ರಂಗಸಂಗಮ ಪ್ರಶಸ್ತಿ ಪ್ರದಾನ: ಡಾ. ರಹಮತ್ ತರೀಕೆರೆ ಹೇಳಿಕೆ ಕಲಾವಿದರ ಸೀಮೋಲ್ಲಂಘನೆ ಯಿಂದ ಸಂವಿಧಾನ ಪ್ರಜ್ಞೆ ಗೆ ಶಕ್ತಿ

ರಂಗಸಂಗಮ ಪ್ರಶಸ್ತಿ ಪ್ರದಾನ: ಡಾ. ರಹಮತ್ ತರೀಕೆರೆ ಹೇಳಿಕೆ  ಕಲಾವಿದರ ಸೀಮೋಲ್ಲಂಘನೆ ಯಿಂದ ಸಂವಿಧಾನ ಪ್ರಜ್ಞೆ ಗೆ ಶಕ್ತಿ

ರಂಗಸಂಗಮ ಪ್ರಶಸ್ತಿ ಪ್ರದಾನ: ಡಾ. ರಹಮತ್ ತರೀಕೆರೆ ಹೇಳಿಕೆ

ಕಲಾವಿದರ ಸೀಮೋಲ್ಲಂಘನೆ ಯಿಂದ ಸಂವಿಧಾನ ಪ್ರಜ್ಞೆ ಗೆ ಶಕ್ತಿ

ಕಲಬುರಗಿ : ಕಲಾವಿದರು ಜಾತಿ, ಮತ, ಪಂಥ, ಭಾಷೆಗಳನ್ನು ಮೀರಿ ಸೀಮೋಲ್ಲಂಘನೆ ಮಾಡಿದರೆ ಅದರಿಂದ ಸಂವಿಧಾನ ಪ್ರಜ್ಞೆಗೆ ಶಕ್ತಿ ತುಂಬುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ಚಿಂತಕರಾದ ಡಾ. ರಹಮತ್ ತರೀಕೆರೆ ಹೇಳಿದರು.

    ಕಲಬುರಗಿ ಯಲ್ಲಿ ಭಾನುವಾರ (ಜುಲೈ 19ರಂದು) ವಿಶ್ವೇಶ್ವರಯ್ಯ ಭವನದಲ್ಲಿ ನಡೆದ ರಂಗಸಂಗಮ ಕಲಾ ವೇದಿಕೆ ಶ್ರೀ ಎಸ್ ಬಿ ಜಂಗಮಶೆಟ್ಟಿ ಹಾಗೂ ಶ್ರೀಮತಿ ಸುಭದ್ರಾ ದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಸಿನಿಮಾ, ರಂಗಭೂಮಿ, ಸಂಗೀತ ಕ್ಷೇತ್ರದ ಕಲಾವಿದರು ಗೆರೆಯನ್ನು ದಾಟಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೂಲಕ ಮನುಷ್ಯ ಬಂಧುತ್ವವನ್ನು ರೂಪಿಸುತ್ತಾರೆ. ಕಲಾ ಲೋಕ ಸೀಮೋಲ್ಲಂಘನದಿಂದ ಸಂವೇದನಾಶೀಲತೆ ಸೃಷ್ಟಿಯಾಗಿ ಮನೋರಂಜನೆಗಿಂತಲೂ ಮುಖ್ಯವಾಗಿ ಸಾಂಪ್ರದಾಯಿಕತೆಯನ್ನು ಬಿಟ್ಟು ಸಂಸ್ಕೃತಿ ಕಟ್ಟುವ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇವಲ ಹೋರಾಟಗಾರರು ಮಾತ್ರ ಮುಖ್ಯರಾಗುವುದಿಲ್ಲ.ಕಲಾವಿದರಿಗೂ ಅಂತಹ ಕೀರ್ತಿ ಸಲ್ಲುತ್ತದೆ. ನಾಟಕ, ಸಿನಿಮಾ, ರಂಗಭೂಮಿ ಸಂಗೀತ ಕಲಾವಿದರು ಗೆರೆ ಮೀರಿ ಬೆಳೆದ ಪರಿಣಾಮವಾಗಿ ಅಮೀರ ಬಾಯಿ, ರಾಜೀವ್ ತಾರಾನಾಥ್, ಅಲಿ ಅಕ್ರಮ ಖಾನ್ ಮುಂತಾದವರು ಮುಖ್ಯರಾಗುತ್ತಾರೆ ಹಿಂದುಸ್ತಾನಿ ಸಂಗೀತದ ಹಿಂದೆ ಸೂಫಿಸಂ ಪ್ರಭಾವ ಎದ್ದು ಕಾಣುತ್ತದೆ. ಕಲಾವಿದರು ಜಾತ್ಯಾತೀತ, ಧರ್ಮಾತೀತ ಭಾಷಾತೀತ, ಪರಂಪರೆಯನ್ನು ಹುಟ್ಟುಹಾಕಿ ಹೊಸ ಸಮಾಜ ಸೃಷ್ಟಿಗೆ ಕಾರಣೀಭೂತರಾಗುತ್ತಿದ್ದಾರೆ. ಧ್ರುವವಿಕೃತ ಸಮಾಜ ಸೃಷ್ಟಿಯಾಗುವ ಆತಂಕದ ಸಂದರ್ಭದಲ್ಲಿ ಒಳಗೊಳ್ಳುವಿಕೆಯ ಸಮಾಜ ಸೃಷ್ಟಿಗೆ ಕಲಾವಿದರ ಸೀಮೋಲ್ಲಂಘನೆ ಪ್ರೇರಣೆ ನೀಡುತ್ತದೆ. ಎಸ್ ಜಾನಕಿ ತೆಲುಗಿನವರಾದರರೂ ನಮ್ಮ ಕನ್ನಡದವರಾಗಿ ಬೆರೆತು ಹೋಗಿದ್ದಾರೆ. ಪ್ರಚಾರದ ಸೋಗಿನ ಸಂಗೀತ, ಸಿನಿಮಾ, ರಂಗಭೂಮಿಯ ಆತಂಕದ ನಡುವೆ ಮನೋರಂಜನೆಯಲ್ಲಿ ಸಂಸ್ಕೃತಿಯ ಆತ್ಮ ಕಾಪಾಡುವ ಕೆಲಸ ಕಲೆ ಮಾಡುತ್ತಿದೆ. ಅಂತಹ ಸಾಧನೆ ಮಾಡಿದ ಕ್ಷೇತ್ರದ ಇಬ್ಬರನ್ನು ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದು ತರೀಕೆರೆ ಹೇಳಿದರು. 

   ರಂಗ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದರಾದ ರಾಚಯ್ಯ ಸ್ವಾಮಿ, ಕೊಪ್ಪಳ ಹಾಗೂ ಹುಬ್ಬಳ್ಳಿಯ ಶ್ರೀಮತಿ ವೀಣಾ ಶರ್ಮ ಭೂಸನೂರ ಮಠ ಅವರಿಗೆ ತಲಾ ಹತ್ತು ಸಾವಿರ ನಗದು ಪುರಸ್ಕಾರ, ಸ್ಮರಣೆಕೆ ,ಪೇಟ ಹಾಗೂ ಶಾಲು ನೀಡಿ 2026 ನೇ ಸಾಲಿನ ಎಸ್ ಬಿ ಜಂಗಮಶೆಟ್ಟಿ ಮತ್ತು ಶ್ರೀಮತಿ ಸುಭದ್ರಾ ದೇವಿ ಜಂಗಮಶೆಟ್ಟಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

  ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯುಕ್ತ ರಾಜಶೇಖರ ಎಸ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ್ ಗದಗದ ನಿವೃತ್ತ ಉಪನ್ಯಾಸಕಿ ಭಾರತಿ ಮೋಹನ ಕೋಟಿ, ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ ಸುಜಾತಾ ಜಂಗಮಶೆಟ್ಟಿ, ಮಾತನಾಡಿದರು. ರಂಗಸಂಗಮ ಕಲಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಿವಗೀತಾ ಬಸವಪ್ರಭು ಉಪಸ್ಥಿತರಿದ್ದರು. ಹಿರಿಯ ಸಾಹಿತಿ ಆರ್. ಕೆ. ಹುಡಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ ಎಚ್ ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಪನ್ಯಾಸಕ ಕಪಿಲ್ ಚಕ್ರವರ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಮತ್ತು ಸಂಗಡಿಗರು ರಂಗಗೀತೆಗಳನ್ನು ಹಾಡಿದರು.

ದೈಹಿಕ ರೋಗಕ್ಕೆ ಔಷಧಿಗಳಿದ್ದರೂ ಮನಸ್ಸಿನ ರೋಗಕ್ಕೆ ಕಲೆ ದಿವ್ಯ ಔಷಧಿಯಾಗಿದ್ದು ಇಂತಹ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಸಂತೋಷವಾಗಿದೆ. ಉತ್ತರ ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಹೊರರಾಜ್ಯಗಳಲ್ಲಿ ರಂಗ ಸೇವೆ ಮಾಡಿದರು. ಈಗ ಕಲ್ಯಾಣ ಕರ್ನಾಟಕದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ 

ವೀಣಾ ಶರ್ಮಾ ಭೂಸನೂರ ಮಠ, ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ

ಕಲ್ಯಾಣ ಕರ್ನಾಟಕದ ಕಲಾವಿದರ ಕಡೆಗಣನೆಗೆ ಮನನೊಂದು 15 ವರ್ಷಗಳ ಹಿಂದೆ ರಂಗಸಂಗಮ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ರಾಜ್ಯಮಟ್ಟದ ಪ್ರಶಸ್ತಿ ಪಡೆದ ಎಲೆಮರೆಯ ರಂಗ ಕಲಾವಿದರನ್ನು ಗುರುತಿಸಿ ಅರ್ಹರಿಗೆ ಈ ಪ್ರಶಸ್ತಿಯನ್ನು ತಂದೆ ತಾಯಿಯವರ ಹೆಸರಿನಲ್ಲಿ ನೀಡಲಾಗುತ್ತಿದೆ. 

 ಡಾ. ಸುಜಾತ ಜಂಗಮಶೆಟ್ಟಿ, ನಿರ್ದೇಶಕರು ರಂಗಾಯಣ ಕಲಬುರಗಿ

ಪ್ರಶಸ್ತಿ ತೆಗೆದುಕೊಳ್ಳುವುದು ಮತ್ತು ಕೊಡುವುದು ಒಂದು ಸಾಮಾಜಿಕ ಜವಾಬ್ದಾರಿಯಾಗಿದೆ ಕರ್ನಾಟಕ ಸರ್ಕಾರ ಹತ್ತಾರು ಕೋಟಿ ವೆಚ್ಚ ಮಾಡಿ ಪ್ರಶಸ್ತಿ ನೀಡುತ್ತಿದ್ದರು ಇಂತಹ ಸಂಘ ಸಂಸ್ಥೆಗಳ ಪ್ರಶಸ್ತಿ ಮಹತ್ವದ್ದಾಗಿದ್ದು ಕಲಾವಿದರಿಗೆ ಇನ್ನಷ್ಟು ಗೌರವ ತಂದು ಕೊಡುತ್ತಿದೆ. 

 ಬಸವರಾಜ ಹೂಗಾರ, ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಕಲಬುರಗಿ