಂದವರನ್ನು ಬೆಳೆಸಿದ ಬೆಳೆಸುತ್ತಿರುವ ಶ್ರೀಮಂತಿಕೆಯ ಘಮಲು ತನ್ನ ಕಪ್ಪು ಮಣ್ಣಿನಲ್ಲಿ ತುಂಬಿಕೊಂಡಿದೆ. ಕನ್ನಡ ಸಾಹಿತ್ಯಕ್ಕೆಜೈನ್ ಧರ್ಮೀಯರ ಕೊಡುಗೆ ಅಪಾರವಾಗಿದೆ.ಪಂಪನ ರಚನೆಯ ನಂತರದಲ್ಲಿ ಹಲವು ವರುಷಗಳು ಗತಿಸಿದ ಮೇಲೆ ಬೇರೆ ಬೇರೆ ಭಾಷೆಗಳಲ್ಲಿ ಮಹಾಭಾರತ ಕೃತಿಗಳು ರಚನೆಗೊಂಡವು. ಇದು ಕನ್ನಡಿಗರ ಹೆಗ್ಗಳಿಕೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಮೇಘನಾ ಮತ್ತು ಆರ್ಯನ್ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ತೇಜಸ್ ವಶಿಷ್ಠ ಅವರು ಮಿಮಿಕ್ರಿ ಮೂಲಕ ಕಾರ್ಯಕ್ರದಲ್ಲಿ ಪಾಲ್ಗೊಂಡವರನ್ನು ನಗೆ ಗಡಲಲ್ಲಿ ತೇಲಿಸಿದರು. ದಿಶಾ ಮತ್ತು ವೈಷ್ಣವಿ ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಗೀತೆಗೆ ನೃತ್ಯ ಮಾಡಿದರು.ಕನ್ನಡ ಭಾಷಾ ವಿಭಾಗವು ಆಯೋಜಿಸುವ ಸ್ಫೋಕನ್ ಕನ್ನಡ ತರಗತಿಯಲ್ಲಿ ಕನ್ನಡ ಕಲಿತ ಪಿಎಚ್ಡಿ ವಿದ್ಯಾರ್ಥಿ ಸಿರಿಯಾ ದೇಶದ ಇಮಾಧ್ ಅವರು ಕನ್ನಡದಲ್ಲಿ ತಮ್ಮ ಅನುಭವಗಳನ್ನು ವೇದಿಕೆ ಸಮ್ಮುಖದಲ್ಲಿ ಹಂಚಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಷಾ ವಿಭಾಗದ ಮುಖ್ಯಸ್ಥರಾದ ಡಾ.ರಜನಿ ಜಯರಾಮ ವಹಿಸಿಕೊಂಡು ಕನ್ನಡ ಭಾಷೆ ,ಸಾಹಿತ್ಯ,ಸಂಸ್ಕೃತಿಯ ಸೌಂದರ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಕನ್ನಡ ವಿಭಾಗದ ಕಾರ್ಯಶ್ಲಾಘನೀಯವಾದುದು,ಜಾಗತೀಕರಣದ ಇಂದಿನ ಮಕ್ಕಳು ಕನ್ನಡ ಸಂಸ್ಕೃತಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ ಎಂದರು.ಕನ್ನಡ ಭಾಷಾ ವಿಭಾಗದ ಸಂಯೋಜಕರಾದ ಶ್ರೀಮತಿ ರಾಜೇಶ್ವರಿ ವೈ ಎಂ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಾಧ್ಯಾಪಕರಾದ ರಾಜಕುಮಾರ ಬಡಿಗೇರ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ಜೈನ್ (ಡೀಮ್ಡ್ -ಟು -ಬಿ ಯೂನಿವರ್ಸಿಟಿ)ಯ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ.ಶ್ರೀಕಂಠ ಸ್ವಾಮಿ ಉಪಸ್ಥಿತರಿದ್ದರು. ಜೈನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ನಳಿನೀ ಸತೀಶ್ಚಂದ್ರ ಡಾ.ಗೀತಾ ಮಧುಸೂಧನ್, ಡಾ.ಯಶಸ್ವಿನಿ, ಡಾ.ಮೀರಾಮಣಿ, ಡಾ.ಮೇಖಲಾ, ಶ್ರೀ ನಾಗೇಂದ್ರ, ಡಾ.ಭವರ ಸಿಂಗ್, ಡಾ.ದೀಪಾ, ಡಾ.ಕೆಯೂರು ರಾಮಚಂದ್ರ ಡಾ.ದೀಪಾ ಮೊದಲಾದವರು ಪಾಲ್ಗೊಂಡಿದ್ದರು.