ಬ್ಯಾಂಕ್ ಆಫ್ ಬರೋಡ ಸಂಸ್ಥಾಪನಾ ದಿನಾಚರಣೆ: ಕಲಬುರಗಿ ಉದ್ಯಮಿಗಳಿಂದ ಅಧಿಕಾರಿಗಳಿಗೆ ಅಭಿನಂದನೆ
ಬ್ಯಾಂಕ್ ಆಫ್ ಬರೋಡ ಸಂಸ್ಥಾಪನಾ ದಿನಾಚರಣೆ: ಕಲಬುರಗಿ ಉದ್ಯಮಿಗಳಿಂದ ಅಧಿಕಾರಿಗಳಿಗೆ ಅಭಿನಂದನೆ
ಕಲಬುರಗಿ, ಜುಲೈ 21:ಬ್ಯಾಂಕ್ ಆಫ್ ಬರೋಡಾದ 119ನೇ ಸಂಸ್ಥಾಪನಾ ದಿನಾಚರಣೆಯ ಶುಭ ಸಂದರ್ಭದಲ್ಲಿ, ಕಲಬುರಗಿಯ ನಾಗನಹಳ್ಳಿ ರಿಂಗ್ ರಸ್ತೆಯಲ್ಲಿರುವ ಹೋಟೆಲ್ ಬೃಂದಾವನ ಗ್ರ್ಯಾಂಡ್‌ನ ‘ಬಲ್ ದೇವ್’ ಸಭಾಂಗಣದಲ್ಲಿ ಸೋಮವಾರ (ಜುಲೈ 20) ವಿಶೇಷ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕಡೇಚೂರ್ ಗ್ರೂಪ್ ಆಫ್ ಹೋಟೆಲ್ ಹಾಗೂ ನಗರದ ಪ್ರಮುಖ ಉದ್ಯಮಿಗಳ ವತಿಯಿಂದ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ಅಮಿತ್ ಶೆಟ್ಟಿ ಹಾಗೂ ಪ್ರಾದೇಶಿಕ ಉಪ ಮುಖ್ಯಸ್ಥರಾದ ಭೀಮಾಶಂಕರ್ ಅವರನ್ನು ಶಾಲು, ಹಾರ ನೀಡಿ ಸನ್ಮಾನಿಸಲಾಯಿತು. ನಂತರ ಎಲ್ಲರೂ ಒಟ್ಟಾಗಿ ಕೇಕ್ ಕತ್ತರಿಸುವ ಮೂಲಕ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಿ, ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಅವರು ಮಾತನಾಡಿ, ಬ್ಯಾಂಕ್ ಆಫ್ ಬರೋಡಾ 1908 ಜುಲೈ20ಕ್ಕೆ ಪ್ರಾರಂಭಗೊಂಡು ಶತಮಾನ ದಾಟಿದ ಈ ಬ್ಯಾಂಕ್ ಆಫ್ ಬರೋಡವನ್ನು ಮಹಾರಾಜ ಸರ್ ಸಯ್ಯಾಜಿ ರಾವ್ ಗಾಯಕ್ವಾಡ-3 ಅವರು ಸ್ಥಾಪನೆ ಮಾಡಿದ್ದರು.ಇದನ್ನು 1969ರಲ್ಲಿ ರಾಷ್ಟ್ರೀಕರಣ ಗೊಳಿಸಲಾಗಿತ್ತು. ಈ ಬ್ಯಾಂಕಿನ ಜೊತೆ ವಿಲೀನಗೊಂಡ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ನಂತರ ತನ್ನ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸುಮಾರು 54 ಶಾಖೆಗಳ ಮೂಲಕ ಬ್ಯಾಂಕ್ ಆರ್ಥಿಕ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದೆ," ಎಂದು ಶ್ಲಾಘಿಸಿದರು. ಅಲ್ಲದೆ, ರಾಷ್ಟ್ರದ ಆರ್ಥಿಕ ಪ್ರಗತಿಯಲ್ಲಿ ಈ ಭಾಗದ ಶಾಖೆಗಳು ಇನ್ನಷ್ಟು ಉತ್ತಮ ಸೇವೆಗಳನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಈ ಅಭಿನಂದನಾ ಸಮಾರಂಭದಲ್ಲಿ ಕಡೇಚೂರ್ ಹೋಟೆಲ್ ಗ್ರೂಪ್‌ನ ನಿರ್ದೇಶಕರಾದ ಮಹೇಶ್ ಕಡೇಚೂರ್, ಉದ್ಯಮಿ ಸಾಹಿಲ್ ಜೈನ್, ಹಾಗೂ ಜನರಲ್ ಮ್ಯಾನೇಜರ್ ಚೆನ್ನಬಸವ ತೊರವಿ ಅವರು ಉಪಸ್ಥಿತರಿದ್ದರು.
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಗೂ ಅವರ ಕುಟುಂಬಸ್ಥರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.
