ಐತಿಹಾಸಿಕ ಸಚಿವ ಸಂಪುಟ ಸಭೆ -ಪ್ರಿಯಾಂಕ್ ಖರ್ಗೆ
ಐತಿಹಾಸಿಕ ಸಚಿವ ಸಂಪುಟ ಸಭೆ ಹಿನ್ನೆಲೆ:
ಪ್ರದೇಶದ ಪ್ರಸ್ತಾವನೆಗಳಿಗೆ ಅನುಮೋದನೆ ಪಡೆಯಲು ಕೂಡಲೆ ಪಟ್ಟಿ ಸಲ್ಲಿಸಿ-ಪ್ರಿಯಾಂಕ್ ಖರ್ಗೆ
ಕಲಬುರಗಿ: ದಶಕಗಳ ಬಳಿಕ ಕಲಬುರಗಿಯಲ್ಲಿ ಇದೇ ಸೆ.17 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸರ್ಕಾರದ ಹಂತದಲ್ಲಿ
ಪ್ರದೇಶದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಬಾಕಿ ಇದ್ದಲ್ಲಿ ಇಂದೇ ಡಿ.ಸಿ.ಗೆ ಸಲ್ಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕ-ಸಂಸದರು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಪುಟ ಸಭೆ ಕಲಬುರಗಿಯಲ್ಲಿ ನಡೆಯುತ್ತಿರುವುದರಿಂದ ಈ ಭಾಗದ ಪ್ರಸ್ತಾವನೆಗಳ ಅನುಮೋದನೆ ನೀಡಲು ಸರ್ಕಾರ ಉತ್ಸುಕವಾಗಿದೆ. ಪ್ರದೇಶದ ಅಭಿವೃದ್ಧಿಗೂ ಈ ಸಭೆ ಸುವರ್ಣಾವಕಾಶವಾಗಿದೆ ಎಂದರು.
ಮಂಗಳವಾರ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆ ಡಿ.ಸಿ ಅವರು ಸರ್ಕಾರದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಬಗ್ಗೆ ಚರ್ಚಿಸಿಲಿದ್ದಾರೆ. ಸಂಪುಟ ಸಭೆಯ ಗಾಂಭೀರ್ಯ ಅರಿತು ಕೂಡಲೆ ಇಲಾಖಾವಾರು ಆಯಾ ಅಧಿಕಾರಿಗಳು ಬಾಕಿ ಪ್ರಸ್ತಾವನೆ ಬಗ್ಗೆ ಮಾಹಿತಿ ನೀಡಿದಲ್ಲಿ ಅದನ್ನು ಸಚಿವ ಸಂಪುಟ ಮುಂದಿಟ್ಟು ಅನುಮೋದನೆ ಪಡೆಯಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು.
ಸಂಪುಟ ಸಭೆ ಇಲ್ಲಿ ನಡೆಯುತ್ತಿರುವುದು ಈ ಭಾಗಕ್ಕೆ ಸುವರ್ಣಾವಕಾಶವಾಗಿದೆ. ಹೀಗಾಗಿ ಅಧಿಕಾರಿಗಳು ಇಂತಹ ಅವಕಾಶ ಕಳೆದುಕೊಳ್ಳಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ ಅವರು, ಸಿ.ಎಂ. ಸೇರಿ ಸರ್ಕಾರವೇ ಇಲ್ಲಿಗೆ ಬರುವುದರಿಂದ ಸಭೆಯಿಂದ ಪ್ರದೇಶಕ್ಕೆ ಹೆಚ್ಚಿನ ಅನುದಾನ, ಹೊಸ ಯೋಜನೆಗಳ ಘೋಷಣೆಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ ಎಂದರು.
ಇದಲ್ಲದೆ ಶಾಸಕರು ಹೊಸ ಯೋಜನೆಗಳ ಘೋಷಣೆಗಳ ಬಗ್ಗೆ ಪ್ರಸ್ತಾವನೆ ಕೊಟ್ಟಿದಲ್ಲಿ ಅದನ್ನು ಸಹ ಸರ್ಕಾರದ ಮುಂದಿಡಲಾಗುವುದು ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಲಾಖಾವಾರು ಸರ್ಕಾರದಲ್ಲಿ ಬಾಕಿ ಇರುವ ಪ್ರಸ್ತಾವನೆಗಳ ಕುರಿತು ಕೂಲಂಕುಷವಾಗಿ ಚರ್ಚಿಸಿ ಮಾಹಿತಿ ಪಡೆದರು.
ಸಂಪುಟ ಸಭೆ ಯಶಸ್ಸಿಗೆ ಶ್ರಮಿಸಿ:
ದಶಕಗಳ ಬಳಿಕ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಜನರ ನಿರೀಕ್ಷೆಯಂತೆ ಪ್ರದೇಶ ಅಶೋತ್ತರಗಳನ್ನು ಈಡೇರಿಸುವ ಪ್ರಮುಖ ಸಭೆ ಇದಾಗಿದೆ. ಸಿ.ಎಂ. ಸೇರಿ ಇಡೀ ಸಂಪುಟ ಸದಸ್ಯರು, ಹಿರಿಯ ಅಧಿಕಾರಿಗಳು ಸೇರಿ ಇಡೀ ಸರ್ಕಾರವೇ ಕಲಬುರಗಿಯತ್ತ ಬರುವುದರಿಂದ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಬೇಕು. ಅತಿಥಿ ದೇವೋಭವ ಎಂಬಂತೆ ಬಂದಂತಹ ಸಚಿವರು, ಹಿರಿಯ ಅಧಿಕಾರಿಗಳಿಗೆ ಶಿಷ್ಠಾಚಾರದಂತೆ ಸರಿಯಾಗಿ ಉಪಚಾರ ಮಾಡಬೇಕು. ಒಟ್ಟಾರೆ ಸಚಿವ ಸಂಪುಟ ಸಭೆ ಯಶಸ್ವಿಗೊಳಿಸಬೇಕೆಂದು ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಸಿ.ಎಂ.ಸೇರಿ ಸಚಿವರು, ಸರ್ಕಾರದ ಹಿರಿಯ ಅಧಿಕಾರಿಗಳು ಆಗಮಿಸುವುದರಿಂದ ಕಲಬುರಗಿ ನಗರದಾದ್ಯಂತ ಸ್ವಚ್ಛತೆ, ನೈರ್ಮಲ್ಯ ಕಾಪಾಡಬೇಕು. ನಗರದಲ್ಲಿ ಅನಧಿಕೃತ ಬ್ಯಾನರ್, ಪೋಸ್ಟರ್ ತೆರವುಗೊಳಿಸುವುದಲ್ಲದೆ ನಗರ ಸೌಂದರ್ಯೀಕರಣಕ್ಕೆ ಒತ್ತು ನೀಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಸಚಿವರು, ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಸಚಿವರಿಗೆ ಆಯಾ ಇಲಾಖೆ ಅಧಿಕಾರಿಗಳೆ ಲೈಸನ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸೆ.15 ರಿಂದ 17ರ ವರೆಗೆ ನಗರದಾದ್ಯಂತ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ವ್ಯವಸ್ಥೆ ಮಾಡಬೇಕು. ಈ ಅವಧಿಯಲ್ಲಿ ಗಣೇಶ ವಿಸರ್ಜನೆ, ಈದ್ ಮಿಲಾದ್ ಹಬ್ಬ ಸಹ ಬರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆ ಕಲ್ಪಿಸಬೇಕು ಎಂದ ಅವರು, ಕಲ್ಯಾಣ ಕರ್ನಾಟಕ ಉತ್ಸವ ದಿನದಂದು ಪೊಲೀಸ್ ಪರೇಡ್ ಮೈದಾನದಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಭೀಮಾ ನ್ಯಾಯಾದೀಕರಣ ಸ್ಥಾಪಿಸಿ,ಕಲುಷಿತ ನೀರು ತಪ್ಪಿಸಿ:
ಜಿಲ್ಲೆಯ ಜೀವನಾಡಿ ಭೀಮಾ ನದಿಯ ನೀರು ಮಹಾರಾಷ್ಟ್ರ ಹಿಡಿದಿಟ್ಟುಕೊಳ್ಳುತ್ತಿರುವುದರಿಂದ ಪ್ರತಿ ವರ್ಷ ಜಿಲ್ಲೆಯ 155 ಹಳ್ಳಿ ಕುಡಿಯುವ ನಿರಿನ ಸಮಸ್ಯೆ ಎದುರಿಸುತ್ತಿವೆ. ಕಲುಷಿತ ನೀರು ನದಿಗೆ ಸೇರುತ್ತಿದೆ. ಇದಕ್ಕೆ ಶಾಸ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಭೀಮಾ ನ್ಯಾಯಾಧೀಕರಣ ಸ್ಥಾಪಿಸಬೇಕಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಕಲಬುರಗಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದರಿಂದ ಸಮಗ್ರ ಮೂಲಸೌಕರ್ಯಕ್ಕೆ 100 ಕೋಟಿ ರೂ. ವಿಶೇಷ ಅನುದಾನ ಘೋಷಿಸಬೇಕು. ನಗರದ ನಾಲ್ಕು ದಿಕ್ಕಿನಲ್ಲಿ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ನಿರ್ಮಿಸಬೇಕು. ಸುಗಮ ಸಂಚಾರಕ್ಕೆ ನಗರದಲ್ಲಿ ರಸ್ತೆ ಮೇಲ್ಸೇತುವೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಶಾಸಕ ಅವಿನಾಶ ಜಾಧವ ಮಾತನಾಡಿ ಚಂದ್ರಂಪಳ್ಳಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಮತ್ತು ಫಾರೆಸ್ಟ್ರಿ ಕಾಲೇಜ್ ಸ್ಥಾಪನೆ ನೆನೆಗುದ್ದಿಗೆ ಬಿದ್ದಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಬೆಕೆಂದರು. ಶಾಸಕಿ ಕನೀಜ್ ಫಾತಿಮಾ ಮಾತನಾಡಿ ಕಲಬುರಗಿ ನಗರ ಸರ್ವೆ 1972-76ರ ಅವಧಿಯಲ್ಲಿ ಆಗಿದ್ದು, ನಗರ ಬೆಳೆವಣಿಗೆ ದೃಷ್ಠಿಯಿಂದ ಮತ್ತೆ ಸರ್ವೆ ಮಾಡುವ ಅವಶ್ಯಕತೆ ಇದೆ ಎಂದರು.
ಶಾಸಕ ಬಸವರಾಜ ಮತ್ತಿಮೂಡ್ ಮಾತನಾಡಿ, ಕಮಲಾಪುರ ಬಸ್ ನಿಲ್ದಾಣ ಸ್ಥಾಪನೆಗೆ ನಿವೇಶನ ದೊರಕಿಸ ಕೊಡಬೇಕು ಎಂದರು. ಎಂ.ಎಲ್.ಸಿ. ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಪ್ರದೇಶದ ನೀರಾವರಿ ಯೋಜನೆಗಳಿಗೆ ಆದ್ಯತೆ ಸಿಗಬೇಕು. ಹಿಂದಳಿದ ವರ್ಗಗಳ ಕಲ್ಯಟಣ ಇಲಾಖೆಯ ವಸತಿ ನಿಲಯ ಸ್ಥಾಪಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಶಾಶ್ವತ ಕಟ್ಟಡ ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆ ಇಟ್ಟರು.
ಸಭೆಯಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮುಖ್ಯಮಂತ್ರಿಗಳ ಸಲಹೆಗಾರರು ಮತ್ತು ಆಳಂದ ಶಾಸಕ ಬಿ.ಆರ್.ಪಾಟೀಲ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಮತ್ತು ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ಶಶೀಲ ನಮೋಶಿ, ಬಿ.ಜಿ.ಪಾಟೀಲ, ಚಂದ್ರಶೇಖರ ಪಾಟೀಲ ಹುಮನಾಬಾದ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಅವರು ಭಾಗಿಯಾಗಿದ್ದರು.
ಇದಲ್ಲದೆ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಡಿ.ಸಿ.ಎಫ್. ಸುಮಿತ್ ಪಾಟೀಲ, ಕೆ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.