11ರಂದು ನಾಲವಾರ ಡಾ.ಸಿದ್ಧತೋಟೇಂದ್ರ ಶ್ರೀಗಳ ಜನ್ಮದಿನೋತ್ಸವ

11ರಂದು ನಾಲವಾರ ಡಾ.ಸಿದ್ಧತೋಟೇಂದ್ರ ಶ್ರೀಗಳ ಜನ್ಮದಿನೋತ್ಸವ

11ರಂದು ನಾಲವಾರ ಡಾ.ಸಿದ್ಧತೋಟೇಂದ್ರ ಶ್ರೀಗಳ ಜನ್ಮದಿನೋತ್ಸವ

ಇದೇ ಅಕ್ಟೋಬರ್ 11 ರ ಮಹಾನವಮಿಯ ಆಯುಧಪೂಜೆ ದಿನದಂದು ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 60 ನೇ ಜನ್ಮದಿನೋತ್ಸವ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

ಪೂಜ್ಯರ 60 ನೇ ಜನ್ಮದಿನೋತ್ಸವ ಹಾಗೂ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ ಪ್ರಯುಕ್ತ ಶ್ರೀಮಠದಲ್ಲಿ ಕಳೆದ ಮಹಾಲಯ ಅಮಾವಾಸ್ಯೆಯಿಂದಲೇ ವಿಶೇಷ ಕಾರ್ಯಕ್ರಮಗಳು ಪ್ರಾರಂಭವಾಗಿವೆ.

ಲಿಂಗೈಕ್ಯ ಗುರುಗಳ ಗದ್ದುಗೆಗೆ ಪ್ರತಿನಿತ್ಯ ರುದ್ರಾಭಿಷೇಕ,ವಿಶೇಷ ಪೂಜೆ,ಮಂಗಳಾರತಿ, ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಮಹಾಪಾದಪೂಜೆ,ವಿವಿಧ ಕಲಾವಿದರಿಂದ ಸಂಗೀತ ನಾದಾರ್ಚನೆ,ಭಕ್ತರಿಗೆ ಮಹಾಪ್ರಸಾದ ಸೇರಿದಂತೆ ಹಲವು ಕಾರ್ಯಕ್ರಮ ನಡೆಯುತ್ತಿವೆ.

ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ 60 ಜನ್ಮದಿನೋತ್ಸವದ ಷಷ್ಠ್ಯಬ್ದಿ ಕಾರ್ಯಕ್ರಮವನ್ನು ವರ್ಷಪೂರ್ತಿ ವಿಶಿಷ್ಟವಾಗಿ ಆಚರಿಸಲು ಶ್ರೀಮಠದ ಸದ್ಭಕ್ತರು ಯೋಜನೆ ಹಾಕಿಕೊಂಡಿದ್ದು, ಮಹಾನವಮಿಯ ಆಯುಧಪೂಜೆ ದಿನದಂದು ಷಷ್ಠ್ಯಬ್ದಿ ಯ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ.

ಮುಂದಿನ ವರ್ಷದ ಮಹಾನವಮಿಗೆ ಷಷ್ಠಿಪೂರ್ತಿ ಸಮಾರಂಭದೊಂದಿಗೆ ಈ ಸಂಭ್ರಮಕ್ಕೆ ತೆರೆ ಬೀಳಲಿದೆ.

11 ರಂದು ನಡೆಯುವ ಕಾರ್ಯಕ್ರಮದಲ್ಲಿ ಪೂಜ್ಯರಿಗೆ ತುಲಾಭಾರ, ಪೂಜ್ಯರು ಬರೆದ ಪುಸ್ತಕಗಳ ಬಿಡುಗಡೆ,ಪ್ರಸಿದ್ಧ ಚಲನಚಿತ್ರ ಹಿನ್ನಲೆಗಾಯಕರಿಂದ ಸಂಗೀತ ರಸಮಂಜರಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.

ದೇಶದ ವಿವಿಧ ಭಾಗಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯುವ ಈ ಸಮಾರಂಭಕ್ಕೆ ನಾಡಿನ ಹಿರಿಯ ಮಠಾಧೀಶರು,ಸಚಿವರು,ಶಾಸಕರು,ಸಾಹಿತಿಗಳು ಹಾಗೂ ಕಲಾವಿದರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ಆಧ್ಯಾತ್ಮಿಕ ಲೋಕದಲ್ಲಿ ಆರೂಢ ಅವಸ್ಥೆಯನ್ನು ತಲುಪಿ,ಹಲವು ಲೀಲೆಗಳನ್ನು ತೋರಿ,ಭಕ್ತರನ್ನು ಉದ್ಧರಿಸಿದ ಶ್ರೀಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಪವಾಡಪುರುಷ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಮತ್ತು ಪ್ರಸ್ತುತ ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಜನ್ಮದಿನ ಒಂದೇ ದಿನ ಆಚರಣೆ ಗೊಳ್ಳುವುದು ಇಲ್ಲಿನ ವಿಶೇಷ.

ಈ ವಿಶೇಷ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಲು ಮಹಾದೇವ ಗಂವ್ಹಾರ ಕೋರಿದ್ದಾರೆ.