ಸಿದ್ದರಾಮಯ್ಯ ಆಡಳಿತದ ಜಾತಿ ಸಮೀಕ್ಷೆ ಫಲಶ್ರುತಿ ಶೂನ್ಯ: ಪ್ರಮೋದ್ ಮಧ್ವರಾಜ್

ಸಿದ್ದರಾಮಯ್ಯ ಆಡಳಿತದ ಜಾತಿ ಸಮೀಕ್ಷೆ ಫಲಶ್ರುತಿ ಶೂನ್ಯ: ಪ್ರಮೋದ್ ಮಧ್ವರಾಜ್

ಸಿದ್ದರಾಮಯ್ಯ ಆಡಳಿತದ ಜಾತಿ ಸಮೀಕ್ಷೆ ಫಲಶ್ರುತಿ ಶೂನ್ಯ: ಪ್ರಮೋದ್ ಮಧ್ವರಾಜ್

600 ಕೋಟಿ ವೆಚ್ಚ ನೀರಿನಲ್ಲಿ ಹೋಮ: ಮಧುಸೂದನ್ ನಾಯಕ್ ವರದಿ ಬಹಿರಂಗಪಡಿಸಲು ತೀವ್ರ ಹೋರಾಟ ಎಚ್ಚರಿಕೆ

ಕಲಬುರಗಿ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಹಿಂದುಳಿದ ವರ್ಗಗಳ ರಕ್ಷಕರು ಹಾಗೂ ಅಭಿವೃದ್ಧಿಯ ಹರಿಕಾರರು ಎಂದು ಹೇಳುತ್ತಲೇ 600 ಕೋಟಿ ರೂಪಾಯಿ ವೆಚ್ಚ ಮಾಡಿ ಆಯೋಗಗಳು ಸಲ್ಲಿಸಿದ ವರದಿ ಫಲ ಶ್ರುತಿ ಶೂನ್ಯವಾಗಿದ್ದು ಹಿಂದುಳಿದ ವರ್ಗದ ವರಿಗೆ ಭಾರೀ ಮೋಸವೆಸಗಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಹಿಂದುಳಿದ ವರ್ಗಗಳ ನಾಯಕರಾದ ಪ್ರಮೋದ್ ಮಧ್ವರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

  ಕಲಬರಗಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ ಶೇ. 35ರಷ್ಟು ಇರುವ ಪ್ರವರ್ಗ ಒಂದು ಮತ್ತು ಎರಡು ಹಾಗೂ ಹಿಂದುಳಿದ ವರ್ಗಗಳ ಕುರಿತಾದ ಕಾಂತರಾಜ್ ವರದಿ, ಜಯಪ್ರಕಾಶ್ ಹೆಗಡೆ ವರದಿ ಮಧುಸೂದನ ನಾಯಕ್ ವರದಿ ಸಿದ್ಧಪಡಿಸಲು 600 ಕೋಟಿ ರೂಪಾಯಿ ವೆಚ್ಚ ಮಾಡಿ ಜನರ ತೆರಿಗೆ ಹಣವನ್ನು ಲೂಟಿ ಮಾಡಿದ ಸಿದ್ದರಾಮಯ್ಯ ಅವರು 12 ವರ್ಷಗಳ ಕಾಲ ಜಾತಿ ಗಣತಿ ಹೆಸರಲ್ಲಿ ಕಾಲಹರಣ ಮಾಡಿದರು. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಇದರಿಂದ ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ದ್ರೋಹ ಬಗೆದಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಹುಲ್ ಆದೇಶ ನೀಡಿದ ಮರುದಿನ ಮೇ 27ರಂದು ತರಾತುರಿಯಲ್ಲಿ ಮಧುಸೂದನ ನಾಯಕ್ ವರದಿಯನ್ನು ಸ್ವೀಕರಿಸುವ ಶಾಸ್ತ್ರ ಮಾಡಿ ಮುಂಗೈಗೆ ಬೆಲ್ಲ ಹಚ್ಚುವ ರಾಜಕೀಯ ಹುನ್ನಾರ ನಡೆಸಿದರು.ಯಾವುದೇ ಬದ್ಧತೆಯು ಇಲ್ಲದೆ ವರದಿಯನ್ನು ಬಹಿರಂಗಪಡಿಸಲು ಕೂಡ ಸಾಧ್ಯವಾಗಿಲ್ಲ.ಅವರು ಹಿಂದುಳಿದ ವರ್ಗಗಳಿಗೆ ಕಣ್ಣಿಗೆ ಮಣ್ಣೆರಚ್ಚುವ ಕೆಲಸ ಮಾಡಿದರು ಎಂದು ಖಾರವಾಗಿ ನುಡಿದರು. ನೂತನ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಕೂಡ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಮಧ್ವರಾಜ್ ದೂರಿದರು. ಮಧುಸೂದನ್ ನಾಯಕ ವರದಿ ವಿಷಯ ಈಗ ಹೈಕೋರ್ಟು ಮೆಟ್ಟಿಲೇರಿದ್ದು ವಾದವನ್ನು ಆಗಸ್ಟ್ 20 ಕ್ಕೆ ಮುಂದೂಡಲಾಗಿದೆ. ಸಿದ್ದರಾಮಯ್ಯ ಅವರು ಈಗ ಹೈಕೋರ್ಟಿನತ್ತ ಬೊಟ್ಟು ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು. 

    2027ರ ಜನಗಣತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾತಿ ಸಮೀಕ್ಷೆ ನಡೆಸಲು ಸೂಚನೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದ್ದು ಹಿಂದುಳಿದ ವರ್ಗದವರಿಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡಲು ಇದರಿಂದ ಸಾಧ್ಯ. 1931 ರಲ್ಲಿ ಬ್ರಿಟಿಷರು ಮಾಡಿದ ಕೊನೆಯ ಜಾತಿಗಣತಿಯ ನಂತರ ಪ್ರಧಾನಮಂತ್ರಿಯವರು ನೂರು ವರ್ಷಗಳ ನಂತರ ಮತ್ತೆ ಜಾತಿಗಣತಿಗೆ ಆದೇಶ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವು ಜಾತಿ ಗಣತಿ ವರದಿ ಬಹಿರಂಗಪಡಿಸಲು ಒತ್ತಾಯಿಸಿ ದೊಡ್ಡ ಮಟ್ಟದಲ್ಲಿ ಹಿಂದುಳಿದ ವರ್ಗಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

   ಪತ್ರಿಕಾಗೋಷ್ಠಿಯಲ್ಲಿ ಓಬಿಸಿ ಮೋರ್ಚಾದ ವೆಂಕಟೇಶ ಉಪ್ಪಾರ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್, ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಈರಣ್ಣ ಹಡಪದ, ಲಿಂಗರಾಜ ಬಿರಾದಾರ, ವಿದ್ಯಾಧರ ಮಂಗಳೂರ, ಸಂಗಣ್ಣ ಹುಳಗುಳಕರ, ದೇವೇಂದ್ರ ಮತಕೂಡ, ಶರಣಗೌಡ ಪಾಟೀಲ್ ಬಸವರಾಜ ಗುಂಡಲಗೇರಿ ರೇವಣಸಿದ್ದಪ್ಪ ಸಂಕಾಲಿ ಮತ್ತಿತರರು ಇದ್ದರು.