ಮಹಿಳೆ ಕೊಲೆ: ಮೃತದೇಹ ಕಸದ ಲಾರಿಯಲ್ಲಿ ಪತ್ತೆ – ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಭಯಾನಕ ಘಟನೆ

ಮಹಿಳೆ ಕೊಲೆ: ಮೃತದೇಹ ಕಸದ ಲಾರಿಯಲ್ಲಿ ಪತ್ತೆ – ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಭಯಾನಕ ಘಟನೆ
ಬೆಂಗಳೂರು: ನಗರದಲ್ಲಿ ಮತ್ತೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. 30 ರಿಂದ 35 ವರ್ಷ ವಯಸ್ಸಿನ ಅನಾಮಧೇಯ ಮಹಿಳೆಯೊಬ್ಬಳನ್ನು ದುಷ್ಕರ್ಮಿಗಳು ಕೊಲೆ ಮಾಡಿ, ಮೃತದೇಹವನ್ನು ಮೂಟೆ ಕಟ್ಟಿದ ಸ್ಥಿತಿಯಲ್ಲಿ ಬಿಬಿಎಂಪಿ ಕಸದ ಲಾರಿಯಲ್ಲಿ ಎಸೆದು ಪರಾರಿಯಾಗಿರುವ ಘಟನೆ ಶನಿವಾರ ತಡರಾತ್ರಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಸ್ಕೆಟಿಂಗ್ ಮೈದಾನ ಬಳಿಯಲ್ಲಿ ನಡೆದಿದೆ.
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದಂತೆ, ದುಷ್ಕರ್ಮಿಗಳು ಮೃತದೇಹವನ್ನು ಆಟೋದಲ್ಲಿ ತಂದು ಮೈದಾನದ ಬಳಿ ನಿಲ್ಲಿಸಿದ್ದ ಲಾರಿಯಲ್ಲಿ ಹಾಕಿದ್ದಾರೆ. ಸ್ಥಳೀಯ ವ್ಯಕ್ತಿಯೊಬ್ಬರು ಕಸದ ಲಾರಿಯಲ್ಲಿ ಮಹಿಳೆಯ ತಲೆ ಕೂದಲು ಕಾಣಿಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಶವವನ್ನು ಹೊರತೆಗೆದು ಪರಿಶೀಲನೆ ನಡೆಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಾಯದಿಂದ ತನಿಖೆ ಚುರುಕುಗೊಳಿಸಲಾಗಿದೆ. ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಪ್ರಾರಂಭವಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸಾರ್ವಜನಿಕ ಸಂಚಾರ ಕಡಿಮೆ ಇರುವ ಕಾರಣ ಇವೆಲ್ಲವನ್ನೂ ಗಮನಿಸಿ ಬೇರೆ ಕಡೆ ಕೊಲೆ ಮಾಡಿ ಇಲ್ಲಿ ಶವವನ್ನು ಎಸೆದು ಹೋಗಿರುವ ಸಾಧ್ಯತೆ ಹೆಚ್ಚು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರಬಹುದೆಂಬ ಶಂಕೆಯು ಕೂಡ ವ್ಯಕ್ತವಾಗಿದೆ.
ಈ ಕುರಿತು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ಪ್ರವಾ) ಕೃಪೆ