ಶಾಲಾ ಶಿಕ್ಷಣದಲ್ಲಿ ಚಿತ್ರಕಲೆಗೆ ಹೆಚ್ಚಿನ ಆದ್ಯತೆ ಅಗತ್ಯ: ಸತೀಶ ಕೇಮಶೆಟ್ಟಿ
ಶಾಲಾ ಶಿಕ್ಷಣದಲ್ಲಿ ಚಿತ್ರಕಲೆಗೆ ಹೆಚ್ಚಿನ ಆದ್ಯತೆ ಅಗತ್ಯ: ಸತೀಶ ಕೇಮಶೆಟ್ಟಿ
ವಿಜಯಪುರ, ಜು. 21: ಶಾಲಾ ಶಿಕ್ಷಣದಲ್ಲಿ ಚಿತ್ರಕಲೆ ಕೇವಲ ಒಂದು ವಿಷಯವಲ್ಲ; ಅದು ಮಕ್ಕಳ ಸೃಜನಶೀಲತೆ, ಕಲ್ಪನಾಶಕ್ತಿ, ಭಾವನಾತ್ಮಕ ಬೆಳವಣಿಗೆ, ಏಕಾಗ್ರತೆ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಅಗತ್ಯವಾದ ಶಿಕ್ಷಣದ ಭಾಗವಾಗಿದೆ ಎಂದು ದೃಶ್ಯಬಿಂಬ ಕಲಾಪ್ರತಿಷ್ಠಾನ (ರಿ), ವಿಜಯಪುರ ಅಧ್ಯಕ್ಷ ಸತೀಶ ಕೇಮಶೆಟ್ಟಿ ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಉಳಿದಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ಕಲಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಚಿತ್ರಕಲೆಯ ಮೂಲಕ ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ಪರಿಸರ ಪ್ರಜ್ಞೆ, ಸಾಂಸ್ಕೃತಿಕ ಅರಿವು, ಮಾನಸಿಕ ಸಮತೋಲನ ಹಾಗೂ ನವೀನ ಆಲೋಚನಾ ಶಕ್ತಿ ಬೆಳೆಯುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP–2020) ಕೂಡ ಕಲಾ ಸಮನ್ವಯಿತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ.
ಅದೇ ವೇಳೆ, ರಾಜ್ಯದ ಅನೇಕ ಪ್ರತಿಭಾವಂತ ಚಿತ್ರಕಲಾ ಪದವೀಧರರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಅಪಾರ ಕಷ್ಟಪಟ್ಟು ಚಿತ್ರಕಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಹಲವು ವರ್ಷಗಳಿಂದ ಚಿತ್ರಕಲಾ ಶಿಕ್ಷಕರ ನೇಮಕಾತಿ ನಡೆಯದ ಪರಿಣಾಮ, ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗವಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರು ಪಡೆದಿರುವ ಜ್ಞಾನ, ಕೌಶಲ್ಯ ಮತ್ತು ಅನುಭವವು ಶಾಲಾ ಮಕ್ಕಳ ಭವಿಷ್ಯ ರೂಪಿಸಲು ಹಾಗೂ ಗುಣಮಟ್ಟದ ಕಲಾ ಶಿಕ್ಷಣ ನೀಡಲು ಸದುಪಯೋಗವಾಗಬೇಕಾಗಿದೆ.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ, ಗಣಿತ ಮತ್ತು ಭಾಷಾ ಶಿಕ್ಷಣದಷ್ಟೇ ಕಲಾ ಶಿಕ್ಷಣಕ್ಕೂ ಸಮಾನ ಮಹತ್ವ ನೀಡಬೇಕಿದೆ. ಶಾಲಾ ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಪ್ರತಿಯೊಂದು ಶಾಲೆಯಲ್ಲೂ ಅರ್ಹ ಚಿತ್ರಕಲಾ ಶಿಕ್ಷಕರ ಸೇವೆ ಲಭ್ಯವಾಗುವುದು ಅವಶ್ಯಕವಾಗಿದೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹೊಸ ದಿಕ್ಕು ದೊರೆಯಲಿದೆ.
"ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಯು ಚಿತ್ರಕಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶಾಲೆಗಳಲ್ಲಿ ಅಗತ್ಯ ಸಂಖ್ಯೆಯ ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಾ ಶಿಕ್ಷಣ ದೊರೆಯುವುದರ ಜೊತೆಗೆ ಅರ್ಹ ಚಿತ್ರಕಲಾ ಪದವೀಧರರ ಜ್ಞಾನ ಮತ್ತು ಕೌಶಲ್ಯ ಸಮಾಜದ ಒಳಿತಿಗೆ ಸದುಪಯೋಗವಾಗಲಿದೆ ಎಂದು ದೃಶ್ಯಬಿಂಬ ಕಲಾಪ್ರತಿಷ್ಠಾನ (ರಿ), ವಿಜಯಪುರ ಪ್ರಕಟಣೆಯಲ್ಲಿ ತಿಳಿಸಿದೆ."
