ಶೈಕ್ಷಣಿಕ ಸುಧಾರಣೆಗಾಗಿ ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಹತ್ವದ ಸಭೆ
ಶೈಕ್ಷಣಿಕ ಸುಧಾರಣೆಗಾಗಿ ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಹತ್ವದ ಸಭೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ, ಹಾಗೂ ಶಿಕ್ಷಣ ಇಲಾಖೆಯ ಸಮಸ್ಯೆಗಳ ಕುರಿತು ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ವತಿಯಿಂದ 7 ಜಿಲ್ಲೆಗಳ ಪ್ರೌಢ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಯಿತು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯ ನೇತೃತ್ವವನ್ನು ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ್ ಜಿ ನಮೋಶಿಯವರು ವಹಿಸಿದ್ದರು.
ಈ ಸಭೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಅನುದಾನಿತ ಶಿಕ್ಷಕರ ಸಮಸ್ಯೆಗಳ ಬಗ್ಗೆಯೂ ವಿಸ್ತೃತವಾಗಿ ಚರ್ಚೆ ಮಾಡಿ ಈ ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಷಣ ತಜ್ಞರು, ಸಂಘಟನೆಗಳ ಪ್ರಮುಖರ ಸಲಹೆಗಳನ್ನು ಪಡೆದುಕೊಂಡು ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಈ ಸಮಸ್ಯೆಗಳನ್ನು ಬಗೆಹರಿಸಲು ಒತ್ತಡ ಹೇರಲು ನಿರ್ಧರಿಸಲಾಯಿತು.
2005 ರ ನಂತರದ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸುಮಾರು 5500 ಕ್ಕೂ ಹೆಚ್ಚು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ತಕ್ಷಣ ಆದೇಶವನ್ನು ಹೊರಡಿಸಲು ಸಂಭಂದಪಟ್ಟ ಸಚಿವರ ಗಮನ ಸೆಳೆಯಬೇಕೆಂದು ಸಭೆಯಲ್ಲಿ ಹಾಜರಿದ್ದ ಶಿಕ್ಷಕ ಸಂಘಟನೆಗಳು ಪ್ರಮುಖರು ವಿ ಧಾನ ಪರಿಷತ್ ಸದಸ್ಯರಿಗೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ನಮೋಶಿಯವರು ಈಗಾಗಲೇ ಶಿಕ್ಷಣ ಸಚಿವರ ಜೋತೆ ಚರ್ಚೆ ಮಾಡಿರುವೆ ಅವರು ಶೀಘ್ರದಲ್ಲೇ ಆದೇಶ ಹೊರಡಿಸುವ ಭರವಸೆ ನೀಡಿರುವ ವಿಷಯವನ್ನು ಸಭೆ ಗಮನಕ್ಕೆ ತಂದರು. ನಂತರ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಿರಿಯ ಪ್ರೌಢಶಾಲಾ ಶಿಕ್ಷಕರನ್ನು ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ, ಮತ್ತು ಪದವಿಪೂರ್ವ ಕಾಲೇಜು ಹಿರಿಯ ಉಪನ್ಯಾಸಕರ ಬಡ್ತಿ ಕುರಿತು ಚರ್ಚಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಬಹಳಷ್ಟು ಕಡಿಮೆಯಾಗುತ್ತಿದ್ದು ಫಲಿತಾಂಶ ಸುಧಾರಣೆಗಾಗಿ ಶಿಕ್ಷಕ ಸಂಘಟನೆಗಳು ವಿದ್ಯಾರ್ಥಿಗಳಿಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಂದು ಸಂಘಟನೆಗಳ ಪದಾಧಿಕಾರಿಗಳಿಗೆ ನಮೋಶಿ ಕರೆ ನೀಡಿದರು.ಕಲ್ಯಾಣ ಕರ್ನಾಟಕ ವಿಭಾಗವು ಈ ಭಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಒಳ್ಳೆಯ ಸಾಧನೆ ಮಾಡಲು ತಾವೆಲ್ಲರೂ ಪ್ರಯತ್ನಿಸುತ್ತಿದ್ದಿರಿ ನಿಮ್ಮ ಪ್ರಯತ್ನಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು ನನ್ನ ಕಡೆಯಿಂದಲೂ ನಿಮಗೆ ಸಹಕಾರವಿದೆ ಎಂದು ಹೇಳಿದರು.
ಇಡಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳ ಜೋತೆ ಕಲಬುರ್ಗಿ ವಿಭಾಗದ ಅಪರ ಆಯುಕ್ತರು, ಅಧಿಕಾರಿಗಳು, 7 ಜಿಲ್ಲೆಗಳ ಡಿಡಿಪಿಐ ಸಮ್ಮುಖದಲ್ಲಿ ಸಭೆ ನಡೆಸಿ ನಮ್ಮ ಸಮಸ್ಯೆಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ಏಕೈಕ ಶಿಕ್ಷಕ ಪ್ರತಿನಿಧಿ ತಾವು ಎಂದು ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಸಂಘಟನೆಗಳ ಪ್ರಮುಖರು ಶ್ರೀ ಶಶೀಲ್ ಜಿ ನಮೋಶಿ ಯವರನ್ನು ಕೊಂಡಾಡಿದರು. ನಂತರ ಇಂದು ನಮ್ಮ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲು ಸಭೆ ಕರೆದಿರುವುದು ರಾಜ್ಯದ ಇತಿಹಾಸದಲ್ಲಿ ಇದೆ ಮೊದಲಿನದಾಗಿದ್ದು ಸಂತೋಷ ತಂದಿದೆ ಎಂದು ಹೇಳಿದರು.ನಂತರ ಮಾತನಾಡಿದ ಸಂಘಟನೆಗಳ ಪದಾಧಿಕಾರಿಗಳು ಕಲ್ಯಾಣ ಕರ್ನಾಟಕ ವಿಭಾಗದ 7 ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ, ನಂತರ 7 ಜಿಲ್ಲೆಗಳ ಸಂಘಟನೆಗಳ ಕಲಬುರ್ಗಿ ವಿಭಾಗದ ವಿಭಾಗ ಸಮಾವೇಶ ಹಮ್ಮಿಕೊಂಡು ನಮ್ಮ ಭಾಗದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಶ್ರಮಿಸುವಂತೆ ಸಲಹೆ ನೀಡಿದರು. ಇದು ರಾಜ್ಯ ಸಂಘಟನೆಗಳಿಗೆ ಮಾದರಿಯಾಗುವ ದಾರಿಯಲ್ಲಿ ಸಾಗಲಿದೆ ಎಂದು ಹೇಳಿದರು.
ಇಂದಿನ ಈ ಸಭೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ಮಹೇಶ್ ಹೂಗಾರ, ಕಾರ್ಯದರ್ಶಿ ಜಮೀಲ್ ಅಹ್ಮದ್ ಇಮ್ರಾನ್, ರಾಜ್ಯ ಖಜಾಂಚಿ ಧನಸಿಂಗ ರಾಠೋಡ, ರಾಯಚೂರು ಜಿಲ್ಲಾಧ್ಯಕ್ಷ ಪ್ರಭುಲಿಂಗ ಗದ್ದಿ, ವಿಭಾಗಿಯ ಉಪಾಧ್ಯಕ್ಷ ವೆಂಕಟೇಶ್ ಜಾಲಿಬೆಂಚಿ, ಬೀದರ್ ಜಿಲ್ಲಾ ಅಧ್ಯಕ್ಷ ಮೆಹಬೂಬ್ ಪಟೇಲ್, ಕಾರ್ಯದರ್ಶಿ ಜೀತೆಂದ್ರ, ವಿಜಯನಗರ ಜಿಲ್ಲಾ ಅಧ್ಯಕ್ಷ ಮನೋಹರ, ಕಾರ್ಯದರ್ಶಿ ಶಿವಕುಮಾರ್ ಗದ್ದಿ, ಕೊಪ್ಪಳ ಜಿಲ್ಲಾ ಅಧ್ಯಕ್ಷ ಸೋಮಶೇಖರ ಹರ್ತಿ, ಕಾರ್ಯದರ್ಶಿ ಮಾರ್ತಾಂಡ ರಾವ್, ಯಾದಗಿರಿ ಜಿಲ್ಲಾಧ್ಯಕ್ಷ ಅಶೋಕ್ ಕೆಂಭಾವಿ, ಕಾರ್ಯದರ್ಶಿ ಎಚ್ ಬಿ ಬಂಡಿ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಭಾಸ್ಕರ ರೆಡ್ಡಿ, ಕಾರ್ಯದರ್ಶಿ ಪಂಪನಗೌಡ, ರಾಜ್ಯ ಉಪಾಧ್ಯಕ್ಷ ಪ್ರಕಾಶ್ ನರೋಣ ಹಾಗೂ ಮುಂತಾದವರಿದ್ದರು.