ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

ಮುಂದಿನ ವರ್ಷ ಶೇ.100ರಷ್ಟು ಫಲಿತಾಂಶ ತನ್ನಿ: ಶಾಸಕ ಪ್ರಭು ಚವ್ಹಾಣ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ಔರಾದ(ಬಿ) ಮತ್ತು ಕಮಲನಗರ ತಾಲ್ಲೂಕುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜೂ.5ರಂದು ಔರಾದ(ಬಿ) ಪಟ್ಟಣದಲ್ಲಿ ಸನ್ಮಾನಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ತಾಲ್ಲೂಕಿನ ಪ್ರಥಮ ಟಾಪರ್‌ಗಳಿಗೆ 21,000, ದ್ವಿತೀಯ ಟಾಪರ್‌ಗಳಿಗೆ 11,000 ಹಾಗೂ ತೃತೀಯ ಟಾಪರ್‌ಗಳಿಗೆ 7,000 ನಗದು ಬಹುಮಾನ ನೀಡಿದರಲ್ಲದೇ ಮತ್ತು ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಡುಗೊರೆಯ ಜೊತೆಗೆ ಸಸಿ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು. ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ನೀಡಿದ ಅವರ ಪಾಲಕರು ಮತ್ತು ಶಾಲೆಯ ಮುಖ್ಯಗುರುಗಳಿಗೆ ಮತ್ತು ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಗುರುಗಳಿಗೆ ವಿಶೇಷ ಸನ್ಮಾನ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಪ್ರಭು ಬಿ.ಚವ್ಹಾಣ ಅವರು, ವಿದ್ಯಾರ್ಥಿಗಳು ಅಂಕಗಳ ಜೊತೆಗೆ ಉತ್ತಮ ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ತಂದೆ-ತಾಯಿಗೆ ಗೌರವ ನೀಡಬೇಕು, ಶಿಕ್ಷಕರ ಮಾರ್ಗದರ್ಶನವನ್ನು ಪಾಲಿಸಬೇಕು. ಶಿಕ್ಷಣದ ಜೊತೆಗೆ ಆಟೋಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಸರ್ವತೋಮುಖ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ನಮ್ಮ ಕ್ಷೇತ್ರದ ಮಕ್ಕಳು ಡಿಸಿ, ಎಸಿ, ತಹಸೀಲ್ದಾರ್, ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಉನ್ನತ ಅಧಿಕಾರಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಎಲ್ಲಿಯಾದರೂ ಹೋದಾಗ ನಾನು ಔರಾದ(ಬಿ) ಕ್ಷೇತ್ರದವನು ಎಂದು ಹೆಮ್ಮೆಯಿಂದ ಹೇಳುವಂತಹ ಸಾಧನೆ ಮಾಡಬೇಕು. ನನಗೆ ಅದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದಿಲ್ಲ ಎಂದು ಹೇಳಿದರು. ನಾನು ನಾಲ್ಕು ಲಕ್ಷ ಜನರ ಸೇವಕ. ಕ್ಷೇತ್ರದ ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸು ನನ್ನ ಹೆಮ್ಮೆ. ನೀವು ಸರಿಯಾದ ದಿಕ್ಕಿನಲ್ಲಿ ಅಭ್ಯಾಸ ಮಾಡಿ ಮುಂದೆ ಬರಬೇಕು. ಶಿಕ್ಷಣ ಅಥವಾ ಇತರ ಯಾವುದೇ ಸಮಸ್ಯೆಗಳಿದ್ದರೆ ಹಿಂಜರಿಯದೆ ತಿಳಿಸಿ, ನಾನು ನಿಮ್ಮೊಂದಿಗೆ ಇದ್ದೇನೆ” ಎಂದು ಭರವಸೆ ನೀಡಿದರು.

ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಮುಖ್ಯವಾಗಿರುವ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದು, ಅದರಂತೆ ಎಲ್ಲ ಗ್ರಾಮಗಳಲ್ಲಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ತೆರೆದಿದ್ದೇನೆ. ಪಿಯುಸಿ, ಪದವಿ, ಐಟಿಐ, ಡಿಪ್ಲೋಮಾ ಕಾಲೇಜನ್ನು ತಂದಿದ್ದು, ಬೇಡಿಕೆಗೆ ಅನುಗುಣವಾಗಿ ಎಲ್ಲ ಕಡೆಗಳಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳು, ವಸತಿ ನಿಲಯಗಳನ್ನು ನಿರ್ಮಿಸುತ್ತಿದ್ದೇನೆ. 2008ರ ನಂತರ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಗ್ರಾಮ ಸಂಚಾರದ ಸಂದರ್ಭದಲ್ಲಿ ಪ್ರತಿ ಶಾಲೆಗೆ ಭೇಟಿ ನೀಡುತ್ತೇನೆ. ಕೊರತೆಗಳಿದ್ದರೆ ಸರಿಪಡಿಸುತ್ತೇನೆ. ಪ್ರತಿ ವರ್ಷ ಜನ್ಮದಿನದ ನಿಮಿತ್ತ ಮಕ್ಕಳಿಗೆ ಸನ್ಮಾನಿಸುತ್ತೇನೆ. ಜೊತೆಗೆ ಶಿಕ್ಷಕರನ್ನು ಗೌರವಿಸುತ್ತೇನೆ. ಇದೆಲ್ಲದರ ಪರಿಣಾಮವಾಗಿ ಹಿಂದೆ ಶೇ.24ರಿಂದ 30ರ ಒಳಗಿರುತ್ತಿದ್ದ ಫಲಿತಾಂಶ ಈ ವರ್ಷದ ಫಲಿತಾಂಶ ಶೇ.93ಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ಹೇಳಿದರು.

ಈ ವರ್ಷದ ಫಲಿತಾಂಶದಲ್ಲಿ ಔರಾದ(ಬಿ) ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೇ ಪ್ರಥಮ ಬರಬೇಕು ಎಂಬುದು ನನ್ನ ಸಂಕಲ್ಪವಾಗಿದೆ. ಶೇ.100ರಷ್ಟು ಫಲಿತಾಂಶ ತರಲು ಅಧಿಕಾರಿಗಳು ಮತ್ತು ಶಿಕ್ಷಕರು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಸರಿಯಾಗಿ ಅಭ್ಯಾಸ ಮಾಡಬೇಕು. ಪರಿಸರ ದಿನಾಚರಣೆಯ ನಿಮಿತ್ತ ಸಸಿಗಳನ್ನು ಕೊಡಲಾಗುತ್ತಿದೆ. ಎಲ್ಲರೂ ತಮ್ಮ ಮನೆಗಳ ಮುಂದೆ ನೆಟ್ಟು, ಸರಿಯಾಗಿ ಬೆಳೆಸಬೇಕು. ಔರಾದ(ಬಿ) ಹಾಗೂ ಕಮಲನಗರ ತಾಲ್ಳೂಕುಗಳನ್ನು ಹಚ್ಚ ಹಸಿರಾಗಿಸುವ ನನ್ನ ಕನಸಿಗೆ ತಾವುಗಳು ಕೈಜೋಡಿಸಬೇಕು ಎಂದು ಶಾಸಕರು ಕೋರಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ, ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಶಾಸಕರಾದ ಪ್ರಭು ಚವ್ಹಾಣ ಅವರು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು, ಅವರ ಪಾಲಕರನ್ನು ಮತ್ತು ಶಾಲೆಯ ಮುಖ್ಯಗುರುಗಳನ್ನು ಸನ್ಮಾನಿಸುತ್ತಿರುವುದು ಅಪರೂಪದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ವಾಗಂಬರ ಗಾಯಕವಾಡ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ, ಮುಖಂಡರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಸಚಿನ ರಾಠೋಡ, ರಾಮಶೆಟ್ಟಿ ಪನ್ನಾಳೆ, ಪ್ರತೀಕ ಚವ್ಹಾಣ, ಇಲಾಖೆಯ ಸಂಜಯ ಮೇತ್ರೆ, ಶಾಲಿವಾನ ಉದಗೀರೆ, ಬಲಭೀಮ ಕುಲಕರ್ಣಿ, ರಾಜಕುಮಾರ ಹಲಮಂಡಗೆ, ನಯೀಮೋದ್ದಿನ, ಪ್ರವೀಣ ಕೋಳೆಕರ್, ಬಾಲಾಜಿ ಅಮರವಾಡಿ, ಓಂಪ್ರಕಾಶ ದಡ್ಡೆ, ಗುರುನಾಥ ರಾಜಗೀರಾ ಸೇರಿದಂತೆ ಪ್ರೌಢ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಇಲಾಖೆಯ ಅನುಷ್ಠಾನ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಸಾವಿರಾರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.