ಸಾಲದ ಸಂಕಷ್ಟಕ್ಕೆ ಬಲಿಯಾದ 19 ವರ್ಷದ ಯುವ ರೈತ ಯಲ್ಲಾಲಿಂಗ

ಸಾಲದ ಸಂಕಷ್ಟಕ್ಕೆ ಬಲಿಯಾದ 19 ವರ್ಷದ ಯುವ ರೈತ ಯಲ್ಲಾಲಿಂಗ

 ಸಾಲದ ಸಂಕಷ್ಟಕ್ಕೆ ಬಲಿಯಾದ 19 ವರ್ಷದ ಯುವ ರೈತ ಯಲ್ಲಾಲಿಂಗ

ಆಳಂದ್, ಜುಲೈ 1: ಸಾಲದ ಹೊರೆಯಿಂದ 19 ವರ್ಷದ ಯುವ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಆಳಂದ ತಾಲೂಕಿನ ಬೆಣ್ಣೆಶಿರೂರು ಗ್ರಾಮದಲ್ಲಿ ನಡೆದಿದೆ.

ಮೃತ ಯುವ ರೈತನನ್ನು ಯಲ್ಲಾಲಿಂಗ ಬಂಡಗಾರ (19) ಎಂದು ಗುರುತಿಸಲಾಗಿದೆ. ಕೃಷಿ ಚಟುವಟಿಕೆಗಳಿಗಾಗಿ ಬ್ಯಾಂಕ್‌ನಿಂದ ಕೃಷಿ ಸಾಲ ಪಡೆದಿದ್ದ ಯಲ್ಲಾಲಿಂಗ, ಕೃಷಿ ವೆಚ್ಚ ಹಾಗೂ ಇತರೆ ಅಗತ್ಯಗಳಿಗಾಗಿ ಖಾಸಗಿಯಾಗಿ ಸಾಲಕೂಡ ಮಾಡಿದ್ದ ಎನ್ನಲಾಗಿದೆ.

ಸಾಲದ ಒತ್ತಡಕ್ಕೆ ಮಾನಸಿಕವಾಗಿ ನೊಂದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದು ನಿಂಬರ್ಗಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಿಸಾನ್ ಸಭಾ ಜಿಲ್ಲಾ ಅಧ್ಯಕ್ಷ ಭೀಮಶಂಕರ್ ಮಾಡ್ಯಾಳ್, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಮೃತ ರೈತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಕುಟುಂಬದ ಸದಸ್ಯರಿಗೆ ಅಗತ್ಯ ನೆರವು ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.